ಜನರಿಂದ, ಜನರಿಗಾಗಿ, ಜನರಿಗೋಸ್ಕರ.. ಸುಳ್ಯದ ಮೊಗ್ರದಲ್ಲಿ ನಿರ್ಮಾಣವಾಯಿತು ‘ಗ್ರಾಮ ಸೇತು’ ಕಾಲು ಸಂಕ – ಕಹಳೆ ನ್ಯೂಸ್
ಸುಳ್ಯ:
ಸುಮಾರು ೧,೩೦೦ ರಿಂದ ೧,೫೦೦ ಜನಸಂಖ್ಯೆ ಇರುವ ಸುಳ್ಯದ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಪುಟ್ಟ ಹಳ್ಳಿ. ಈ ಹಳ್ಳಿಯ ವ್ಯಾಪ್ತಿಗೆ ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಸೇರಿದಂತೆ ಒಂದೆರಡು ಪುಟ್ಟ ಪುಟ್ಟ ಊರುಗಳೂ ಬರುತ್ತದೆ. ಈ ಊರುಗಳ ಕೇಂದ್ರ ಮೊಗ್ರ. ಇಲ್ಲಿನ ಮತದಾನ ಕೇಂದ್ರವೂ ಮೊಗ್ರ ಶಾಲೆಯಾಗಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಇಲ್ಲಿಗೆ ಸರಿಯಾದ ಸಂಪರ್ಕದ ವ್ಯವಸ್ಥೆ ಇರಲಿಲ್ಲ. ಇದೀಗ ಊರಿನ ಜನರೇ ಜನರಿಗಾಗಿ ‘ಗ್ರಾಮ ಸೇತು’ ಎಂಬ ಹೆಸರಿನಲ್ಲಿ ಕಿರು ಸೇತುವೆ (ಕಾಲು ಸಂಕ) ನಿರ್ಮಿಸಿದ್ದಾರೆ.
ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಮೊಗ್ರ ಸರ್ಕಾರಿ ಶಾಲೆ, ಆರೋಗ್ಯ ಉಪಕೇಂದ್ರ, ಅಂಗನವಾಡಿ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ, ಭಜನಾ ಮಂದಿರ ಇದೆ. ಆದರೆ ಈ ಕೇಂದ್ರವನ್ನು ಸಂಪರ್ಕಿಸಲು ಬಹುಪಾಲು ಜನರಿಗೆ ಕಷ್ಟವಾಗುತ್ತದೆ. ಕಾರಣ ಇಲ್ಲಿ ಹರಿಯುವ ಹೊಳೆ. ಇದುವರೆಗೂ ಈ ಹೊಳೆಗೆ ಸೇತುವೆ ಆಗಿಲ್ಲ. ಈ ಕಾರಣದಿಂದ ಶಾಲೆಗೆ ಬರುವ ಮಕ್ಕಳಿಗೆ ಹೊಳೆ ದಾಟಲು ಕಷ್ಟವಾಗುತ್ತದೆ. ಮಹಿಳೆಯರಿಗೂ ಸಹ ಹೊಳೆ ದಾಟಲು ಆಗುವುದಿಲ್ಲ. ಹೀಗಾಗಿ ಸೇತುವೆ ರಚನೆಯಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇಲ್ಲಿನ ಜನರಿಂದ ಇದೆ. ೨೦೦೬ರಿಂದಲೂ ಪತ್ರಿಕೆ, ದೃಶ್ಯ ಮಾಧ್ಯಮಗಳ ಮೂಲಕ ಹಾಗೂ ನೇರವಾಗಿಯೂ ಜನಪ್ರತಿನಿಧಿಗಳಿಗೆ ಇಲ್ಲಿನ ಜನರು ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಸೇತುವೆ ರಚನೆ ಮಾತ್ರ ಆಗಿರಲಿಲ್ಲ. ಜನಪ್ರತಿನಿಧಿಗಳು ಚುನಾವಣೆಯ ಹೊತ್ತಿನಲ್ಲಿ ಭರವಸೆ ನೀಡಿ ಹೋಗುತ್ತಿದ್ದರು. ಆದರೆ ಸೇತುವೆ ಮಾತ್ರ ಕನಸಾಗಿಯೇ ಉಳಿದಿತ್ತು.
ಅಡಿಕೆ ಮರದ ಬದಲಾಗಿ ಕಬ್ಬಿಣದ ಕಾಲು ಸಂಕ:
ಈ ಹೊಳೆ ದಾಟಲು ಗ್ರಾಮ ಪಂಚಾಯತ್ ಅಡಿಕೆ ಮರದ ಪಾಲವನ್ನು ಹಾಕುತ್ತಿತ್ತು. ಇದರ ಮೇಲೆ ಶಾಲಾ ಮಕ್ಕಳು, ಮಹಿಳೆಯರೂ ಅಪಾಯಕಾರಿ ರೀತಿಯಲ್ಲಿ ದಾಟಬೇಕಿತ್ತು. ಊರಿನವರ ಸುರಕ್ಷತೆ ಹಾಗೂ ಮಳೆಗಾಲದಲ್ಲಿ ದ್ವಿಚಕ್ರ ಸವಾರರಿಗೆ ಅನುಕೂಲವಾಗುವಂತೆ ಈ ಅಡಿಕೆ ಮರದ ಪಾಲದ ಬದಲಾಗಿ ಕಬ್ಬಿಣದ ಕಾಲು ಸಂಕವನ್ನು ಊರವರೇ ನಿರ್ಮಿಸಿದ್ದಾರೆ.
ಜನರೇ ನಿರ್ಮಿಸಿದ ಸೇತುವೆದ್ವಿಚಕ್ರ ವಾಹನಸಹಿತ ಊರಿನ ಜನರು ಭದ್ರತೆಯಿಂದ ನಡೆದಾಡುವಂತೆ ಮಾಡಲು ಯೋಜನೆ ರೂಪಿಸಿದ್ದರು. ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಳ್ಯದ ಗಿರೀಶ್ ಭಾರಧ್ವಾಜ್ ಅವರ ಪುತ್ರ ಪತಂಜಲಿ ಭಾರಧ್ವಾಜ್ ಅವರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗುವಂತೆ ಕಬ್ಬಿಣದ ಕಾಲು ಸಂಕ ರಚನೆ ಮಾಡಲು ಮಾತುಕತೆ ನಡೆಸಿ ಅಂದಾಜುಪಟ್ಟಿ ತಯಾರಿಸಿ ಕಬ್ಬಿಣದ ಕಾಲು ನಿರ್ಮಿಸಿದ್ದಾರೆ.ಇದಕ್ಕಾಗಿ ಊರಿನ ಜನರು ಶ್ರಮದಾನದ ಮೂಲಕ ನೆರವು ಹಾಗೂ ಧನಸಹಾಯ ಮಾಡಿದ್ದರೆ, ಪರವೂರಿನ ಅನೇಕ ದಾನಿಗಳು ನೆರವು ನೀಡಿದ್ದಾರೆ. ಕೆಲವು ಕಂಪನಿಗಳು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು ೧ ಲಕ್ಷ ರೂ.ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ಸರ್ಕಾರದ ಹಾಗೂ ಸ್ಥಳೀಯ ಯಾವುದೇ ಇಲಾಖೆ ನೆರವು ಪಡೆಯದೆ ಈ ಸೇತುವೆ ನಿರ್ಮಾಣ ಮಾಡಲಾಗಿದೆ.
ಜನರೇ ನಿರ್ಮಿಸಿದ ಸೇತುವೆಜೂ.೫ ರಂದು ಅಂದಾಜು ಪಟ್ಟಿ ತಯಾರಿಸಿ ಜೂ.೨೪ ರಂದು ಕಾಮಗಾರಿ ಮುಕ್ತಾಯಗೊಂಡಿದೆ. ಈ ಸೇತುವೆ ಸುಮಾರು ೨೦ ಮೀಟರ್ ಉದ್ದವಿದ್ದು ಸುಮಾರು ೧.೨ ಮೀಟರ್ ಅಗಲವಿದೆ. ನಡೆದಾಡುವುದಕ್ಕೆ ಮಾತ್ರವಲ್ಲದೆ ದ್ವಿಚಕ್ರ ವಾಹನಗಳು ಸಹ ಓಡಾಡಬಹುದಾಗಿದೆ