ಮಂಗಳೂರು ವಕೀಲರ ಸಂಘದಿಂದ ಬೃಹತ್ ಲಸಿಕಾ ಅಭಿಯಾನ ; 500ಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನ್ – ಕಹಳೆ ನ್ಯೂಸ್
ಮಂಗಳೂರು: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಮಂಗಳೂರು ವಕೀಲರ ಸಂಘದಿಂದ ಇಂದು ಬೃಹತ್ ಲಸಿಕಾ ಅಭಿಯಾನ ನಡೆಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಅವರ ಮಾರ್ಗದರ್ಶನದಲ್ಲಿ ಬೃಹತ್ ಲಸಿಕಾ ಅಭಿಯಾನ ನಡೆಸಲಾಯಿತು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ನಾಲ್ಕನೇ ಅಭಿಯಾನ ಇದಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಫಲಾನುಭವಿಗಳು ಲಸಿಕೆ ಪಡೆದರು. 18 ವಯಸ್ಸಿನ ಮೇಲ್ಪಟ್ಟ ವಕೀಲರಿಗೆ, 45 ವರ್ಷ ಮೇಲ್ಪಟ್ಟ ವಕೀಲರಿಗೆ ಇದುವರೆಗೆ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ವಕೀಲರ ಕುಟುಂಬ ಸದಸ್ಯರು ಮತ್ತು ವಕೀಲರ ಕಚೇರಿ ಸಿಬ್ಬಂದಿಗೆ ಲಸಿಕೆ ನೀಡಲು ಅವಕಾಶ ಒದಗಿಸಲಾಗಿತ್ತು.
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸತತವಾಗಿ ಲಸಿಕೆ ನೀಡಲಾಗಿದ್ದು, 500ಕ್ಕೂ ಅಧಿಕ ಮಂದಿ ವಕೀಲರು, ಕುಟುಂಬಸ್ಥರು ಮತ್ತು ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ಈ ಲಸಿಕಾ ಅಭಿಯಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅವಿರತವಾಗಿ ಭಾಗವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್.ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಘವೇಂದ್ರ, ಖಜಾಂಚಿ ಅರುಣಾ ಬಿ.ಪಿ., ಕಾರ್ಯದರ್ಶಿ ಶರ್ಮಿಳಾ ಇದ್ದರು.