ಬೆಂಗಳೂರು: ಇಂದು ಮಧ್ಯಾಹ್ನ ರಾಜಭವನಕ್ಕೆ ತೆರಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಭೋಜನಕೂಟದ ಬಳಿಕ ಎಲ್ಲರೂ ಜೊತೆಯಾಗಿ ಹೋಗಿ ರಾಜೀನಾಮೆ ಕೊಡಲು ಹೋಗೋಣ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
75 ವರ್ಷ ವಯಸ್ಸಾಗಿದ್ರೂ ಪಕ್ಷ ನನಗೆ ಸಿಎಂ ಸ್ಥಾನ ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಈ ರಾಜೀನಾಮೆಯನ್ನು ನೋವಿನಂದಲ್ಲ, ಸಂತೋಷದಿಂದ ನೀಡುತ್ತಿದ್ದೇನೆ ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಕೇಂದ್ರದ ನಾಯಕರು ಅಪೇಕ್ಷೆ ಹೊಂದಿದ್ದಾರೆ. ಮೋದಿ, ನಡ್ಡಾ ಮತ್ತು ಶಾ ಅವರಿಗೆ ಪದಗಳಲ್ಲಿ ಅಭಿನಂದನೆ ಸಲ್ಲಿಸಲು ಆಗಲ್ಲ. ಮತ್ತೆ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭವನ್ನು ಮೆಲುಕು ಹಾಕಿದ ಅವರು, ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿದ ನಾನು, ಶಿವಮೊಗ್ಗದ ಶಿಕಾರಿಪುರದಿಂದ ರಾಜಕೀಯ ಜೀವನ ಆರಂಭಿಸಿದೆ. ಅಂದು ಮೊದಲ ಬಾರಿಗೆ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದೇವು. ಆದ್ರೆ ನನ್ನ ಜೊತೆಯಲ್ಲಿದ್ದ ಮತ್ತೊಬ್ರು ರಾಜೀನಾಮೆ ನೀಡಿದಾಗ ಏಕಾಂಗಿಯಾಗಿ ಹೋರಾಟ ನಡೆಸಿದ್ದೇನೆ. ಅಂದು ಆಯೋಜಿಸಿದ ಕಾರ್ಯಕ್ರಮಗಳನ್ನು ನೋಡಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಅಚ್ಚರಿ ವ್ಯಕ್ತಪಡಿಸಿದ್ದರು ಎಂದು ಹೇಳಿದರು.
ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ರಚನೆಯಾಗಿತ್ತು. ಅಂದು ವಾಜಪೇಯಿ ಅವರು ಕೇಂದ್ರದ ಸಚಿವರಾಗುವಂತೆ ಹೇಳಿದ್ದರು. ಇಲ್ಲ ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ದೆಹಲಿ ರಾಜಕಾರಣಕ್ಕೆ ಬರಲ್ಲ ಅಂತ ವಿನಮ್ರದಿಂದ ಹೇಳಿದೆ ಎಂದು ಹೇಳಿ ಭಾವುಕರಾದರು.