ಮೇ 15ರರಿಂದ ಜೂನ್ 15ರ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯರ ವಾಟ್ಸ್ಯಾಪ್ ಅಕೌಂಟ್ಗಳನ್ನು ನಿರ್ಬಂಧ – ಕಹಳೆ ನ್ಯೂಸ್
ದೆಹಲಿ: ಮೇ 15ರರಿಂದ ಜೂನ್ 15ರ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯರ ವಾಟ್ಸ್ಯಾಪ್ ಅಕೌಂಟ್ಗಳನ್ನು ನಿರ್ಬಂಧಿಸಲಾಗಿದೆ. ಆನ್ಲೈನ್ ಕಿರುಕುಳ ತಪ್ಪಿಸಲು, ಬಳಕೆದಾರರ ಸುರಕ್ಷೆ ಕಾಪಾಡಲು ಇಂಥ ಕಠಿಣ ಕ್ರಮ ಅನಿವಾರ್ಯವಾಗಿತ್ತು ಎಂದು ಫೇಸ್ಬುಕ್ ಮಾಲೀಕತ್ವದ ಮೆಸೆಂಜಿಂಗ್ ಆಯಪ್ ವೇದಿಕೆಯು ಗುರುವಾರ ಸಲ್ಲಿಸಿದ ಮಾಸಿಕ ವರದಿಯಲ್ಲಿ ತಿಳಿಸಿದೆ.
ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ ಪ್ರತಿ ತಿಂಗಳೂ ಸಾಮಾಜಿಕ ಮಾಧ್ಯಮ ಮತ್ತು ಮೆಸೆಂಜಿಂಗ್ ಸೇವೆ ಒದಗಿಸುವ ಕಂಪನಿಗಳು ಇಂಥ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.
ನಾವು ತಂತ್ರಜ್ಞಾನ ಸುಧಾರಿಸಲು, ಜನರು ಮತ್ತು ಪ್ರಕ್ರಿಯೆಗಳನ್ನು ಸುರಕ್ಷಿತವಾಗಿರಿಸಲು ಸದಾ ಪ್ರಯತ್ನಿಸುತ್ತೇವೆ. ಹಾನಿಕಾರಕ ಅಥವಾ ಬೇಡದ ಮೆಸೇಜ್ಗಳನ್ನು ದೊಡ್ಡಮಟ್ಟದಲ್ಲಿ ರವಾನಿಸದಂತೆ ತಡೆಯುವುದು ನಮ್ಮ ಉದ್ದೇಶ.
ಅಸಹಜ ಚಟುವಟಿಕೆ ನಡೆಸುವ ಮತ್ತು ಅತಿಹೆಚ್ಚು ಜನರಿಗೆ ಮೆಸೇಜ್ಗಳನ್ನು ಕಳಿಸುವ ಸಂಖ್ಯೆಗಳನ್ನು ಗುರುತಿಸಿ ನಿರ್ಬಂಧಿಸುವ ವ್ಯವಸ್ಥೆ ರೂಪಿಸಿದ್ದೇವೆ. ಇಂಥ ಚಟುವಟಿಕೆಗಳಲ್ಲಿ ನಿರತವಾದ ಸುಮಾರು 20 ಲಕ್ಷ ಅಕೌಂಟ್ಗಳನ್ನು ಮೇ 15ರಿಂದ ಜೂನ್ 15ರ ಅವಧಿಯಲ್ಲಿ ನಿರ್ಬಂಧಿಸಿದ್ದೇವೆ. ಈ ಪೈಕಿ ಹಲವು ಅಕೌಂಟ್ಗಳು ಕಿರುಕುಳ ನೀಡಲು ಬಳಕೆಯಾಗುತ್ತಿದ್ದ ಆರೋಪ ಎದುರಿಸುತ್ತಿದ್ದವು ಎಂದು ವಾಟ್ಸ್ಯಾಪ್ ಕಂಪನಿ ಹೇಳಿದೆ.
ಹಾನಿಕಾರಕ ಕೃತ್ಯಗಳಿಗಾಗಿ ನಮ್ಮ ವೇದಿಕೆಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಇಂಥ ಚಟುವಟಿಕೆಗಳನ್ನು ತಡೆಯಲೆಂದೇ ಹಲವು ಸಾಧನಗಳು ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ನಿಯೋಜಿಸಿದ್ದೇವೆ. ಹಾನಿಕಾರಕ ಚಟುವಟಿಕೆಗಳನ್ನು ತಡೆಗಟ್ಟುವುದು ನಮ್ಮ ಮುಖ್ಯ ಉದ್ದೇಶ. ಅಂಥ ಕೃತ್ಯ ನಡೆಯುವ ಮೊದಲೇ ಗುರುತಿಸಿ ತಡೆಯುವುದರಲ್ಲಿ ನಾವು ಹೆಚ್ಚು ವಿಶ್ವಾಸವಿಟ್ಟಿದ್ದೇವೆ ಎಂದು ವಾಟ್ಸ್ಯಾಪ್ ವರದಿ ಹೇಳಿದೆ.
ಕಿರುಕುಳದ ಮೆಸೇಜ್ಗಳನ್ನು ಗುರುತಿಸಲು ನಮ್ಮ ವೇದಿಕೆಯು ಮೂರು ಹಂತದ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಿದೆ. ಯಾವುದೇ ಅಕೌಂಟ್ನ ನೋಂದಣಿ ಸಂದರ್ಭ, ಮೆಸೇಜ್ಗಳನ್ನು ರವಾನಿಸುವ ಸಂದರ್ಭ ಮತ್ತು ಯಾವುದೇ ಮೆಸೇಜ್ ಬಗ್ಗೆ ವರದಿಯಾಗುವ ನೆಗೆಟಿವ್ ಪ್ರತಿಕ್ರಿಯೆಯನ್ನು ಅನುಸರಿಸಿ ವಾಟ್ಸ್ಯಾಪ್ ಕ್ರಮ ಕೈಗೊಳ್ಳುತ್ತದೆ. ವಿಶ್ಲೇಷಕರ ಒಂದು ವಿಶೇಷ ತಂಡವೇ ಈ ವ್ಯವಸ್ಥೆಯನ್ನು ನಿರ್ವಹಿಸಲು ಕೆಲಸ ಮಾಡುತ್ತಿದೆ. ಕಾಲಾನುಕ್ರಮದಲ್ಲಿ ಈ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಸತತ ಪ್ರಯತ್ನ ನಡೆಯುತ್ತಿದೆ ಎಂದು ಸಂಸ್ಥೆಯು ಹೇಳಿದೆ.