Monday, November 18, 2024
ಪುತ್ತೂರು

ಎಸ್‍ಎಸ್‍ಎಲ್‍ಸಿಯಲ್ಲಿ ಪೂರ್ಣಾಂಕ ಪಡೆದು, ಅಂಬಿಕಾ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ದಾಖಲಾತಿ ಪಡೆದ ಮೂವರು ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ- ಕಹಳೆ ನ್ಯೂಸ್

ಪುತ್ತೂರು : ಎಸ್‍ಎಸ್‍ಎಲ್‍ಸಿಯಲ್ಲಿ 625ಕ್ಕೆ 625 ಅಂಕ ದಾಖಲಿಸಿ ರಾಜ್ಯಕ್ಕೆ ಟಾಪರ್‍ಗಳಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಾದ ಶ್ರೀಶ ಶರ್ಮ, ಅನನ್ಯ ಹಾಗೂ ತನೀಶಾ ರೈ ತಮ್ಮ ಮುಂದಿನ ಪಿಯು ಶಿಕ್ಷಣಕ್ಕಾಗಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಲ್ಲಿ ದಾಖಲಾತಿ ಪಡೆದುಕೊಂಡಿದ್ದು, ವಿದ್ಯಾರ್ಥಿಗಳ ಸಾಧನೆಯನ್ನ ಗುರುತಿಸಿ ಬಪ್ಪಳಿಗೆಯಲ್ಲಿ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಮೂರೂ ಮಂದಿ ಸಾಧಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ಸಿಇಟಿ, ಜೆಇಇ, ನೀಟ್ ಕೋಚಿಂಗ್ ಅನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಘೋಷಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಪೂರ್ಣಾಂಕ ಗಳಿಸಿ ರಾಜ್ಯವೇ ಹೆಮ್ಮೆಪಡುವಂತೆ ಮಾಡಿರುವುದು ಯಶಸ್ಸಿನ ಮೊದಲ ಹೆಜ್ಜೆಯಾದರೆ ಮುಂದಿನ ದಿನಗಳಲ್ಲಿ ಅತ್ಯುನ್ನತ ಅವಕಾಶಗಳು ನಮ್ಮ ಮುಂದೆ ಬರಲಿವೆ ಎಂಬ ಆಶಯದೊಂದಿಗೆ ಕರ್ತವ್ಯ ನಿರತರಾಗಬೇಕು. ಆಗ ಮತ್ತಷ್ಟು ಸಾಧನೆಗಳು ನಮ್ಮದಾಗಲಿವೆ ಎಂದು ನುಡಿದರು. ಪ್ರಸ್ತುತ ಸಂಪೂರ್ಣ ಅಂಕವನ್ನು ತಮ್ಮದಾಗಿಸಿಕೊಂಡಿರುವುದು ಹೆತ್ತವರಿಗೆ, ಓದಿದ ಶಿಕ್ಷಣ ಸಂಸ್ಥೆಗೆ, ಶಿಕ್ಷಣ ಇಲಾಖೆಗೆ ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿನ ಅಧ್ಯಯನಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡದ್ದರಿಂದ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಿಗೂ ಅಪಾರ ಗೌರವ ಮತ್ತು ಹೆಮ್ಮೆ ತಂದಿದೆ. ಇಂತಹ ಸಂಭ್ರಮವನ್ನು ಮುಂದಿನ ದಿನಗಳಲ್ಲೂ ಎಲ್ಲರೂ ಅನುಭವಿಸುವಂತಾಗಬೇಕು. ಸಾಧನೆ ಎಂಬುದು ಹತ್ತನೆಯ ತರಗತಿಗೆ ಮಾತ್ರ ಸೀಮಿತವಾಗದೆ ಭವಿಷ್ಯದಲ್ಲೂ ಸಾಕಾರಗೊಳ್ಳುವಂತಾಗಬೇಕು. ಆಗ ನಿಜವಾದ ಸಾಧಕರೆಂಬುದು ದೃಢಗೊಳ್ಳುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಉಚಿತ ಶಿಕ್ಷಣ ಅಂದರೆ ವಿದ್ಯಾರ್ಥಿಗಳ ಹೆಗಲ ಮೇಲೆ ಇರಿಸುವಂತಹ ಹೆಚ್ಚಿನ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಯಾವ ಸಾಧನೆಯೊಂದಿಗೆ ಪಿಯು ಹಂತಕ್ಕೆ ದಾಖಲಾಗುತ್ತಾರೋ ಅಂತಹದೇ ಸಾಧನೆಯನ್ನು ಮುಂದುವರಿಸುವುದಕ್ಕೆ ಪ್ರಯತ್ನಿಸಬೇಕು. ಪ್ರಥಮ ಪಿಯುಸಿಯಲ್ಲಿ ಪೂರ್ಣಾಂಕ ಅಲ್ಲದೇ ಹೋದರೂ ಅತ್ಯಂತ ಸನಿಹದ ಅಂಕಗಳನ್ನು ಪಡೆಯುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳ ನಿಜವಾದ ಜೀವನ ಹಾಗೂ ಸ್ಪರ್ಧೆಗಳು ಪಿಯು ಹಂತದಿಂದ ಆರಂಭಗೊಳ್ಳಲಿವೆ. ವೈದ್ಯಕೀಯದಂತಹ ಶಿಕ್ಷಣ ಪಡೆಯಬೇಕಾದಲ್ಲಿ ಸರಿಸುಮಾರು ಒಂದೂಮುಕ್ಕಾಲು ಲಕ್ಷ ಜನ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಆದರೆ ಕೇವಲ ಐದು ಸಾವಿರದೊಳಗೆ ರ್ಯಾಂಕ್ ಬರಬೇಕಾದ ಅನಿವಾರ್ಯತೆ ಇದೆ. ಇಂತಹ ಸಂಗತಿಗಳು ಪಿಯು ಹಂತದ ಗಂಭೀರತೆಯನ್ನು ಅನಾವರಣಗೊಳಿಸುತ್ತವೆ ಎಂದರು. ಎಸ್‍ಎಸ್‍ಎಲ್‍ಸಿ ಪೂರ್ಣಾಂಕದ ಹಿನ್ನೆಲೆಯಲ್ಲಿ ಅನೇಕ ಸಂಘ ಸಂಸ್ಥೆಗಳಿಂದ, ಸಮುದಾಯಗಳಿಂದ ಮಾನ ಸನ್ಮಾನಗಳು ದೊರಕಬಹುದು. ಆದರೆ ಅಂತಹ ಎಲ್ಲ ಗೌರವಗಳು ವಿದ್ಯಾರ್ಥಿಗಳ ಮುಗ್ಧತೆಯನ್ನು ಅಪಹರಿಸುವಂತಾಗಬಾರದು. ದೇವರಂತಹ ಮುಗ್ಧ ಮಕ್ಕಳು ಅಹಂಕಾರಪಡದೆ ಈಗಿನ ಸಾಧನೆ ಹಾಗೂ ಮನಃಸ್ಥಿತಿಯೊಂದಿಗೆ ಪಿಯು ಅಧ್ಯಯನಕ್ಕೆ ಅಡಿಯಿಡಬೇಕು. ಅಂತಿಮವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜಕ್ಕೆ ಭಾರತರತ್ನವಾಗಿ ದೊರಕುವಂತಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳಾದ ಶ್ರೀಶ ಶರ್ಮ, ಅನನ್ಯ ಹಾಗೂ ತನೀಶಾ ರೈ ಅನಿಸಿಕೆ ವ್ಯಕ್ತಪಡಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲ ರಾಮಚಂದ್ರ ಭಟ್, ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಸಾಧಕ ವಿದ್ಯಾರ್ಥಿಗಳ ಹೆತ್ತವರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್ ಸ್ವಾಗತಿಸಿದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ. ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ಸುಚಿತ್ರಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.