ಜೀವನ ಎಂಬುದು ಏಳು- ಬೀಳುಗಳ, ಕಲ್ಲು- ಮುಳ್ಳುಗಳನ್ನು , ಒಳಗೊಂಡಿರುವ ಒಂದು ಪಯಣ. ಜೀವನ ಎಂಬ ಪಯಣದಲ್ಲಿ ನಾವು ಯೋಚನೆ ಮಾಡಿದಂತೆ ಮುಂದಿನ ಕ್ಷಣವು ಹೇಗಿರಬಹುದು ಎಂಬುದನ್ನು ಊಹಿಸಲು ಅಸಾಧ್ಯ. ಏಕೆಂದರೆ ಜೀವನ ಎಂಬುದು ಅನೇಕ ತಿರುವುಗಳಿಂದ ಕೂಡಿರುತ್ತದೆ. ಇಂತಹ ತಿರುವುಗಳನ್ನು ಒಳಗೊಂಡ ಜೀವನದಲ್ಲಿ ಬರುವ ಅತ್ಯಮೂಲ್ಯವಾದ ಘಟ್ಟವೇ ಬಾಲ್ಯ.
ಹೌದು ಸ್ನೇಹಿತರೆ ನಮ್ಮ ಜೀವನದಲ್ಲಿ ಮರೆಯಲಾಗದ ಕೆಲವು ನೆನಪುಗಳು ಅಂದರೆ ಅದು ನಮ್ಮ ಬಾಲ್ಯ ಜೀವನ ಮಾತ್ರ. ಬಾಲ್ಯ ಎಂಬುದು ಅನೇಕ ನೆನಪುಗಳನ್ನೊಳಗೊಂಡ ಸವಿ ನೆನಪುಗಳ ಭಂಡಾರ ಎಂದು ಕರೆಯುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ತಾನು ಕಳೆದ ಬಾಲ್ಯದ ನೆನಪುಗಳು ಅವಿಸ್ಮರಣೀಯವಾಗಿರುತ್ತದೆ. ಬಾಲ್ಯದಲ್ಲಿ ಎಲ್ಲರ ಜೊತೆ ಬೇಧ- ಭಾವವಿಲ್ಲದೆ ಕೂಡಿ ಕಳೆದ ಅದೆಷ್ಟೋ ಸಮಯಗಳು ಎಲ್ಲರೂ ಒಂದೇ ಎನ್ನುವ ಭಾವನೆಗಳು “ನನ್ನದು” ಎನ್ನುವ ಸ್ವಾರ್ಥವಿಲ್ಲದೆ, “ನಮ್ಮದು” ಎನ್ನುವ ನಿಸ್ವಾರ್ಥದ ದಿನಗಳನ್ನು ನೆನೆದಾಗ ಮನಸ್ಸಿನಲ್ಲಿ ಏನ್ನೋ ಒಂದು ಸಂತೋಷ. ಬಾಲ್ಯ ಎಂದಾಕ್ಷಣ ನೆನಪಾಗುವುದೇ ತುಂಟಾಟ, ನಿನ್ನೆ-ನಾಳೆಗಳ ಆಲೋಚನೆ ಇಲ್ಲದೆ ಇಂದು ನನ್ನದೇ ಎಂದು ಬದುಕುತ್ತಾ ಅನಿಸದ್ದನ್ನೆಲ್ಲಾ ನೇರವಾಗಿ ಹೇಳುತ್ತಿದ್ದ ಕ್ಷಣಗಳು ಯಾರು ಏನು ಅಂದರೂ ಒಂದು ಕ್ಷಣ ಅತ್ತು ಮರೆತು ಬಿಡುತ್ತಿದ್ದೇವು.
ದಿನ ಕಳೆಯುತ್ತಾ, ಬಾಲ್ಯದಿಂದ ಯೌವ್ವನದ ಕಡೆ ಹೆಜ್ಜೆ ಹಾಕುತ್ತಾ ಹೊರಟಾಗ ಸ್ವಾರ್ಥ ಎನ್ನುವ ವಿಷ ಬೀಜವು ಮೊಳಕೆಯೊಡೆಯುತ್ತದೆ. ನಮ್ಮದು ಎನ್ನುವ ನಿಸ್ವಾರ್ಥ ಭಾವ ನಾನು ನನ್ನದು ಎನ್ನುವ ಸ್ವಾರ್ಥ ಭಾವಕ್ಕೆ ತಿರುಗುತ್ತದೆ. ಜೀವನ ಎಂಬ ಪಯಣದಲ್ಲಿ ನಮ್ಮ ಜೊತೆ ಎಷ್ಟೋ ಜನರು ಸ್ನೇಹ ಸಂಬಂಧವನ್ನು ಬೆಳೆಸುತ್ತಾರೆ. ಆದರೆ ಪ್ರತಿಯೊಬ್ಬನಲ್ಲಿಯೂ ಸ್ವಾರ್ಥದ ಭಾವನೆ ಎಂಬುದು ಇದೆ ಇರುತ್ತದೆ. ಸ್ವಾರ್ಥವೇ ತುಂಬಿದ ಈ ಪ್ರಪಂಚದಲ್ಲಿ ಪ್ರೀತಿಗೂ ಬೆಲೆ ಇಲ್ಲ ಸ್ನೇಹಗೂ ಅರ್ಥ ಇಲ್ಲ. ಇದು ಮಾತ್ರ ನಿಜವಾದ ಸಂಗತಿ. ಸ್ನೇಹ ಹಾಗೂ ಪ್ರೀತಿ ಎಂಬ ವಿಶ್ವಾಸ ಇಟ್ಟುಕೊಂಡು ಮಾಡುವ ಮೋಸದಿಂದ ಆಗುವ ನೋವು ಜೀವನದಲ್ಲಿ ಉತ್ತಮ ಪಾಠವನ್ನು ಕಳಿಸಿಕೊಡುತ್ತದೆ.
ಜೀವನ ಎಂದರೆ ಏನು ಎನ್ನುವ ಪ್ರಶ್ನೆಯನ್ನು ಹುಡುಕುತ್ತಾ ಹೋಗುವ ಪ್ರತಿಯೊಬ್ಬನಿಗೂ ಮೊದಲು ಸಿಗುವುದು ಸೋಲು ನೋವು ಮಾತ್ರ. ಸೋಲು ಎಂಬುದು ಜಯದ ಸಂಕೇತ ಕೂಡ ಹೌದು. ನಮ್ಮ ಜೀವನದಲ್ಲಿ ಮೈಗಾದ ಗಾಯಕ್ಕಿಂತ ಹೆಚ್ಚಾಗಿ ಮನಸ್ಸಿಗಾದ ಗಾಯ ಹೊರ ಬರಲಾಗದೆ ಮನದಾಳದಲ್ಲಿಯೇ ಕೂತಿರುತ್ತದೆ. ಮನಸ್ಸಿಗಾದ ಗಾಯವನ್ನು ಮನಸ್ಸಿನಲ್ಲಿಯೇ ಬಿಚ್ಚಿಡಲಾಗದೆ, ತಮ್ಮವರಲ್ಲಿಯೂ ಹೇಳಿಕೊಳ್ಳಲಾಗದೆ, ಕೊನೆಗೆ ನಮಗೆ ನಾವೇ ಪ್ರಶ್ನೆ, ನಮಗೆ ನಾವೇ ಉತ್ತರ, ನಮಗೆ ನಾವೇ ಸಮಾಧಾನ, ಮಾಡುವಂತಹ ಸ್ಥಿತಿ ಕೆಲವೊಮ್ಮೆ ಜೀವನದಲ್ಲಿ ಉತ್ತಮ ಪಾಠವನ್ನು ಕಳಿಸುತ್ತದೆ.
ಜೀವನ ಎಂದರೆ ಏನು ಎಂಬ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಿನಲ್ಲಿರುತ್ತದೆ. ಕೆಲವೊಂದು ಬಾರಿ ನಮ್ಮ ಬಾಲ್ಯ ದಿನವೇ ನಮಗೆ ಬೇಕು ಎಂಬ ಭಾವನೆ ಬರುವುದು ಕೂಡ ಸಹಜ. ಅದರೆ ಜೀವನ ಎಂಬ ಪಯಣದಲ್ಲಿ ನಾವು ಎಲ್ಲಾವನ್ನು ಎದುರಿಸುವ ಕಲೆಯನ್ನು ಕರಗತಕೊಳ್ಳಿಸಿದರೆ ಜೀವನ ಎಂಬ ಪ್ರಶ್ನೆಗೆ ನಿಮಗೆ ನೀವೇ ಉತ್ತಮ ಕಂಡು ಹಿಡಿಯಲು ಸಾಧ್ಯ. ನಮ್ಮ ಜೀವನದಲ್ಲಿ ಆಗುವ ಪ್ರತಿಯೊಂದು ಘಟನೆಗೂ ಅರ್ಥವಿರುತ್ತದೆ. ಆದರೆ ನಮಗೆ ಅದರ ಬಗ್ಗೆ ಅರಿವಿರುವುದಿಲ್ಲ. ಹಾಗೇ ಸೋಲು ಅನುಭವಿಸಿದವರು ಯಾವತ್ತಿಗೂ ಗೆದ್ದೆ ಗೆಲುತ್ತಾರೆ.
ಕವಿತಾ
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು