ಮಂಗಳೂರು: ಮಕ್ಕಿ ಮನೆ ಕಲಾವೃಂದ ಮಂಗಳೂರು ಪ್ರತಿಭಾ ಪ್ರಸ್ತುತಿಯ 25 ನೇ ಸಂಚಿಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು ಮಕ್ಕಿಮನೆ ಕಲಾವೃಂದ ಫೇಸ್ಬುಕ್ ಪೇಜಿನಲ್ಲಿ ನಡೆಯಲಿದೆ. ಇನ್ನು ಈ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.
ಅದೊಂದು ಭೀಮಬಲದ ಸಂಘಟನೆ. ಸಾಂಸ್ಕøತಿಕ ಪ್ರತಿಭೆಗಳನ್ನು ಅಪ್ಪಿ ಬಿಗಿದಪ್ಪಿ ತೋಳತೆಕ್ಕೆಗೆ ಸೇರಿಸಿ ಬಳಸಿ ಬೆಳೆಸಿ ಅವರ ಪ್ರತಿಭೆಗಳಿಗೆ ಜಲಧಾರೆಯನ್ನು ಎರೆದು ಪೋಷಿಸುವ ಸಾಂಸ್ಕೃತಿಕ ಸಂಘಟನೆ. ಕಲಾರಸಿಕರನ್ನು ಕೈ ಬೀಸಿ ಕರೆದು ಅವರ ಹೃನ್ಮನಗಳನ್ನು ಪ್ರಫುಲ್ಲಿತಗೊಳಿಸಿ ಆಹಾ ಎಂತಹಾ ಕಾರ್ಯಕ್ರಮ….! ಇಂತಹಾ ಕಾರ್ಯಕ್ರಮ ಆಯೋಜನೆ ಮಾಡಿದ ಆಯೋಜಕರಿಗೆ ಶಹಬ್ಬಾಸ್ ಎಂದು ಮೆಚ್ಚುಗೆಯ ನುಡಿಗಳು ಹೊರಬರುತ್ತದೆ. ಜಾತಿ ಮತ ಭೇದವಿಲ್ಲದೇ, ಲಿಂಗ, ಪ್ರಾದೇಶಿಕ ಎಂಬ ಭಾವವಿಲ್ಲದೇ ಪಂಪನ ಮಾನವ ಕುಲ ತಾನೊಂದೆವಲಂ ಎಂಬ ನಾಣ್ಣುಡಿಯಂತೆ ಹೆಜ್ಜೆಗೆ ಹೆಜ್ಜೆ ಇಟ್ಟು ಮುನ್ನಡೆಯುತ್ತಿರುವ ಸಂಘಟನಾ ಚತುರತೆಯಿಂದ ಕೂಡಿದ ಸಂಸ್ಥೆಯೇ ಮಕ್ಕಿಮನೆ ಕಲಾವೃಂದ ಮಂಗಳೂರು. ನಾಡಿನ ಯಾವುದೇ ಜಾತ್ರೆ ಉತ್ಸವಗಳಿರಲಿ, ಮಹಾ ಮಸ್ತಕಾಭಿಷೇಕ ಬ್ರಹ್ಮಕಲಶಗಳೇ ಇರಲಿ ಅಲ್ಲಿ ಮಕ್ಕಿಮನೆ ಕಲಾವೃಂದದ ಐಸಿರಿ ಇದ್ದೇ ಇರುತ್ತದೆ. ಹಾಡುಗಾರಿಕೆ, ನೃತ್ಯ, ಯಕ್ಷಗಾನ, ವಿವಿಧ ರೀತಿಯ ಸಾಂಸ್ಕೃತಿಕ ಕಲರವ ಮೇಳೈಸುತ್ತದೆ. ಜನಮಾನಸದಿಂದ ಪ್ರಶಂಸೆಯ ಸುರಿಮಳೆಯೇ ಆಗುತ್ತದೆ. ಇಂತಹ ಅಭೂತಪೂರ್ವ ಕಾರ್ಯಕ್ರಮಗಳನ್ನು ಜನರೆಂದೂ ಮರೆಯುವುದಿಲ್ಲ. ಆದರೆ ಇಂತಹ ಅಪೂರ್ವ ಕಾರ್ಯಕ್ರಮಗಳ ಸಂಘಟಕ ಸಾತ್ವಿಕ ಮನಸ್ಸಿನ, ಸಹೃದಯೀ, ಕಲಾರಸಿಕ ಸುದೇಶ್ ಜೈನ್ ಮಕ್ಕಿಮನೆ.
ಸುದೇಶ್ ಜೈನ್ ಮಕ್ಕಿಮನೆ ಅವರ ಪರಿಕಲ್ಪನೆಯ ಮಕ್ಕಿಮನೆ ಕಲಾವೃಂದದ ಕಲಾ ಸಿರಿಯಲ್ಲಿ ಅನೇಕ ಗಣ್ಯಾತಿಗಣ್ಯರು ಭಾಗವಹಿಸಿದ್ದಾರೆ. ಇತ್ತೀಚೆಗೆ ಕೊರೋನಾ ಸಮಯದಲ್ಲಿ ಮಕ್ಕಿಮನೆ ಕಲಾವೃಂದದ ಸೊಬಗು ಆನ್ಲೈನ್ ಮಾಧ್ಯಮದಲ್ಲಿ ಮೂಡಿಬಂತು. ಈ ಸಾರಿ ಸಾಂಸ್ಕೃತಿಕ ಕಲರವ ಮನೆಮನಗಳನ್ನು ತಲುಪಿತು. ಕಲಾವಿದರ ದಂಡೇ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಿ ಮನಸೂರೆಗೊಂಡಿತು.
ಮಕ್ಕಿಮನೆ ಕಲಾವೃಂದ ಮಂಗಳೂರು ಇವರು ಆನ್ಲೈನ್ ಮಾಧ್ಯಮದ ಮೂಲಕ ಪ್ರತಿಭಾ ಪ್ರಸ್ತುತಿ ಎಂಬ ಕಾರ್ಯಕ್ರಮಗಳ ಸರಣಿಯನ್ನು ಪ್ರಾರಂಭಿಸಿತು. ಇದರಲ್ಲಿ ಸಿನೆಮಾ, ಕ್ರೀಡಾ ತಾರೆಯರ ಸಂದರ್ಶನ, ನೃತ್ಯಗಳು, ಹಾಡುಗಳು, ಅಡುಗೆ ಪಾಕಗಳು, ಗ್ರಾಮೀಣ ಸೊಗಡು, ಚಿತ್ರ ರಚನೆ, ಯೋಗಾಸನ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ಮೂಡಿಬಂದವು. ರಾಜಕೀಯ, ಸಿನೆಮಾ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿ ಮಕ್ಕಿಮನೆ ಕಲಾವೃಂದ ಮಂಗಳೂರು ಎಂಬ ಹೆಮ್ಮರದ ಪರಿಚಯವಾಯಿತು. ಈ ಹೆಮ್ಮರದ ನೆರಳು ಜಗದಗಲ ಹರಡಿ ಕಾರ್ಯಕ್ರಮದಲ್ಲಿ ದೇಶ ವಿದೇಶದ ಕಲಾಸಕ್ತರು ಭಾಗವಹಿಸುತ್ತಿದ್ದಾರೆ.
ಮಕ್ಕಿಮನೆ ಕಲಾವೃಂದ ಮಂಗಳೂರು ಎಂಬ ಸಾಂಸ್ಕೃತಿಕ ಸಂಘಟನೆ ಮತ್ತಷ್ಟೂ ಮಗದಷ್ಟೂ ಹೆಮ್ಮರವಾಗಿ ವಿಶಾಲವಾಗಿ ಬೆಳೆದು ಕಲಾಸಕ್ತರ ಮನ ತಣಿಸಲಿ, ಶ್ರೇಷ್ಟ ಕಲಾವಿದರು ಹೊರಹೊಮ್ಮಲಿ, ನಾಡಿನ ಸಂಸ್ಕೃತಿ, ಭವ್ಯ ಪರಂಪರೆ ಉಳಿದು ಬೆಳೆಯಲಿ ಎಂಬುದೇ ನಾಡಿನ ಸಾತ್ವಿಕ ಮನಸ್ಸುಗಳ ಆಶಯವಾಗಿದೆ.