Recent Posts

Monday, January 20, 2025
ಬೆಂಗಳೂರುರಾಜಕೀಯರಾಜ್ಯಸುದ್ದಿ

ಕೆ.ಕೆ.ಗೆಸ್ಟ್ ಹೌಸ್ ನಿಂದ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ನೇತೃತ್ವದ ಸಭೆ ಶಿಫ್ಟ್: ಸಿಎಂ ಯಡಿಯೂರಪ್ಪ ಪರ, ವಿರೋಧಿ ಬಣದಿಂದ ಇಂದು ಭೇಟಿ- ಮಾತುಕತೆ? – ಕಹಳೆ ನ್ಯೂಸ್

ಬೆಂಗಳೂರು: ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಅವರು ಇಂದೂ ಸಹ ಬಿಜೆಪಿ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರೊಂದಿಗೆ ಸರಣಿ ಸಮಾಲೋಚನಾ ಸಭೆಗಳನ್ನು ಮುಂದುವರೆಸಲಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರೊಂದಿಗೆ ನಿನ್ನೆ ಸಭೆ ನಡೆಸಿದ ಅವರು, ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು. ಮತ್ತು ಸಚಿವರು ಇನ್ನಷ್ಟು ಕ್ರಿಯಾಶೀಲರಾಗಬೇಕು ಎಂದು ಸೂಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಕೊನೆ ಕ್ಷಣದಲ್ಲಿ ಕೆ.ಕೆ.ಗೆಸ್ಟ್ ಹೌಸ್ ನಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆಯುವ ಸಭೆ ವರ್ಗಾವಣೆಯಾಗಿದೆ. ಸಭೆಯಲ್ಲಿ ಭಾಗವಹಿಸಲು ಈಗಾಗಲೇ ಅರುಣ್ ಸಿಂಗ್ ಬಿಜೆಪಿ ಕಚೇರಿಗೆ ಆಗಮಿಸಿದ್ದಾರೆ.ಶಾಸಕರ ಅಭಿಪ್ರಾಯಗಳನ್ನು ಗೌಪ್ಯವಾಗಿಡಲು ಬಿಜೆಪಿ ಕಚೇರಿಯಲ್ಲಿಯೇ ಸಭೆ ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಅರುಣ್ ಸಿಂಗ್ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಮಲ ಪಡೆಯಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ ದಟ್ಟವಾಗಿ ಬೀಸುತ್ತಿರುವಾಗ ಇಂದಿನ ಸಭೆಯಲ್ಲಿ ಯಡಿಯೂರಪ್ಪ ವಿರೋಧಿ ಬಣದ ಶಾಸಕರು ಅರುಣ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು, ಮನದ ಇಂಗಿತಗಳನ್ನು, ಪಕ್ಷದೊಳಗಿನ ಸಮಸ್ಯೆಗಳನ್ನು ಹೇಳಿಕೊಳ್ಳಲಿದ್ದಾರೆಯೇ ಎಂದು ಕುತೂಹಲ ಮೂಡಿದೆ.ಇನ್ನೊಂದೆಡೆ ಸಿಎಂ ಆಪ್ತ ಬಣ ಇಂದು ಮಧ್ಯಾಹ್ನ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಯಡಿಯೂರಪ್ಪ ಆಪ್ತ ಬಣದ ಶಾಸಕರು ಎಂ.ಪಿ.ರೇಣುಕಾಚಾರ್ಯ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಸಹ ತಿಳಿದುಬಂದಿದೆ. ಇಂದು ಎಲ್ಲಾ ಶಾಸಕರಿಗೆ ದಾವಣಗೆರೆ ಬೆಣ್ಣೆ ದೋಸೆ ಮತ್ತು ತಟ್ಟೆ ಇಡ್ಲಿಯನ್ನು ಉಪಾಹಾರಕ್ಕೆ ಸೇವಿಸಲು ರೇಣುಕಾಚಾರ್ಯ ಸಿದ್ದ ಮಾಡಿದ್ದರು. ಆದರೆ ಸಿಎಂ ಯಡಿಯೂರಪ್ಪನವರು ಈ ಸಮಯದಲ್ಲಿ ಉಪಾಹಾರ ಸೇವಿಸಿಕೊಂಡು ಕೂರುವುದು ಬೇಡ ಎಂದು ಸೂಚನೆ ನೀಡಿದರು ಎನ್ನಲಾಗುತ್ತಿದೆ. ಹೀಗಾಗಿ ಸದ್ಯ ರೇಣುಕಾಚಾರ್ಯ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ರದ್ದಾಗಿದೆ.

ಇಂದಿನ ಅರುಣ್ ಸಿಂಗ್ ನೇತೃತ್ವದ ಸಭೆಯಲ್ಲಿ ರಾಜ್ಯದ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಭಾಗವಹಿಸುತ್ತಿದ್ದಾರೆ. ಅದರಲ್ಲಿ ಸಿಎಂ ಯಡಿಯೂರಪ್ಪ ನಾಯಕತ್ವ ವಿರೋಧಿಗಳು ಎಂದು ಗುರುತಿಸಿಕೊಂಡಿರುವ ಅರವಿಂದ ಬೆಲ್ಲದ್, ಸಿ ಪಿ ಯೋಗೇಶ್ವರ್, ಎಚ್ ವಿಶ್ವನಾಥ್ ಅರುಣ್ ಸಿಂಗ್ ಅವರಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಲಿದ್ದಾರೆಯೇ ಎಂಬುದು ಕುತೂಹಲ.

ಬಂಡಾಯ ಸಾರಿದ ಸೋಮಶೇಖರ ರೆಡ್ಡಿ: ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಕೂಡ ಈಗ ಸಿಎಂ ವಿರುದ್ಧ ತಿರುಗಿಬಿದ್ದಿದ್ದಾರೆ. ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕು, ಬಳ್ಳಾರಿ ಜಿಲ್ಲೆಗೆ ಬೇರೆ ಸಚಿವರನ್ನು ಉಸ್ತುವಾರಿ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.