Friday, September 20, 2024
ಕೊಡಗುಮಡಿಕೇರಿಸುದ್ದಿ

ಮಡಿಕೇರಿ-ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ ; ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ | ಆತಂಕ, ಕತ್ತಲೆಯಲ್ಲಿ ಕೊಡಗು..! – ಕಹಳೆ ನ್ಯೂಸ್

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲ, ನಾಪೋಕ್ಲು, ಮಡಿಕೇರಿ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಕಾವೇರಿ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೂ ಮಡಿಕೇರಿ ಮಂಗಳೂರು ಹೆದ್ದಾರಿಯ ಕೆಳಭಾಗದಲ್ಲಿ 2018 ರಲ್ಲಿ ಭೂಕುಸಿತವಾಗಿದ್ದ ಸ್ಥಳದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ಅಲ್ಲಿರುವ ಆರು ಕುಟುಂಬಗಳು ಭೂಕುಸಿತದ ಭೀತಿಯಲ್ಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕತ್ತಲೆಯಲ್ಲಿ ಕೊಡಗು:
ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಮಹೇಶ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಆರು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಿದ್ದಾರೆ. ಜೊತೆಗೆ ದೇವಸ್ತೂರು, ಹೆಬ್ಬೆಟಗೇರಿಯಲ್ಲಿ ದೇವಸ್ತೂರು ಹೊಳೆ ಭೋರ್ಗರೆದು ಹರಿಯುತ್ತಿದೆ. ದೇವಸ್ತೂರು ಕೆಳಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ದೇವಸ್ತೂರು, ಬಾಣೆಗದ್ದೆ ಮತ್ತು ಹೆಬ್ಬೆಟಗೇರಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಇನ್ನು ತೀವ್ರ ಮಳೆಗೆ ಕೊಡಗು ಜಿಲ್ಲೆಗೆ ವಿದ್ಯುತ್ ಪೂರೈಸುವ ಲೈನ್ ಮೇಲೆ ಕುಶಾಲನಗರ ಸಮೀಪ ಭಾರೀ ಘಾತ್ರದ ಮರಬಿದ್ದ ಪರಿಣಾಮ ವಿದ್ಯುತ್ ಕಡಿತವಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆ ಬಹುತೇಕ ಕತ್ತಲೆಯಲ್ಲಿ ಮುಳುಗಿದೆ.

ಜಾಹೀರಾತು

ಮಳೆ ಜೊತೆಗೆ ಭಾರೀ ಗಾಳಿ ಬೀಸುತ್ತಿದ್ದು, ನೂರಾರು ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಪರಿಣಾಮವಾಗಿ ಗ್ರಾಮೀಣ ಕೊಡಗು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದೆ. ಭಾಗಮಂಡಲ ಮತ್ತು ತಲಕಾವೇರಿ ಭಾಗದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಭಾಗಮಂಡದಲ್ಲಿ ಕಳೆದ 24 ಗಂಟೆಯಲ್ಲಿ 103 ಮಿಲಿ ಮೀಟರ್ ಗೂ ಅಧಿಕ ಮಳೆ ಸುರಿದಿದೆ. ಇದು ಕಾವೇರಿ ನದಿ ಪಾತ್ರದ ಹತ್ತಾರು ಗ್ರಾಮಗಳ ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ದೂಡಿದೆ. ಒಟ್ಟಿನಲ್ಲಿ ಎರಡು ದಿನದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇನ್ನೂ ಎರಡು ದಿನ ಭಾರೀ ಮಳೆ ಸುರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಕಾಶವಾಣಿ ಬಳಿ ಮತ್ತೆ ಗುಡ್ಡ ಕುಸಿತ:
ಮಡಿಕೇರಿ ನಗರದ ಆಕಾಶವಾಣಿ ಕೇಂದ್ರದ ಬಳಿಯು ಭೂಕುಸಿತ ಕುಸಿತ ಉಂಟಾಗಿದೆ. ಮಡಿಕೇರಿಯ ಆಕಾಶವಾಣಿ ಟವರ್ ಗೆ ಕಂಟಕ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಟವರ್ ನಿಂದ ಕೇವಲ ಐದು ಅಡಿ ದೂರದಲ್ಲಿ ಭೂಕುಸಿತ ಅಗಿದೆ. ಕಳೆದ ಬಾರಿ ಕುಸಿದಿದ್ದ ಜಾಗದ ಪಕ್ಕದಲ್ಲೇ ಮತ್ತೆ ಭೂ ಕುಸಿತವಾಗಿದೆ. ಮಳೆ ಇದೇ ರೀತಿಯಲ್ಲಿ ಮುಂದುವರಿದಲ್ಲಿ ಆಕಾಶವಾಣಿ ಟವರ್ ಬೀಳುವ ಸಾಧ್ಯತೆ ಹೆಚ್ಚಾಗಿದು. ಆಕಾಶವಾಣಿ ಸಿಬ್ಬಂದಿಗಳಿಗೆ ಅತಂಕ ಮನೆ ಮಾಡಿದೆ.

2018 ರಲ್ಲೂ ಆಕಾಶವಾಣಿ ಟವರ್ ಬಳಿಯೇ ಗುಡ್ಡ ಕುಸಿದಿತ್ತು. ಬಳಿಕ 2020 ರಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಮಾಡುವ ಸಂದರ್ಭದಲ್ಲಿಯೂ ಗುಡ್ಡ ಕುಸಿದಿತ್ತು. ಕಾರ್ಮಿಕರು ಪ್ರಾಣಾಪಾಯದಿಂದ ಪಾರಗಿದ್ರು. ಇದೀಗ ತಡೆಗೋಡೆ ನಿರ್ಮಾಣ ಮಾಡಿದ ಪಕ್ಕದಲ್ಲೇ ಮತ್ತೆ ಭೂ ಕುಸಿತವಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಹಾಗೂ ನಗರಸಭೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆ ಅಡ್ಡಲಾಗಿ ಮಡಿಕೇರಿ ಪೊಲೀಸರು ಬ್ಯಾರೀಕೇಟ್ ಗಳನ್ನು ಅಳವಡಿಸಿ ಸಾರ್ವಜನಿಕರು ಯಾರು ಹೋಗದಂತೆ ಸೂಚನೆ ನೀಡಿದ್ದಾರೆ.

ನದಿ ತೀರದ ನಿವಾಸಿಗಳಲ್ಲಿ ಆತಂಕ
ಮದೆನಾಡು, ಜೋಪುಪಾಲ, ಕೊಯನಾಡು ಮತ್ತು ಸಂಪಾಜೆ ಸುತ್ತಮುತ್ತ ಗ್ರಾಮಗಳಲ್ಲಿ ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದೆ. ಪಯಸ್ವಿನಿ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದಿಂದ ಕೊಯನಾಡು ಗ್ರಾಮದ ಸುತ್ತಮುತ್ತಲ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಮಣ್ಣಿನ ರಾಶಿ ಮತ್ತು ಮರಗಳು ಕೊಚ್ಚಿಕೊಂಡು ಬರುತ್ತಿದ್ದು, ಇತ್ತೀಚೆಗೆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿರುಕಟ್ಟೆಯಿಂದ ಪ್ರವಾಹದ ಮಾರ್ಗ ಬದಲಾಗಿ ಅಪಾಯ ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣಕ್ಕೂ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. 2018 ರಲ್ಲಿ ಇದೇ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಸಾವು, ನೋವಿನ ಬಗ್ಗೆ ಇಲ್ಲಿಯವರು ನೆನಪಿಸಿಕೊಳ್ಳುತ್ತಿದ್ದಾರೆ. ಇನ್ನೂ ವಿರಾಜಪೇಟೆ ತಾಲೂಕಿನ ಕರಡಿಗೋಡು ಗುಹ್ಯ ಕಕ್ಕಟ್ ಕಾಡು ಪ್ರದೇಶದಲ್ಲಿಯೂ ಕಾವೇರಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು.ಇಲ್ಲಿನ ನಿವಾಸಿಗಳಿಗೆ ಮತ್ತೆ ಪ್ರವಾಹದ ಅತಂಕ ಎದುರಾಗಿದೆ.