Sunday, January 19, 2025
ಪುತ್ತೂರು

ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ಆಟಿ-ಕೂಟ ಕಾರ್ಯಕ್ರಮ; ತುಳುನಾಡಿನ ಆಚರಣೆಗಳು ಮುಂದಿನ ತಲೆಮಾರಿಗೆ ತಿಳಿಯಬೇಕು : ಸತೀಶ್ ಇರ್ದೆ

ಪುತ್ತೂರು: ತುಳುನಾಡು ಅನ್ನುವುದು ಪರಶುರಾಮ ಸೃಷ್ಟಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಇಂತಹ ತುಳುನಾಡಿನ ಪರಂಪರೆಯಲ್ಲಿ ಆಟಿ ನಾಲ್ಕನೇ ತಿಂಗಳು. ಈ ಮಣ್ಣಿನಲ್ಲಿ ಆಟಿ ಮಾಸ, ಭೀಮನ ಅಮಾವಾಸ್ಯೆಯಂತಹ ಅನೇಕ ಆಚರಣೆಗಳು ಹುದುಗಿವೆ. ಇವುಗಳನ್ನೆಲ್ಲ ನಮ್ಮ ಮುಂದಿನ ತಲೆಮಾರಿಗೆ ತಲಪಿಸುವಂತಹ ಕಾರ್ಯ ನಮ್ಮಿಂದಾಗಬೇಕಿದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಶಿಕ್ಷಕರಾದ ಸತೀಶ್ ಇರ್ದೆ ಹೇಳಿದರು. ಅಂಬಿಕಾ ವಿದ್ಯಾಲಯದಲ್ಲಿ ಆಯೋಜಿಸಲಾದ ಆಟಿಯ ಕೂಟ ಕಾರ್ಯಕ್ರಮದಲ್ಲಿ ಅಂಬಿಕಾ ಪರಿವಾರದ ಬೋಧಕ ಮತ್ತು ಬೋಧಕೇತರ ವೃಂದವನ್ನುದ್ದೇಶಿಸಿ ಮಾತಾನಾಡಿದ ಸತೀಶ್ ಇರ್ದೆಯವರು, ಆಟಿ ತಿಂಗಳ ಮಹತ್ವದ ಬಗೆಗೆ ಉಪನ್ಯಾಸ ನೀಡಿದರು. ಆಟಿ ತಿಂಗಳಲ್ಲಿ ಯಾವುದೇ ಶುಭ ಕಾರ್ಯಕ್ರಮಗಳಿಗೆ ಚಾಲನೆ ಕೊಡುವುದಿಲ್ಲ. ಬದಲಾಗಿ ಮನೆ ಹಾಗೂ ಊರಿಗೆ ಬಂದಿರುವ ಮಾರಿಯನ್ನು ಕಳೆಯುವ ಕಾರ್ಯ ನಡೆಯುತ್ತದೆ. ಅದಕ್ಕಾಗಿಯೇ ಬ್ರಹ್ಮನಿಂದ ಕಳುಹಿಸಲ್ಪಟ್ಟವನೆಂಬ ನಂಬಿಕೆ ಉಳ್ಳ ಆಟಿ ಕಳೆಂಜ ಮನೆ ಮನೆಗೆ ಬರುವುದು ವಾಡಿಕೆ. ಬಂದಂತಹ ಆತನಿಗೆ ಧವಸ ಧಾನ್ಯಗಳನ್ನಿತ್ತು ಸಮಾಧಾನಪಡಿಸಿದರೆ ಮಾರಿ ತೊಲಗುವುದೆಂಬ ವಿಶ್ವಾಸ ತುಳುನಾಡಿನಲ್ಲಿದೆ. ಇಷ್ಟಲ್ಲದೆ ಆಟಿ ಅಮಾವಾಸ್ಯೆ ಎಂಬುದೂ ತುಳು ಕ್ಯಾಲೆಂಡರ್‍ನ ಬಹಳ ಮಹತ್ವಪೂರ್ಣವಾದ ದಿನ ಎಂದರು. ಹಾಲೆಯ ಮರದ ಕಷಾಯವನ್ನು ಆಟಿ ಅಮಾವಾಸ್ಯೆಯಂದು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಲೆ ತಲೆಮಾರುಗಳಿಂದ ಇಂತಹ ಸಂಪ್ರದಾಯ ನಡೆದುಬಂದಿದ್ದು, ಹಿಂದಿನ ದಿನ ರಾತ್ರಿಯೇ ಹಾಲೆ ಮರದ ಬಳಿಗೆ ತೆರಳಿ ನೂಲು ಹಾಗೂ ನಾಣ್ಯದಿಂದ ಮರವನ್ನು ಸುತ್ತಿ, ಮರವನ್ನು ಗುರುತು ಹಾಕಿ ಬರುವ ಪದ್ಧತಿ ಇದೆ. ಮರುದಿನ ಸೂರ್ಯೋದಯಕ್ಕೆ ಮುನ್ನವೇ ಆ ಮರದೆಡೆಗೆ ತೆರಳಿ ಬೊಳ್ಳುಕಲ್ಲಿನಿಂದ ಮರದ ತೊಗಟೆಯನ್ನು ಜಜ್ಜಿ ತಂದು ಕಷಾಯ ಮಾಡುವುದು ನಿಯಮ. ಕೆಲವರು ಹಾಲೆಮರ ಎಂದು ಕಾಸರಕನ ಮರದ ಹಾಲನ್ನು ಸೇವಿಸಿ ಅಸ್ವಸ್ಥರಾದದ್ದೂ ಇದೆ, ಈ ಬಗ್ಗೆ ಜಾಗ್ರತೆ ವಹಿಸಿಕೊಳ್ಳಬೇಕು ಎಂದೂ ಅವರು ಹೇಳಿದರು. ಕಾರ್ಯಕ್ರಮದಲ್ಲಿ ನಮ್ಮ ನಡುವಿನ ಔಷಧೀಯ ಸಸ್ಯಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ನೀಡಿದ ಅಂಬಿಕಾ ವಿದ್ಯಾಲಯದ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ನಮ್ಮ ನಡುವೆ ಇರುವಂತಹ ಪ್ರತಿಯೊಂದು ಸಸ್ಯ, ಗಿಡ, ಬಳ್ಳಿಗಳಲ್ಲೂ ಔಷಧೀಯ ಸತ್ವಗಳಿವೆ. ಅದನ್ನು ಗುರುತಿಸುವಲ್ಲಿ ನಾವು ಎಡವುತ್ತಿದ್ದೇವೆ. ನಮ್ಮ ಹಿಂದಿನವರ ಜ್ಞಾನದ ಮುಂದೆ ಈಗಿನ ತ್ರೀ-ಜಿ, ಫೋರ್-ಜಿಗಳೆಲ್ಲ ಏನೂ ಅಲ್ಲ. ನಮ್ಮ ದೇಹ ಸಂಬಂಧಿ ಕಾಯಿಲೆಗಳಿಗೂ ಪ್ರಕೃತಿಯಲ್ಲಿ ಪರಿಹಾರಗಳಿವೆ. ಗ್ಯಾಂಗ್ರಿನ್‍ಗೆ ಒಳಗಾಗಿ ಕಾಲನ್ನೇ ಕತ್ತರಿಸಬೇಕೆಂದು ನುರಿತ ವೈದ್ಯರು ಹೇಳಿರುವಂತಹ ಪ್ರಕರಣಗಳನ್ನೂ ಔಷಧೀಯ ಗುಣಗಳುಳ್ಳ ಸಸ್ಯಗಳಿಂದ ಪರಿಹರಿಸಿರುವ ಉದಾಹರಣೆಗಳಿವೆ ಎಂದು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಬೇರೇ ಬೇರೆ ರಾಷ್ಟ್ರಗಳ ಮೇಲೆ ವಿದೇಶಿ ಆಕ್ರಮಗಳಾದ ನಂತರ ದಾಳಿಗೊಳಗಾದ ರಾಷ್ಟ್ರಗಳ ಮೂಲ ಸಂಸ್ಕøತಿ ನಾಶವಾಗಿ ಹೋಗಿದೆ. ಆದರೆ ಭಾರತದಲ್ಲಿ ಮಾತ್ರ ವಿದೇಶೀ ದಾಳಿ, ಆಳ್ವಿಕೆಯ ನಂತರವೂ ಮೂಲ ಸಂಸ್ಕøತಿ ಹಾಗೆಯೇ ಉಳಿದುಕೊಂಡಿದೆ. ಇದಕ್ಕೆ ಕಾರಣ ನಮ್ಮ ವಿಚಾರಗಳ ಬಗೆಗೆ ನಮ್ಮಲ್ಲಿರುವ ನಂಬಿಕೆಯೇ ಹೊರತು ಇನ್ನೇನೂ ಅಲ್ಲ. ಆದ್ದರಿಂದ ಅಂತಹ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಆಗಬೇಕಿದೆ. ಭಾರತೀಯ ಉತ್ಕøಷ್ಟ ಸಂಗತಿಗಳ ಬಗೆಗೆ ಅದರಲ್ಲೂ ಔಷಧೀಯ ವಿಚಾರಗಳ ಬಗೆಗೆ ಸಂಶೋಧನೆಗಳಾಗಬೇಕಿದೆ. ಹಾಗಾದ ಪಕ್ಷದಲ್ಲಿ ಎಷ್ಟೋ ನೋಬೆಲ್ ಪ್ರಶಸ್ತಿಗಳು ನಮ್ಮದಾಗಲಿವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲ ರಾಮಚಂದ್ರ ಭಟ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಎಲ್ಲಾ ಬೋಧಕ ಮತ್ತು ಬೋಧಕೇತರ ವೃಂದ ಉಪಸ್ಥಿತರಿದ್ದರು. ಅಂಬಿಕಾ ವಿದ್ಯಾಲಯದ ಶಿಕ್ಷಕಿಯರಾದ ಶೈಲಾ, ಮಾಲತಿ ಹಾಗೂ ಸುಮನಾ ಭಟ್ ಪ್ರಾರ್ಥಿಸಿದರು. ಶಿಕ್ಷಕ ರಮೇಶ್ ಸ್ವಾಗತಿಸಿದರು. ಪ್ರಾಂಶುಪಾಲೆ ಮಾಲತಿ ಭಟ್ ಪ್ರಸ್ತಾವನೆಗೈದರು. ಶಿಕ್ಷಕಿ ಸುಚೇತಾ ವಂದಿಸಿದರು. ಶಿಕ್ಷಕಿ ಕೃತಿಕಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ವತಿಯಿಂದ ಆಟಿಯ ಊಟದ ಸಹಭೋಜನ ನಡೆಯಿತು. ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ನಟ್ಟೋಜ ದಂಪತಿ ಅಕ್ಕಿಗೆ ಹಾಲನ್ನೆರೆಯುವುದರ ಮೂಲಕ ವಿಶೇಷ ರೀತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.