ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ವರ್ಷ 2020-21ರ ಸಾಲಿನ ಸ್ನಾತಕೋತ್ತರ ವಿಭಾಗದ ಬೆಸ ಸೆಮಿಸ್ಟರ್ ಪರೀಕ್ಷೆಗಳು ಆಗಸ್ಟ್ 11ರಂದು ಆರಂಭಗೊಂಡಿದೆ. ಶೈಕ್ಷಣಿಕ ವೇಳಾಪಟ್ಟಿಯಂತೆ ಈ ಪರೀಕ್ಷೆಗಳು ಎಪ್ರಿಲ್/ಮೇ ತಿಂಗಳಲ್ಲಿ ನಡೆಯಬೇಕಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಮತ್ತು ಕೋವಿಡ್ ನಿಯಂತ್ರಣ ಕ್ರಮವಾದ ಲಾಕ್ ಡೌನ್‍ನಿಂದಾಗಿ ಈ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಸರಕಾರವು ವಿಧಿಸಿರುವ ಎಲ್ಲಾ ರೀತಿಯ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 235 ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪ್ರಥಮ ದಿನದ ಪರೀಕ್ಷೆಯನ್ನು ಎದುರಿಸಿದ್ದಾರೆ. ಮಂಗಳೂರು ವಿವಿಯ ಸ್ನಾತಕ ವಿಭಾಗದ ಪರೀಕ್ಷೆಗಳು ಎಪ್ರಿಲ್ ತಿಂಗಳಲ್ಲಿ ಆರಂಭಗೊಂಡಿದ್ದರೂ ಪೂರ್ತಿಯಾಗಿ ಕೊನೆಗೊಂಡಿರಲಿಲ್ಲ. ಮಂಗಳೂರು ವಿವಿಯು ಬಾಕಿಯಾಗಿರುವ ಪರೀಕ್ಷೆಗಳನ್ನು ಆಗಸ್ಟ್ 2ರಿಂದ ಆರಂಭಿಸಿದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಮಾಣ ಹೆಚ್ಚಳದಿಂದಾಗಿ ಆಗಸ್ಟ್ 4ರಿಂದ ಎಲ್ಲಾ ಪರೀಕ್ಷೆಗಳನ್ನು ಪುನಃ ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಇದೀಗ ವಿವಿಯ ವೇಳಾಪಟ್ಟಿಯಂತೆ ಈ ಪರೀಕ್ಷೆಗಳನ್ನೂ ಸಹ ಪುನರಾರಂಭಿಸಲಾಗಿದೆ. ಸಂತ ಫಿಲೋಮಿನಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸ್ನಾತಕ ವಿಭಾಗದ ಒಟ್ಟು 896 ವಿದ್ಯಾರ್ಥಿಗಳು ಪ್ರಥಮ ದಿನದ ಪರೀಕ್ಷೆಯನ್ನು ಎದುರಿಸಿದ್ದಾರೆ.