Saturday, November 23, 2024
ಬೆಂಗಳೂರುರಾಜಕೀಯರಾಜ್ಯಸುದ್ದಿ

ನಾನು ಅತ್ಯಂತ ಸಂತೋಷದ ರಾಜಕಾರಣಿ, ನನ್ನ ಬಿಜೆಪಿ ಪಕ್ಷ, ಸಂಘ ನನಗೆ ಎಲ್ಲವನ್ನೂ ಕೊಟ್ಟಿದೆ ; ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಡಿ ವಿ ಸದಾನಂದ ಗೌಡ – ಕಹಳೆ ನ್ಯೂಸ್

ಬೆಂಗಳೂರು; ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಪುನಾರಚನೆಯಾದ ಹಿನ್ನೆಲೆಯಲ್ಲಿ ವರಿಷ್ಠರ ಸೂಚನೆಯಂತೆ ರಸಗೊಬ್ಬರ ಮತ್ತು ರಾಸಾಯನಿಕ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ ವಿ ಸದಾನಂದ ಗೌಡ ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಅವರನ್ನು ಅದ್ದೂರಿಯಾಗಿಯೇ ಸ್ವಾಗತಿಸಿದರು. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಕೂಡ ಅವರ ಮಾತಿನ ವರಸೆಯಲ್ಲಿ ಬೇಸರ, ಸಿಟ್ಟು, ಅಸಮಾಧಾನ ಕಾಣಲಿಲ್ಲ. ಒಬ್ಬ ಗೆದ್ದ ರಾಜಕೀಯ ಮುಖಂಡನಿಗೆ ಸಿಕ್ಕಿದ ಸ್ವಾಗತ ಅವರಿಗೆ ನಿನ್ನೆ ಬೆಂಗಳೂರಿಗೆ ಬಂದಿಳಿದಾಗ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಂದ ಸಿಕ್ಕಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಡಿ ವಿ ಸದಾನಂದ ಗೌಡ, ಪಕ್ಷದಲ್ಲಿ ಮುಂದೆ ಕೆಲಸ ಮಾಡಬೇಕೆಂಬ ಹಿರಿಯರ ಮಾತಿಗೆ ಬೆಲೆ ನೀಡಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ. ಇಂದು ಅಧಿಕಾರದಿಂದ ಕೆಳಗಿಳಿಯುವಾಗಲೂ ಕೂಡ ಕಾರ್ಯಕರ್ತರು, ಬೆಂಬಲಿಗರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸ್ವಾಗತಿಸಿ ಆಶೀರ್ವಾದ ಮಾಡಲು ಬಂದಿರುವುದು ನೋಡಿದಾಗ ನನಗೆ ಖುಷಿಯಾಗುತ್ತಿದೆ. ಅವರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಮುಂದೆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲಿ ನಿಮಗೆ ಮುಂದೆ ಬಹುದೊಡ್ಡ ಹುದ್ದೆಯನ್ನು ನೀಡುತ್ತಾರೆ ಎಂಬ ವದಂತಿ ಬಗ್ಗೆ ಕೇಳಿದಾಗ, ನಾನು ಯಾವುದೇ ವಿಚಾರಗಳನ್ನು ಈಗ ಪ್ರಸ್ತಾಪಿಸುವುದಿಲ್ಲ. ಪಕ್ಷದ ಚಟುವಟಿಕೆಗಳಿಗೆ, ದೊಡ್ಡ ಮಟ್ಟದಲ್ಲಿ ಸೇವೆ ಸಲ್ಲಿಸಲು ಹಿರಿಯ ನಾಯಕರ ಸೇವೆ ಪಕ್ಷಕ್ಕೆ ಬೇಕಾಗಿದೆ ಎಂದು ರಾಷ್ಟ್ರಾಧ್ಯಕ್ಷರು ಕೇಳಿಕೊಂಡಾಗ ಸಂತೋಷದಿಂದ ನಾನು ಒಪ್ಪಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ, ರಾಷ್ಟ್ರೀಯ ಅಧ್ಯಕ್ಷರು ಅಷ್ಟು ವಿಶ್ವಾಸವಿಟ್ಟು ಕರೆಯುವಾಗ ಪಕ್ಷದ ಕಾರ್ಯಕರ್ತನಾಗಿರುವುದು ಖುಷಿ ಎಂದು ನನಗೆ ಅನಿಸುತ್ತಿದೆ ಎಂದರು.

ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ: ನಾನು ಅತ್ಯಂತ ಸಂತೋಷದ ರಾಜಕಾರಣಿ, ನನ್ನ ಬಿಜೆಪಿ ಪಕ್ಷ, ಸಂಘ ನನಗೆ ಎಲ್ಲವನ್ನೂ ಕೊಟ್ಟಿದೆ. ಹಾಗಾಗಿ ಪಕ್ಷದ ವರಿಷ್ಠರ ಆದೇಶವನ್ನು ಪಾಲನೆ ಮಾಡುತ್ತೇನೆ ಎಂದರು.

ನಿಮ್ಮ ಬೆಂಬಲಿಗರು, ಕಾರ್ಯಕರ್ತರು ಡಿವಿಎಸ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಿದ್ದಾರಲ್ಲವೇ ಎಂದು ಕೇಳಿದಾಗ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. 27 ವರ್ಷಗಳಿಂದ ನಾನು ವಿವಿಧ ಹುದ್ದೆಗಳಲ್ಲಿ ಜವಾಬ್ದಾರಿಯಲ್ಲಿ ಇದ್ದೇನೆ. ವಿವಿಧ ಹಂತಗಳಲ್ಲಿ ನಮಗೆ ಬೇರೆ ಬೇರೆ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ.

ಕಾರ್ಯಕರ್ತರ ಮನಸ್ಸಿನ ಭಾವನೆಗಳನ್ನು ಹೊರಹಾಕುತ್ತಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಪ್ರೀತಿಯ ಕಾರ್ತಕರ್ತ ತನ್ನ ನಾಯಕ ದೊಡ್ಡ ನಾಯಕ ಆಗಬೇಕೆಂದು ಅಪೇಕ್ಷೆ ಪಡುವುದು ಅವನ ಮನಸ್ಸಿನ ಭಾವನೆ, ಅದು ಪ್ರಚೋದನೆಯಿಂದಾಗಿ ಅಲ್ಲ ಎಂದರು.

ಪಕ್ಷದ, ವರಿಷ್ಠರ ಅಪೇಕ್ಷೆಯಂತೆ ಮುಂದೆ ನಡೆದುಕೊಳ್ಳುತ್ತಾನೆ, ನಾನಾಗಿಯೇ ಯಾವ ಹುದ್ದೆಯನ್ನೂ ಕೇಳಿಪಡೆಯುವುದಿಲ್ಲ, ಅದರಲ್ಲಿ ಆಸಕ್ತಿಯೂ ನನಗಿಲ್ಲ, ವರಿಷ್ಠರು ಕೊಟ್ಟ ಕೆಲಸವನ್ನು ಶಿಸ್ತುಬದ್ಧವಾಗಿ ಮಾಡುತ್ತೇನೆ ಎಂದು ಸದಾನಂದ ಗೌಡ ಸುದ್ದಿಗಾರರಿಗೆ ಉತ್ತರಿಸಿದರು.