Sunday, January 19, 2025
ಅಂಕಣ

ಕಷಾಯ ಕುಡಿಯುವ ಮುನ್ನ… ಹಾಲೆ ಮರದ ಬಗ್ಗೆ ತಿಳಿಯೋಣ.!! – ಕಹಳೆ ನ್ಯೂಸ್

“ಪಾಲೆದ ಮರತ ಕಷಾಯ ಪರ್ಜಿಂಡ ವರ್ಷೋ ಇಡೀ ಇಜ್ಜಿ ಸೊರ್ದಯ” ಎಂಬ ಮಾತು ತುಳುವರಲ್ಲಿ ಪ್ರಚಲಿತ. ತೀಕ್ಷ್ಣವಾದ ಕಂಪು ನೀಡುವ ಈ ಮರಕ್ಕೆ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಹಾಗಾಗಿ ಆಟಿ ತಿಂಗಳ ಅಮಾವಾಸ್ಯೆಯ ಸಂದರ್ಭದಲ್ಲಿ ಈ ಮರದ ಕಷಾಯದ ಸೇವನೆ ತುಳುವರ ನಂಬಿಕೆಗೆ ಅರ್ಹವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮರದ ಬಗ್ಗೆ ಒಂದಿಷ್ಟು ತಿಳಿಯೋಣ :
ಹಾಲೆಮರ,ಏಳೆಲೆಹೊನ್ನೆ, ಕೊಡಾಲೆಮರ,ಸಪ್ತಪರ್ಣಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಮರದಲ್ಲಿ ಕರೀಪಾಲೆ ಮತ್ತು ಬಿಳಿಪಾಲೆ ಎಂಬ ಎರಡು ಪ್ರಭೇದಗಳಿವೆ. ಹಾಲೆಮರವು 10 ಮೀ ಎತ್ತರ ಬೆಳೆಯುವ ಪೊದೆ ಅಥವಾ ಸಸ್ಯವಾಗಿದ್ದು ಬೃಹತ್ ಆಕಾರದಲ್ಲಿ ಬೆಳೆದು ನಿಂತಿರುತ್ತದೆ. ಇದರ ಎಲೆಗಳು ಸರಿ ಸುಮಾರು 10ಸೆ. ಮೀ ಉದ್ದ ಇದ್ದು, ಅಂಡಕಾರ ಮತ್ತು ಎಲೆಯ ನರಗಳು ಪ್ರಮುಖವಾಗಿ ಕಾಣುತಿದ್ದು 5 ರಿಂದ 7 ಎಲೆಗಳ ಗೊಂಚಲುಗಳನ್ನು ಹೊಂದಿರುವ ಅತ್ಯಂತ ಮೆದು ಮರ. ಶ್ವೇತ ವರ್ಣದಿಂದ ಕೂಡಿದ ಹೂವುಗಳು ಸುವಾಸನೆ ಹೊಂದಿರುತ್ತವೆ. ತುದಿಯಲ್ಲಿ ಗೊಂಚಲಿನಂತಿರುವ ಕಾಯಿಗಳು 20ರಿಂದ 40 ಸೆ. ಮೀ. ಉದ್ದವಿದ್ದು 6 ರಿಂದ 8ಸೆ. ಮೀ. ದಪ್ಪದ ಕೊಳವೆಯಾಕಾರವಾಗಿ ಬಿಳಿ ಚುಕ್ಕೆಗಳಿಂದ ಕೂಡಿದ ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಬೀಜಗಳು 1ಸೆ. ಮೀ. ಉದ್ದವಿದ್ದು ಹಿಂದೆಡೆ ಕುಚ್ಚಿನಂತಹ ಕಂದು ರೋಮಗಳನ್ನು ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಹಿಂದಿನ ದಿವಸ ಮರಕ್ಕೆ ಗುರುತು ಮಾಡಿ ಬರುವುದು :
ಕೆಲವೊಂದು ಸಂದರ್ಭದಲ್ಲಿ ಆತುರದಿಂದ ಅನಾಹುತ ಆದದ್ದು ಇದೆ. ಹಾಗಾಗಿ ಅಮಾವಾಸ್ಯೆಯ ಹಿಂದಿನ ದಿವಸ ಸಂಜೆ ಮರದ ಬಳಿ ತೆರಳಿ ಕೈ ಜೋಡಿಸಿ “ಹಾಲೆಮರವೇ ಸಕಲ ರೋಗವನ್ನು ನಿವಾರಿಸುವ ಮದ್ದು ಸಂಗ್ರಹಿಸಿಡು ” ಎಂದು ಪ್ರಾರ್ಥಿಸಿ ಬುಡದಲ್ಲಿ ಬೊಲ್ಲು ಕಲ್ಲನ್ನು ಇಟ್ಟು ಬರುವರು. ಕೆಲವರು ಮರಕ್ಕೆ ನೂಲನ್ನು ಕಟ್ಟಿ ಬರುತ್ತಾರೆ. ಮಾರನೇ ದಿವಸ ಶುಚಿಯಾಗಿ ಬ್ರಾಹ್ಮೀ ಮುಹೂರ್ತದಲ್ಲಿ ತುಂಡುಡುಗೆಯಲ್ಲಿ (ಹಿಂದೆ ಬೆತ್ತಲೆಯಾಗಿ ಹೋಗುವ ಪದ್ಧತಿ ಇತ್ತು) ಹೋಗಿ ಬೊಲ್ಲು ಕಲ್ಲಿನಿಂದ ಜಜ್ಜಿ ತೊಗಟೆಯನ್ನು ತೆಗೆದುಕೊಂಡು ಬರುತ್ತಾರೆ.

ಕಷಾಯ ಮಾಡುವ ಕ್ರಮ
ತೊಗಟೆಯ ಮೇಲಿನ ಪದರವನ್ನು ಕೆರೆದು ತೆಗೆದು ಇನ್ನುಳಿದ ಬಿಳಿ ಪದರ ಅಥವಾ ಕೆತ್ತೆಗೆ ಕಾಳುಮೆಣಸು, ಸ್ವಲ್ಪ ಶುಂಠಿ, ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ರುಬ್ಬಿ ಅದರ ರಸವನ್ನು ಸೋಸಿ ತೆಗೆದು ಎಲ್ಲರೂ 24. ಮಿ. ಲೀ. ಅಂದರೆ 2 ಚಮಚದಷ್ಟು ಖಾಲಿ ಹೊಟ್ಟೆಗೆ ಸೇವಿಸಬೇಕು.
ಸುಮಾರು ಅರ್ಧ ಗಂಟೆಯ ನಂತರ ರಾಗಿಮನ್ನಿ ಅಥವಾ ಮೆಂತ್ಯ ಗಂಜಿ ಸೇವಿಸಿದರೆ ಉತ್ತಮ.

ಮರದ ಉಪಯುಕ್ತತೆ
* ಇದರ ಒಣಗಿಸಿದ ತೊಗಟೆಯು ಅಮೀಬಾದಿಂದ ಬರುವ ಆಮಶಂಕೆ ರೋಗಕ್ಕೆ ರಾಮಬಾಣ.

* ಇದರ ತೊಗಟೆಯಲ್ಲಿರುವ ಕೋನೆಸಿಸ್ ಎಂಬ ಅಲ್ಡಲಾಯಿಡ್ ( ಸಸಾರಜನಕ ದ್ರವ್ಯ) ಕ್ಷಯ ರೋಗದ ಕ್ರಿಮಿಯನ್ನು ನಾಶಪಡಿಸುತ್ತದೆ.

* ತುಳುನಾಡಿನಲ್ಲಿ ಕೆಲವರು ಮದುವೆ ಸಂದರ್ಭದಲ್ಲಿ ಚಪ್ಪರಕ್ಕೆ ಈ ಮರದ ಕಂಬ
ನೆಟ್ಟು ‘ಕನ್ಯಾ ಕಂಬವೆಂದು’ ಗುರು ಸ್ಥಾನ ನೀಡುವ ಪದ್ಧತಿ ಇದೆ.

* ಈ ಮರದ ಕಂಬ ಹಾಕಿ ದೀಪಾವಳಿಯ ಸಂದರ್ಭದಲ್ಲಿ ಬಲಿಂದ್ರನನ್ನ ಆವಾಹಿಸಿ ಪೂಜಿಸುವುದರಿಂದ ಇದಕ್ಕೆ ಬಲಿಂದ್ರ ಮರ ಎಂತಲೂ ಹೆಸರಿದೆ.
ಒಟ್ಟಿನಲ್ಲಿ ಕರ್ಕಾಟಕ ಮಾಸ ಅಥವಾ ತುಳುವರ ಆಟಿ ತಿಂಗಳು ಸುರಿದರೆ ಜಡಿ ಮಳೆ ಬಿಟ್ಟರೆ ಜಡ ಬಿಸಿಲು. ಈ ವೈರುಧ್ಯ ವಾಯುಗುಣದಿಂದ ದೇಹದ ಉಷ್ಣತೆ ಏರಿಳಿತ ಕಾಣಿಸಿಕೊಳ್ಳುತ್ತದೆ. ಪ್ರಕೃತಿಯಿಂದ ಬರುವ ರೋಗಕ್ಕೆ ಪ್ರಕೃತಿಯಿಂದಲೇ ಮದ್ದು ಅಂತಹ ಸಸ್ಯಗಳಲ್ಲಿ ಈ ಹಾಲೆಮರವೂ ಬಹಳ ಉಪಯುಕ್ತ. ತುಳು ಜನಪದರು ಅತ್ಯಂತ ಪವಿತ್ರ ಮತ್ತು ಔಷಧೀಯ ಗುಣಯುಕ್ತವೆಂದು ಪರಿಗಣಿಸುವ ಸಸ್ಯ ಪಾಲೆಮರ ಅಥವಾ ಹಾಲೆಮರ. ಆಟಿ ತಿಂಗಳು ಮಾತ್ರವಲ್ಲದೇ ಯಾವತ್ತೂ ನಾವೆಲ್ಲರೂ ನೆನಪಿಡಬೇಕಾದ ಅಂಶವಾಗಿದೆ.
ನಮ್ಮ ಹಿತ್ತಲಲ್ಲಿ ಇರುವ ಔಷಧೀ ಗಿಡಗಳ ಬಗ್ಗೆ ಇಂದಿನ ಯುವ ಜನತೆ ಅರಿತು ಕೊಳ್ಳುವ ಅವಶ್ಯಕತೆ ಇದೆ. ಮಾರಕ ರೋಗ ಕೊರೋನ ಸಂದರ್ಭದಲ್ಲಿ ನಾವು ಅಮೃತಬಳ್ಳಿ, ಶುಂಠಿ ಕಷಾಯ ಕುಡಿದ ಉದಾಹರಣೆಯೂ ಇದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಮತ್ತು ನಾವೆಲ್ಲರೂ ಇದನ್ನು ಬಳಸುವ ವಿಧಾನ ತಿಳಿಯಬೇಕಷ್ಟೆ ಎಂಬುದು ನನ್ನ ಆಶಯ.

✒️ ನಾರಾಯಣ. ಕುಂಬ್ರ
ಲ್ಯಾಬ್ ಸಹಾಯಕರು,
ರಸಾಯನ ಶಾಸ್ತ್ರ ವಿಭಾಗ,
ವಿವೇಕಾನಂದ ಕಾಲೇಜು, ಪುತ್ತೂರು. ದ. ಕ.