Recent Posts

Monday, January 20, 2025
ಪುತ್ತೂರು

ಅಂಬಿಕಾ ಪದವಿ ಕಾಲೇಜಿನಲ್ಲಿ ತರಬೇತಿ ಮತ್ತು ಉದ್ಯೋಗ ಘಟಕಕ್ಕೆ ಚಾಲನೆ: ಕ್ಯಾಂಪಸ್ ಸಂದರ್ಶನ ಆಯೋಜನೆ ಇಂದಿನ ಅಗತ್ಯ : ಸುರೇಶ್ ಶೆಟ್ಟಿ – ಕಹಳೆ ನ್ಯೂಸ್

ಪುತ್ತೂರು: ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ತರಬೇತಿ ಮತ್ತು ಉದ್ಯೋಗ ಘಟಕವನ್ನು ಉದ್ಘಾಟನೆ ಮಾಡಿ ಮಾತನಾಡಿದ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಸುರೇಶ್ ಶೆಟ್ಟಿ ಹಿಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಪದ್ಧತಿ ಇದ್ದಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ಪದವಿ ಹಂತದ ನಂತರ ಆಯಾ ಸಂಸ್ಥೆಗಳೇ ಆಸ್ಥೆವಹಿಸಿ ತಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನಗಳನ್ನು ಮಾಡುತ್ತಿವೆ. ಇಂದಿನ ದಿನಮಾನಗಳಲ್ಲಿ ಅಂತಹದ್ದೊಂದು ಉಪಕ್ರಮದ ಅಗತ್ಯವೂ ಇದೆ ಎಂದರು. ಇಂದು ಅನೇಕ ಶಿಕ್ಷಣ ಸಂಸ್ಥೆಗಳು ಕ್ಯಾಂಪಸ್ ಸಂದರ್ಶನಕ್ಕೆ ಆದ್ಯತೆ ನೀಡುತ್ತಿವೆ. ಹಾಗಾಗಿಯೇ ಆಯಾ ಸಂಸ್ಥೆಗಳ ಜಾಹೀರಾತುಗಳಲ್ಲಿ ತಮ್ಮ ಸಂಸ್ಥೆಗೆ ಸಂದರ್ಶನಕ್ಕಾಗಿ ಆಗಮಿಸುವ ಕಂಪೆನಿಗಳ ಬಹುದೊಡ್ಡ ಪಟ್ಟಿಯೇ ಇರುತ್ತದೆ. ಇದು ವಿದ್ಯಾರ್ಥಿಗಳನ್ನು ಸೆಳೆಯುವುದಕ್ಕೂ ಸಹಕಾರಿ. ತರಬೇತಿ ಮತ್ತು ಉದ್ಯೋಗ ಘಟಕವು ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಉದ್ಯೋಗ ಹಾಗೂ ನಾನಾ ವಿಧದ ತರಬೇತಿಗೆ ಸಂಬಂಧಿಸಿದ ಬರಹ, ಮಾಹಿತಿ, ಲೇಖನಗಳನ್ನು ಸಂಗ್ರಹಿಸಿಟ್ಟುಕೊಂಡು ಅದಕ್ಕನುಗುಣವಾಗಿ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಪ್ರತಿಯೊಂದು ಸಂಸ್ಥೆಗೂ ತರಬೇತಿ ಮತ್ತು ಉದ್ಯೋಗ ಘಟಕ ಎಂಬುದು ಇಂದು ಅನಿವಾರ್ಯ ವಿಷಯವೆನಿಸಿದೆ, ನಮ್ಮ ನಮ್ಮ ವಿದ್ಯಾರ್ಥಿಗಳಿಗೆ ನಾವು ಉದ್ಯೋಗ ಕಲ್ಪಿಸಿಕೊಟ್ಟಾಗ ಮಾತ್ರ ಅವರಿಗೆ ಸಂಸ್ಥೆಯ ಮೇಲೆ ವಿಶ್ವಾಸ ಬರುವುದಕ್ಕೆ ಸಾಧ್ಯ. ಅಂಬಿಕಾ ಪದವಿ ಕಾಲೇಜು ಇನ್ನೂ ಒಂದು ಹಂತ ಮುಂದಕ್ಕೆ ಹೋಗಿ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗಳ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಪಠ್ಯಕ್ರಮದೊಂದಿಗೆ ಜೋಡಣೆ ಮಾಡಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಪ್ರಯತ್ನ ಆರಂಭಗೊಳ್ಳಬೇಕು. ಕೇವಲ ಉದ್ಯೋಗ ದೊರಕಿಸಿಕೊಡುವುದು ಮಾತ್ರವಲ್ಲದೆ ಸ್ವಯಂಉದ್ಯೋಗ ತರಬೇತಿಯನ್ನೂ ಘಟಕದ ಮೂಲಕ ಹಮ್ಮಿಕೊಳ್ಳಬೇಕು. ಸ್ವಂತ ಉದ್ದಿಮೆ ಆರಂಭಿಸುವುದಕ್ಕೆ ಬೇಕಾದ ಮಾರ್ಗದರ್ಶನಗಳನ್ನು ಒದಗಿಸಿಕೊಟ್ಟು ಧೈರ್ಯತುಂಬಬೇಕು. ವಿವಿಧ ಉದ್ದಿಮೆಗಳಿಗೆ ಭೇಟಿ ನೀಡಿ ಅನುಭವ ದೊರಕಿಸಿಕೊಳ್ಳಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ತರಬೇತಿ ಮತ್ತು ಉದ್ಯೋಗ ಘಟಕಕ್ಕೆ ಸಹಾಯವಾಗುವಂತಹ ಕೆಲವು ಪುಸ್ತಕ ಹಾಗೂ ಪ್ರಕಟಣೆಗಳನ್ನು ಸುರೇಶ್ ಶೆಟ್ಟಿ ಅವರು ಸುಬ್ರಹಣ್ಯ ನಟ್ಟೋಜ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ತರಬೇತಿ ಮತ್ತು ಉದ್ಯೋಗ ಘಟಕದ ಸಂಯೋಜಕಿ ಅನನ್ಯಾ. ವಿ ಸ್ವಾಗತಿಸಿದರು ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.