ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಆನ್‍ಲೈನ್ ಶಿಕ್ಷಣ ನೂತನ ಸಾಧ್ಯತೆಗಳನ್ನು ಅನಾವರಣಗೊಳಿಸಿದೆ : ಗಣೇಶ್ ಪ್ರಸಾದ್- ಕಹಳೆ ನ್ಯೂಸ್
ಪುತ್ತೂರು: ಬಪ್ಪಳಿಗೆಯ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಆಯೋಜಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಆನ್‍ಲೈನ್ ಶಿಕ್ಷಣ ತಂತ್ರಗಾರಿಕೆ ವಿಷಯದ ಕುರಿತು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನಡೆಸಿ, ಮಾತಾನಾಡಿದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಯವರು ಆಧುನಿಕ ದಿನಗಳಲ್ಲಿನ ಬೋಧನೆಗೆ ಶಿಕ್ಷಕರು ತಮ್ಮನ್ನು ತಾವು ಹೊಂದಿಸಿಕೊಳ್ಳುವುದು ಅನಿವಾರ್ಯ. ಆನ್‍ಲೈನ್ ಶಿಕ್ಷಣ ಎಂಬುದು ಅನೇಕ ನೂತನ ಸಾಧ್ಯತೆಗಳನ್ನು ಅನಾವರಣಗೊಳಿಸಿದೆ. ಅಂತಹ ಹೊಸ ಹೊಸ ಸಂಗತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಉತ್ಕøಷ್ಟ ಮಟ್ಟದ ಶಿಕ್ಷಣ ಒದಗಿಸುವುದು ಶಿಕ್ಷಕರ ಕರ್ತವ್ಯ ಎಂದು ಹೇಳಿದರು. ಪವರ್ ಪಾಯಿಂಟ್ ಪ್ರೆಸೆಂಟೇಶನ್, ಜಾಮ್ ಬೋರ್ಡ್ ಮೊದಲಾದ ಸಾಧನಗಳು ಪಠ್ಯವನ್ನು ಮತ್ತಷ್ಟು ಆಕರ್ಷಕಗೊಳಿಸುತ್ತವೆ. ಆನೆಯ ಕುರಿತು ವಿವರಿಸುವಾಗ ಆನೆಯನ್ನೇ ಪರದೆಯಲ್ಲಿ ತೋರಿಸಿದರೆ ಅದು ಹೆಚ್ಚು ಪರಿಣಾಮಕಾರಿ ಎನಿಸುತ್ತದೆ. ಉಗಿಬಂಡಿ ಹಾಗೂ ಅದರ ಶಬ್ದವನ್ನು ಉಗಿಬಂಡಿ ಚಲಿಸುವ ವೀಡಿಯೋ ಪ್ರದರ್ಶನದ ಮೂಲಕ ತಿಳಿಸಿಕೊಟ್ಟರೆ ಅದು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಹಾಗಾಗಿ ಈಗಿನ ಆನ್‍ಲೈನ್ ಶಿಕ್ಷಣದ ನಂತರವೂ ತರಗತಿಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಯೇ ಪಾಠ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ನೂತನ ಶಿಕ್ಷಣ ಸಾಧನಗಳು ಪಠ್ಯವನ್ನು ಆಕರ್ಷಕಗೊಳಿಸುತ್ತವೆ. ವರ್ಣರಂಜಿತ ಪಾಠಗಳು ಸಹಜವಾಗಿಯೇ ವಿದ್ಯಾರ್ಥಿಗಳನ್ನು ಪಠ್ಯದೆಡೆಗೆ ಸೆಳೆಯುತ್ತವೆ. ಇದು ಶಿಕ್ಷಣದ ಸರಾಗ ಪ್ರಸರಣಕ್ಕೂ ಸಹಾಯಮಾಡುತ್ತದೆ. ಆದ್ದರಿಂದ ನೂತನ ತಂತ್ರಜ್ಞಾನಗಳು ಶಿಕ್ಷಕರನ್ನು ಮತ್ತೊಂದು ಹಂತಕ್ಕೆ ಒಯ್ಯುವಲ್ಲಿ ಸಹಕಾರಿಯಾಗುತ್ತದೆ ಎಂದರು. ಅಲ್ಲದೆ ಮುಂದಿನ ದಿನಮಾನಗಳಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಒಗ್ಗಿಕೊಳ್ಳದಿದ್ದಲ್ಲಿ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುವುದೇ ಕಷ್ಟವೆನ್ನುವ ದಿನಗಳು ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು. ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಶಿಕ್ಷಕಿ ಕುಸುಮಾ ಪ್ರಾರ್ಥಿಸಿದರು. ಶಿಕ್ಷಕಿಯರಾದ ನಯನಾ ರೈ ಸ್ವಾಗತಿಸಿ, ಸುಮನಾ ಭಟ್ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಕಾರ್ಯಾಗಾರ ನಡೆಯಿತು.