ಬಡರೋಗಿಗಳ ಚಿಕಿತ್ಸೆಗೆ ವೈದ್ಯರ ದಿನದಂದು, ಜನಸ್ನೇಹಿ ವೈದ್ಯ ಡಾ. ಎಂ.ಕೆ. ಪ್ರಸಾದ್ ಅವರ ಮೂಲಕ ಪಾಕೆಟ್ ಮನಿ ಹಸ್ತಾಂತರಿಸಿ, ಜನ್ಮದಿನ ಆಚರಿಸಿದ ಪುತ್ತೂರಿನ ಬಾಲಕಿ ದಿಶಾ – ಕಹಳೆ ನ್ಯೂಸ್

ಪುತ್ತೂರು, ಜು.02 : ಪುತ್ತೂರಿನ ವಿದ್ಯಾರ್ಥಿನಿಯೊಬ್ಬಳು ತನ್ನ ಅಜ್ಜ, ಅಜ್ಜಿ, ಮಾವ, ಅಪ್ಪ, ಅಮ್ಮ ನೀಡಿದ್ದ ಪಾಕೆಟ್ ಮನಿಯನ್ನು ಕೂಡಿಟ್ಟು ತನ್ನ ಹುಟ್ಟುಹಬ್ಬದ ಪ್ರಯುಕ್ತ ಬಡರೋಗಿಗಳ ಚಿಕಿತ್ಸೆಗಾಗಿ ನೀಡಿದ್ದಾಳೆ.
ಪುತ್ತೂರಿನ ದಿಶಾ ವೈದ್ಯರ ದಿನವಾದ ಗುರುವಾರ ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ.ಎಂ.ಕೆ.ಪ್ರಸಾದ್ ಅವರಿಗೆ 10 ಸಾವಿರದಷ್ಟು ಹಣ ನೀಡುವ ಮಾಡುವ ಮೂಲಕ ಜನ್ಮದಿನವನ್ನು ಆಚರಿಸಿಕೊಂಡಿದ್ದಾಳೆ.
ನೆಹರೂನಗರದ ವಿವೇಕಾನಂದ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿಯಾಗಿರುವ ದಿಶಾ, ಯಕ್ಷಗಾನ ಕಲಾವಿದರಾಗಿದ್ದ ಬನ್ನೂರಿನ ದಿವಂಗತ ಶ್ರೀಧರ್ ಭಂಡಾರಿ ಅವರ ಮೊಮ್ಮಗಳು, ಉದ್ಯಮಿ ದೀಪಕ್ ಶೆಟ್ಟಿ ಮತ್ತು ಪ್ರಧಾನಮಂತ್ರಿ ಜನೌಷಧಿ ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ಡಾ.ಅನಿಲಾ ದಂಪತಿಯ ಪುತ್ರಿ.
ಇನ್ನು ಕೊರೊನಾ ಸಂದರ್ಭದಲ್ಲಿ ಬಡ ರೋಗಿಗಳು ಔಷಧಿ ವೆಚ್ಚ ಭರಿಸಲು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳನ್ನು ಪತ್ರಿಕೆ, ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದ ದಿಶಾ, ಬಡರೋಗಿಗಳಿಗೆ ನೆರೆವಾಗಲೆಂದು ತಾನು ಕೂಡಿಟ್ಟಿದ್ದ ಹಣವನ್ನು ಡಾ.ಎಂ.ಕೆ.ಪ್ರಸಾದ್ ಅವರಿಗೆ ಹಸ್ತಾಂತರಿಸಿದ್ದಾಳೆ.
ನನ್ನ ಹುಟ್ಟುಹಬ್ಬದ ಪ್ರಯುಕ್ತ ತಾನು ಕೂಡಿಟ್ಟಿದ್ದ ಹಣದ ಪೊಟ್ಟಣವನ್ನು ವೈದ್ಯರಿಗೆ ನೀಡಿ, ಆ ಹಣದಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಂತೆ ಕೇಳಿಕೊಂಡಿದ್ದೇನೆ ಎಂದಳು ದಿಶಾ ಹೇಳಿದ್ದಾರೆ.