ನವದೆಹಲಿ: ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ತಲುಪುವ ಮೂಲಕ ಭಾರತ ಐತಿಹಾಸಿಕ ಸಾಧನೆ ನಿರ್ಮಿಸಿದೆ. ಮಣಿಪುರದ ಸೇನಾಪತಿ ಜಿಲ್ಲೆಯ ಗ್ರಾಮವೊಂದಕ್ಕೆ ಶನಿವಾರ ಸಂಜೆ 5.30ಕ್ಕೆ ವಿದ್ಯುತ್ ತಲುಪುವ ಮೂಲಕ ಈ ಸಾಧನೆ ನಿರ್ಮಾಣವಾಗಿದೆ.
2014ರಲ್ಲಿ ಮೋದಿ ಸರ್ಕಾರ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಭಾರತದ ಅಭಿವೃದ್ಧಿಯ ಪ್ರಯಾಣದಲ್ಲಿ 2018ರ ಏಪ್ರಿಲ್ 28 ಐತಿಹಾಸಿಕ ದಿನ. ಶನಿವಾರ ನಾವು ನೀಡಿದ್ಧ ಭರವಸೆ ಪೂರ್ಣವಾಗಿದೆ. ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದಕ್ಕೆ ನನಗೆ ಬಹಳ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ 2015ರ ಸ್ವಾತಂತ್ರ್ಯ ದಿನಾಚಣೆಯ ಭಾಷಣದಲ್ಲಿ, 1 ಸಾವಿರ ದಿನದ ಒಳಗಡೆ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಈ ಗುರಿಯನ್ನು 987 ದಿನದಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪೀಯುಷ್ ಗೋಯಲ್ ರೀಟ್ವೀಟ್ ಮಾಡಿದ್ದಾರೆ.
ಈ ಗುರಿಯನ್ನು ತಲುಪಲು ಸಹಕರಿಸಿದ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಎಲ್ಲ ಕೆಲಸಗಾರರಿಗೆ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.