ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ರಾಜಕೀಯ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪುಂಖಾನುಪುಂಖವಾಗಿ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಬುದ್ಧಿವಂತ ಮತದಾರರು ಮಾತ್ರ ಅಭ್ಯರ್ಥಿಗಳ ವೈಯಕ್ತಿಕ ಹಿನ್ನೆಲೆಯನ್ನು ನೋಡಿ ಮತ ಹಾಕಲು ಸಜ್ಜಾಗಿದ್ದಾರೆ. ಈ ಪೈಕಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರಿಗೆ ರೈತಸಂಘದ ನಾಯಕ ಮನೋಹರ ಶೆಟ್ಟಿ ಬೆಂಬಲ ಸೂಚಿಸಿದ್ದಾರೆ.
ರಾಜೇಶ್ ನಾಯಕ್ ಅವರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವವರು. ತನ್ನ ಕ್ಷೇತ್ರದಲ್ಲಿ ಕೃಷಿಕ್ರಾಂತಿಯ ಮೂಲಕ ಹೆಸರಾದವರು. ಸಾವಯವ ಕೃಷಿಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಾ, ಇತರ ರೈತರಿಗೂ ಮಾರ್ಗದರ್ಶನ ಮಾಡುತ್ತಾ ಬಂದವರು. ಗೋ ಗ್ರೀನ್ ಬಂಟ್ವಾಳ ಎನ್ನುವ ನಿಟ್ಟಿನಲ್ಲಿ ರಾಜೇಶ್ ನಾಯಕ್ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಸದಾ ಹಸಿರಿನ ಬಗ್ಗೆ ಕಾಳಜಿ ವಹಿಸುತ್ತಿರುವ ರಾಜೇಶ್ ನಾಯಕ್ ಅವರನ್ನು ಪ್ರಗತಿಪರ ಕೃಷಿಕರು ಬೆಂಬಲಿಸುತ್ತಿದ್ದೇವೆ ಎಂದು ಹಸಿರುಸೇನೆಯ ಮುಖಂಡ ಮನೋಹರ್ ಶೆಟ್ಟಿ ತಿಳಿಸಿದ್ದಾರೆ.
ಕೃಷಿ ಹಿನ್ನೆಲೆಯಿಂದ ಬಂದಿರುವ ಹಲವಾರು ರಾಜಕಾರಣಿಗಳು ಜಿಲ್ಲೆಯಲ್ಲಿದ್ದಾರೆ. ಈ ಪೈಕಿ ನೈಜವಾಗಿ ಕೃಷಿಯ ಬಗ್ಗೆ ಆಸಕ್ತಿ ವಹಿಸಿ, ಅದರಲ್ಲಿ ತೊಡಗಿಸಿಕೊಂಡವರು ಯಾರೂ ಇಲ್ಲ. ಆದರೆ, ರಾಜೇಶ್ ನಾಯಕ್ ಅವರು ರಾಜಕೀಯದಲ್ಲಿ ಸಕ್ರಿಯಾಗಿರುವ ಜೊತೆಗೆ ಕೃಷಿ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ನೈಜವಾಗಿ ಹಸಿರು, ಪರಿಸರದ ಬಗ್ಗೆ ಕಾಳಜಿಯಿದೆ. ಹೀಗಾಗಿ ಸಮಾನ ಮನಸ್ಕ ಕೃಷಿಕರು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.