ಮದುವೆ ನಿಲ್ಲಿಸಲು ಎರಡು ವರ್ಷ ಹಿಂದಿನ ಅತ್ಯಾಚಾರ ವಿಡಿಯೋ ಸೋರಿಕೆ ಮಾಡಿದ ನೀಚರು – ಕಹಳೆ ನ್ಯೂಸ್
ತಾನು ಇಷ್ಟಪಟ್ಟ ಹುಡುಗಿ ಬೇರೆ ಹುಡುಗನ ಜೊತೆ ಮದುವೆಯಾಗಬಾರದೆಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವಿಡಿಯೋವನ್ನು ಐವರು ಆರೋಪಿಗಳಲ್ಲಿ ಒಬ್ಬರು ಶೇರ್ ಮಾಡಿ ಮದುವೆ ತಪ್ಪಿಸಲು ಮುಂದಾಗಿರುವ ಘಟನೆ ಪಾಟ್ನಾದ ಗೋಪಾಲ್‍ಗಂಜ್‍ನಲ್ಲಿ ನಡೆದಿದೆ. ಐವರು ಸೇರಿ ಈ ಕೃತ್ಯ ಎಸಗಿದ್ದು, ಇದರಲ್ಲಿ ಇಬ್ಬರು 20 ವರ್ಷದೊಳಗಿನವರು. ಇವರು ಮಧ್ಯಪ್ರಾಚ್ಯ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಅಭಿಷೇಕ್ ಶರ್ಮಾ, ದೀಪು ದುಬೆ, ನಿತೇಶ್ ದುಬೆ, ಲಾಲು ಠಾಕೂರ್ ಮತ್ತು ಲಾಲ್ಜಿ ಶರ್ಮಾ ಎಂದು ಗುರುತಿಸಲಾಗಿದೆ. ಲಾಲು ಮತ್ತು ಲಾಲ್ಜಿ ಎಂಬ ಇಬ್ಬರು ಆರೊಪಿಗಳು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲು ಗೋಪಾಲ್‍ಗಂಜ್ ಎಸ್‍ಪಿ ಆನಂದ್ ಕುಮಾರ್ ಅವರು ಹತುವಾ ಎಸ್‍ಡಿಪಿಒ ನರೇಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಯುವತಿ ಮದುವೆಯನ್ನು ತಪ್ಪಿಸುವ ಉದ್ದೇಶದಿಂದ ಆರೋಪಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಅಭಿಷೇಕ್ ಈ ವಿಡಿಯೋ ಸೋರಿಕೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯು ನೀಡಿದ ದೂರಿನ ಆಧಾರದ ಮೇಲೆ ಕಟೆಯಾ ಪೊಲೀಸ್ ಠಾಣೆಯಲ್ಲಿ ಐವರು ಯುವಕರ ವಿರುದ್ಧ ಸೋಮವಾರ ದೂರು ದಾಖಲಿಸಲಾಗಿದೆ ಎಂದು ಎಸ್‍ಪಿ ತಿಳಿಸಿದರು.
ಗೋಪಾಲ್‍ಗಂಜ್‍ನ ಕಟೆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅತ್ಯಾಚಾರ ನಡೆದಿದೆ. ಸಂತ್ರಸ್ತೆಯು ಅಭಿಷೇಕ್ ಎಂಬ ಯುವಕನ ಜೊತೆ ಸಂಬಂಧ ಹೊಂದಿದ್ದರು. ಈ ಘಟನೆ ನಡೆದಾಗ ಆಕೆಗೆ ಇನ್ನೂ 16 ವರ್ಷವೂ ಆಗಿರಲಿಲ್ಲ ಎಂದು ಎಸ್‍ಡಿಪಿಒ ಕುಮಾರ್ ಮಾಹಿತಿ ನೀಡಿದರು.
ಅಭಿಷೇಕ್‍ನನ್ನು ಆಕ್ಷೇಪಾರ್ಹ ಸ್ಥಾನದಲ್ಲಿರಿಸಿ, ಇತರೆ ನಾಲ್ವರು ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆಯು ವಿವಿಧ ಕಾರಣಗಳಿಂದ ಪೊಲೀಸರನ್ನು ಸಂಪರ್ಕಿಸಿರಲಿಲ್ಲ ಎಂದು ಹೇಳಿದರು.
ಏನಿದು ಘಟನೆ?
ಸಂತ್ರಸ್ತೆಯು ಮದುವೆಯಾಗಲು ನಿರ್ಧರಿಸಿದ್ದಳು. ಈ ವಿಚಾರ ತಿಳಿದ ಅಭಿಷೇಕ್ ತನ್ನನ್ನೇ ಮದುವೆಯಾಗುವಂತೆ ಸಂತ್ರಸ್ತೆಗೆ ಹಿಂಸಿಸುತ್ತಿದ್ದ. ಆದರೆ ಅವನ ಮಾತನ್ನು ತಿರಸ್ಕರಿಸಿದ್ದ ಸಂತ್ರಸ್ತೆ ಮದುವೆಯ ತಯಾರಿಯಲ್ಲಿದ್ದಳು. ಆಗ ಕೊನೆಗೆ ಆಕೆಯ ಮದುವೆಯನ್ನು ನಿಲ್ಲಿಸಬೇಕೆಂಬ ಕಾರಣಕ್ಕೆ ವಿಡಿಯೊ ಸೋರಿಕೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆಕೆ ಅಭಿಷೇಕ್ ಮನೆಗೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾಳೆ. ಅಂದಿನಿಂದ ಅಭಿಷೇಕ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ನಂತರ ಸಂತ್ರಸ್ತೆ ಐವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
ವಿದೇಶದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಆರೋಪಿಗಳನ್ನು ಮೊದಲು ಭಾರತಕ್ಕೆ ಕರೆಸಿಕೊಳ್ಳಬೇಕಿದೆ. ಹೀಗಾಗಿ ಅವರನ್ನು ಬಂಧಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಎಸ್‍ಡಿಪಿಒ ತಿಳಿಸಿದೆ.
ಎಸ್‍ಪಿ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಪತ್ರ ಬರೆಯಲಿದ್ದು, ಈ ಘಟನೆಯ ಬಗ್ಗೆ ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯಕ್ಕೆ ತಿಳಿಸಲಾಗುತ್ತದೆ. ನಂತರ ಇವರಿಬ್ಬರನ್ನು ಭಾರತಕ್ಕೆ ಗಡೀಪಾರು ಮಾಡಲು ಸಂಬಂಧಪಟ್ಟ ದೇಶದಲ್ಲಿರುವ ನಮ್ಮ ರಾಯಭಾರ ಕಚೇರಿಯನ್ನು ಅಲ್ಲಿನ ಸರ್ಕಾರವನ್ನು ಸಂಪರ್ಕಿಸಲು ತಿಳಿಸಲಾಗುವುದು ಎಂದು ಅವರು ಹೇಳಿದರು.
ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಲು, ಅವರಿಬ್ಬರು ವಿಮಾನವನ್ನು ಎಲ್ಲಿ ಹತ್ತಿದ್ದರೋ ಆ ಸ್ಥಳದಿಂದ ಪಾಸ್‍ಪೋರ್ಟ್, ವೀಸಾ ಮತ್ತು ವಿಮಾನ ನಿಲ್ದಾಣದ ವಿವರಗಳನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಎಸ್‍ಪಿಡಿಒ ತಿಳಿಸಿದೆ.