ಮಂಗಳೂರು: ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡು ಅದರ ಪರಿಶೀಲನೆ ಸಂದರ್ಭದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್ ಡಿಪಿಐ ಹೊಸ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮತ್ತು ಅಲ್ಪಸಂಖ್ಯಾತ ಮತಗಳ ವಿಭಜನೆಯನ್ನು ತಪ್ಪಿಸುವ ಉದ್ದೇಶದಿಂದ ಜಾತ್ಯತೀತ ಶಕ್ತಿಗಳಿಗೆ ಬೆಂಬಲ ಎಂಬ ಮಾತುಗಳನ್ನಾಡಿದೆ.
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ ಡಿಪಿಐ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿತ್ತು. ಆದರೆ, ಈ ಬಾರಿ ಬಂಟ್ವಾಳದಲ್ಲಿ ಮಾತ್ರ ಆ ಪಕ್ಷ ತನ್ನ ಹುರಿಯಾಳನ್ನು ಕಣಕ್ಕಿಳಿಸಿತ್ತು. ರಿಯಾಜ್ ಫರಂಗಿಪೇಟೆ ಉಸ್ತುವಾರಿ ಸಚಿವ ರಮಾನಾಥ ರೈ ವಿರುದ್ಧ ಅಭ್ಯರ್ಥಿಯಾಗಿ ಪ್ರಚಾರ ಕಾರ್ಯ ನಡೆಸಿದ್ದರು.
ಇದೀಗ, ಏಕೈಕ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುವ ಬಗ್ಗೆ ಎಸ್ ಡಿಪಿಐ ಚಿಂತನೆ ನಡೆಸಿದೆ. ಮೂಡಬಿದಿರೆ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುವುದು ಮತ್ತು ಉಳಿದೆಡೆ ಸಮರ್ಥ ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪಕ್ಷ ಹೇಳಿಕೊಂಡಿದೆ.
ಯಾರಿಗೆ ನಷ್ಟ? ಯಾರಿಗೆ ಲಾಭ
ತಾನು ಹಿಂದೂ ಕೋಮುವಾದಿ ಪಕ್ಷ ಮತ್ತು ಮುಸ್ಲಿಂ ಕೋಮುವಾದಿ ಪಕ್ಷ ಎರಡನ್ನೂ ವಿರೋಧಿಸುತ್ತೇನೆ ಎಂಬುದಾಗಿ ಉಸ್ತುವಾರಿ ಸಚಿವ ರಮಾನಾಥ ರೈ ಹೇಳುತ್ತಾ ಬಂದಿದ್ದಾರೆ. ಸಹಜವಾಗಿಯೇ ಆ ಪಕ್ಷ ಎಸ್ ಡಿಪಿಐ ಬೆಂಬಲವನ್ನು ಯಾವತ್ತೂ ಬಹಿರಂಗವಾಗಿ ಕೇಳಿಲ್ಲ. ಬಂಟ್ವಾಳ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅದರ ಬೆಂಬಲದ ಅಗತ್ಯವಿಲ್ಲ ಎಂಬುದಾಗಿ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ಧಾರೆ.
ಬಿಜೆಪಿ ಸೋಲಿಸಲು ಎಂಬ ವಾದವನ್ನು ಮುಂದಿಡುವ ಎಸ್ ಡಿಪಿಐ, ಬಿಜೆಪಿಗೆ ಮತ್ತೊಂದು ಅಸ್ತ್ರವನ್ನು ಕೊಟ್ಟಂತಾಗಿದೆ. ಕಾಂಗ್ರೆಸ್ ಗೆ ಎಸ್ ಡಿಪಿಐ ಬೆಂಬಲ ನೀಡಿದೆ ಎಂಬ ವಿಷಯವನ್ನು ಚುನಾವಣಾ ವಿಷಯವನ್ನಾಗಿ ಮಾಡಿ ಮತಗಳ ಧ್ರುವೀಕರಣ ಮಾಡುವುದು ಬಿಜೆಪಿಗೆ ಸುಲಭದ ಕೆಲಸವಾಗುತ್ತದೆ. ಪರೋಕ್ಷವಾಗಿ ಇದು ಕಾಂಗ್ರೆಸ್ ಗೆ ನಷ್ಟವೇ ಸರಿ.
ಇನ್ನು ಎಸ್ ಡಿಪಿಐಗೆ ಇದರಿಂದ ಯಾವ ಲಾಭ ಇದೆ ಎಂಬುದನ್ನು ಆ ಪಕ್ಷದ ನಾಯಕರೇ ವಿವರಿಸಬೇಕು. ಸಾಮಾಜಿಕ ಜಾಲ ತಾಣದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಮುಸ್ಲಿಂ ಮತ ಬ್ಯಾಂಕ್ ಸೃಷ್ಟಿಸಿದ್ದ ಎಸ್ ಡಿಪಿಐ ಇದ್ದಕ್ಕಿದ್ದಂತೆ ಈ ನಿಲುವು ತಾಳಿದ್ದರ ಹಿಂದೆ ಇರುವ ಒಳಗುಟ್ಟೇನು ಎಂಬುದು ರಹಸ್ಯವಾಗಿಯೇ ಉಳಿದಿದೆ.