ಕೋವಿಡ್ ವಿರುದ್ಧ ಹೋರಾಟಕ್ಕೆ ಯೋಗವು ಆಂತರಿಕ ಶಕ್ತಿಯನ್ನು ತುಂಬಿದೆ ; ಪ್ರಧಾನಿ ನರೇಂದ್ರ ಮೋದಿ – ಕಹಳೆ ನ್ಯೂಸ್
ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ವೈರಸ್ ವಿರುದ್ಧ ಹೋರಾಟದಲ್ಲಿ ಯೋಗವು ಜನರ ಆಂತರಿಕ ಶಕ್ತಿಯನ್ನು ತುಂಬಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಡೀ ಜಗತ್ತು ಕೊವಿಡ್-19 ಸೋಂಕಿನಿಂದ ನರಳುತ್ತಿದೆ. ದೇಶದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ. ಆದರೆ ಯೋಗ ದಿನದಂದು ಜನರ ಹುಮ್ಮಸ್ಸು, ಉತ್ಸಾಹ ಮತ್ತು ಯೋಗದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ ಎಂದರು.
ಕೋವಿಡ್ ಸೋಂಕು ಕಾಣಿಸಿಕೊಂಡಾಗ ಅದರ ವಿರುದ್ಧದ ಹೋರಾಡಲು ಯಾವುದೇ ದೇಶವು ಸಿದ್ಧವಾಗಿರಲಿಲ್ಲ. ಈ ಸಮಯದಲ್ಲಿ ಯೋಗವು ಆಂತರಿಕ ಶಕ್ತಿಯ ಮೂಲವಾಯಿತು. ಯೋಗವು ಸ್ವಯಂ ಶಿಸ್ತಿಗೆ ಸಹಾಯ ಮಾಡುತ್ತದೆ, ಈ ವೈರಸ್ ವಿರುದ್ಧ ಹೋರಾಡಬಹುದೆಂದು ಜನರಲ್ಲಿ ನಂಬಿಕೆಯನ್ನು ಹುಟ್ಟುಹಾಕಿತು. ಮುಂಚೂಣಿ ಯೋಧರು ವೈರಸ್ ವಿರುದ್ಧ ಹೋರಾಡುವಲ್ಲಿ ಯೋಗವನ್ನು ಒಂದು ಸಾಧನವನ್ನಾಗಿ ಮಾಡಿದ್ದಾರೆಂದು ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹಯೋಗದೊಂದಿಗೆ ಎಂ-ಯೋಗ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದು, ಸಾಮಾನ್ಯ ಯೋಗ ಶಿಷ್ಟಾಚಾರದ ಆಧಾರದ ಮೇಲೆ ಯೋಗ ತರಬೇತಿಯ ಹಲವು ವೀಡಿಯೊಗಳು ವಿಶ್ವದ ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಎಂದು ಪಿಎಂ ಮೋದಿ ಹೇಳಿದರು. ಇದು “ಒಂದು ಪ್ರಪಂಚ-ಒಂದು ಆರೋಗ್ಯ” ಎಂಬ ಧ್ಯೇಯವಾಕ್ಯವನ್ನು ಯಶಸ್ವಿಗೊಳಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ವಿಶ್ವದ ಹೆಚ್ಚಿನ ದೇಶಗಳಿಗೆ, ಯೋಗ ದಿನವು ಹಳೆಯ-ಸಾಂಸ್ಕೃತಿಕ ಉತ್ಸವವಲ್ಲ. ಈ ಕಷ್ಟದ ಸಮಯದಲ್ಲಿ, ತುಂಬಾ ತೊಂದರೆಯಲ್ಲಿರುವ ಜನರು ಅದನ್ನು ಮರೆತು ಬಿಡಬಹುದು, ನಿರ್ಲಕ್ಷಿಸಬಹುದು. ಆದರೆ ಇದಕ್ಕೆ ವಿರುದ್ಧವಾಗಿ, ಯೋಗದ ಬಗ್ಗೆ ಜನರ ಉತ್ಸಾಹ ಹೆಚ್ಚಾಗಿದೆ, ಯೋಗದ ಮೇಲಿನ ಪ್ರೀತಿ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.