Sunday, November 24, 2024
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಗೊಂದಲ ; ಉಪ್ಪಿನಂಗಡಿಯಲ್ಲಿ ನಡೆದ ಘಟನೆಯ ಸತ್ಯಾಂಶ ಏನು..!? ವಿಶ್ವಹಿಂದೂ ಪರಿಷತ್, ಬಜರಂಗದಳದ ಉಪ್ಪಿನಂಗಡಿ ಘಟಕದಿಂದ ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ಹೇಳಿದ್ದೇನು..!? – ಕಹಳೆ ನ್ಯೂಸ್

ಉಪ್ಪಿನಂಗಡಿ : ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ನಡೆದಗೊಂದಲದ ಕುರಿತು ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗ ದಳದ ಉಪ್ಪಿನಂಗಡಿ ಘಟಕ ಮಾಧ್ಯಮಗಳಿಗೆ ಪ್ರಕಟಣೆಯನ್ನು ನೀಡಿದೆ.

ಪ್ರಕಟಣೆಯಲ್ಲಿ ಏನಿದೆ…!?

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗ ದಳದ ಉಪ್ಪಿನಂಗಡಿ ಘಟಕದಿಂದ ಅನಿವಾರ್ಯವಾಗಿ ಪ್ರಕಟಿಸುತ್ತಿದ್ದೇವೆ.
ಅಗಸ್ಟ್ ೧೩ ರಂದು ” ಉಪ್ಪಿನಂಗಡಿಯಲ್ಲಿ ನಡೆದ ಘಟನೆಯ ಸತ್ಯಾಂಶ “
ಆತ್ಮೀಯರೇ,
ಅತ್ಯಂತ ಬೇಸರದ ಘಟನೆಯೊಂದು ಉಪ್ಪಿನಂಗಡಿಯಲ್ಲಿ ದಿನಾಂಕ ೧೩/೮/೨೦೨೧ ರಂದು ಘಟಿಸಿದೆ. ವ್ಯಾಪಿಸುತ್ತಿರುವ ಕೊರೋನಾ ಮೂರನೇ ಅಲೆಯ ಮುಂಜಾಗ್ರತಾ ಕ್ರಮದ ಬಗ್ಗೆ ಸಮಾಲೋಚನೆ ನಡೆಸಲು ಹಾಗೂ ಅದೇ ಸಭೆಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲು ತೀರ್ಮಾನಿಸಿ ಕಾರ್ಯಕ್ರಮವನ್ನು ಉಪ್ಪಿನಂಗಡಿಯ ಶಿಶು ಮಂದಿರದ ಬಳಿ ಆಯೋಜಿಸಲಾಗಿತ್ತು. ಸುರಿಯುತ್ತಿದ್ದ ಭಾರೀ ಮಳೆಯನ್ನೂ ಲೆಕ್ಕಿಸದೆ ನಿರೀಕ್ಷಿಸಿದಕ್ಕಿಂತ ಹೆಚ್ಚಿನ ರಾಷ್ಟ್ರ ಭಕ್ತ ಬಂಧುಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಮಧ್ಯೆ ಕಾರ್ಯಕ್ರಮ ಆರಂಭಗೊಂಡು ವಂದೇ ಮಾತರಂ ಗೀತೆಯನ್ನು ಹಾಡಲಾಗುತ್ತಿತ್ತು. ಈ ವೇಳೆ ಯುವಕನೋರ್ವ ಅಸಹನೆಯ ಮುಖಭಾವದೊಂದಿಗೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಏರು ದ್ವನಿಯಲ್ಲಿ ಕಾರ್ಯಕ್ರಮ ನಿಲ್ಲಿಸಿ, ನಿಮಗಿಲ್ಲಿ ಕಾರ್ಯಕ್ರಮ ಮಾಡಲು ಅಧಿಕಾರ ಕೊಟ್ಟವರಾರು ? ರಸ್ತೆಯಲ್ಲಿ ಈ ಪರಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದೆಂದರೆ ಏನರ್ಥ ಎಂದೆಲ್ಲಾ ಪ್ರಶ್ನಿಸುತ್ತಾ ಅನುಚಿತವಾಗಿ ವರ್ತಿಸಿದನು. ಸಭೆಯಲ್ಲಿದ್ದ ಎಲ್ಲಾರೂ ಎದ್ದು ನಿಂತು ವಂದೇ ಮಾತರಂ ಗೀತೆಗೆ ಗೌರವ ಸಲ್ಲಿಸುತ್ತಿದ್ದಾಗ , ಯುವಕನಿಂದ ವ್ಯಕ್ತಗೊಂಡ ಈ ಅನುಚಿತ ನಡೆಯನ್ನು ಸಹಿಸಿಕೊಂಡು , ದಯವಿಟ್ಟು ೫ ನಿಮಿಷ ಮೌನವಾಗಿರಿ. ಏನೇ ಸಮಸ್ಯೆಯಾದರೂ ಬಗೆಹರಿಸುತ್ತೇವೆ. ವಂದೇ ಮಾತರಂ ಗೀತೆಗೆ ಅಗೌರವ ತೋರಬೇಡಿ ಎಂದು ರಕ್ಷಣೆಗೆ ನಿಯುಕ್ತಿಗೊಂಡ ಕಾರ್ಯಕರ್ತರು ವಿನಂತಿಸಿದ್ದರು. ಯಾವುದನ್ನೂ ಕೇಳುವ , ವಂದೇ ಮಾತರಂ ಗೀತೆಗೆ ಗೌರವ ಸಲ್ಲಿಸುವ ವ್ಯವಧಾನದಲ್ಲಿ ಇಲ್ಲದ ಸ್ಥಿತಿಯಲ್ಲಿದ್ದ ಈ ಯುವಕ ನೇರವಾಗಿ ವೇದಿಕೆಯ ಬಳಿಗೆ ಹೋಗಿ ಕಾರ್ಯಕ್ರಮ ನಿಲ್ಲಿಸಿ ಎಂದು ಕೂಗಾಡಿ, ವಿಲಕ್ಷಣ ವರ್ತನೆ ತೋರಿದಾಗ ಅನಿವಾರ್ಯವಾಗಿ ರಕ್ಷಣೆಗೆ ನಿಯುಕ್ತಿಗೊಂಡವರು ಬಲಪ್ರಯೋಗದಿಂದ ಆತನನ್ನು ಸ್ಥಳದಿಂದ ಹೊರ ಕಳುಹಿಸಿದರು. ಯಾವಾಗ ಬಲಪ್ರಯೋಗ ವಾಯಿತೋ ಆವಾಗ ರಸ್ತೆಯ ಪಾರ್ಶ್ವದಲ್ಲಿದ್ದ ವಾಹನಗಳು ಅಡೆತಡೆಯಾಗದೆ ಅವರ ಕಾರು ಸುಲಲಿತವಾಗಿ ಸಂಚರಿಸಲು ಸಾಧ್ಯವಾದದ್ದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗಿಂತಲೂ ಕಾರ್ಯಕ್ರಮವನ್ನು ಹಾಳುಗೆಡವುವ ಉದ್ದೇಶದಿಂದ ಯುವಕ ಬಂದಿರುವ ಸಾಧ್ಯತೆಯನ್ನು ಅಲ್ಲಿದ್ದವರು ಅಂದಾಜಿಸಿದ್ದರು. ಮಾತ್ರವಲ್ಲದೆ ಯುವಕನ ಬಗ್ಗೆ ಸ್ಥಳದಲ್ಲಿದ್ದ ಯಾರಿಗೂ ಪರಿಚಯವಿಲ್ಲದ ಕಾರಣ ಹಾಗೂ ವಂದೇ ಮಾತರಂ ಗೀತೆಗೆ ಅಸಹನೆ ತೋರ್ಪಡಿಸಿದ ಕಾರಣಕ್ಕೆ ಯುವಕ ಅನ್ಯ ಮತೀಯ ಮತಾಂಧನಾಗಿರಬಹುದೆಂದು ಶಂಕಿಸಲಾಗಿತ್ತು. ಈ ಬಗ್ಗೆ ಪರಸ್ಪರ ವಿಚಾರಿಸಿದಾಗ ಬಂದಂತಹ ಯುವಕ ಕೆಲ ಸಮಯದ ಹಿಂದೆ ನೆಕ್ಕರೆ ಎಂಬಲ್ಲಿ ಭೂಮಿ ಖರೀದಿಸಿದ್ದ ಹಿಂದೂ ಸಮುದಾಯಕ್ಕೆ ಸೇರಿದವನೆಂದೂ , ಆತನ ಹೆಸರು ಸುಮುಖ ರಾಮ ಎಂದು ತಿಳಿಯಲ್ಪಟ್ಟಿತ್ತು.
ಒಟ್ಟು ಕಾರ್ಯಕ್ರಮದ ಪ್ರಾರಂಭದಲ್ಲೇ ಕಾಡಿದ ಈ ವಿಲಕ್ಷಣ ವರ್ತನೆಯಿಂದಾಗಿ ನೆರೆದಿದ್ದವರ ಮನಸ್ಸು ಕದಡಿತ್ತು. ನಮ್ಮವನಾಗಿ ಈ ರೀತಿಯ ವರ್ತನೆ ತೋರಿದ್ದು ಅಲ್ಲಿದ್ದವರೆಲ್ಲರಿಗೂ ಅತೀವ ನೋವು ತರಿಸಿತ್ತು. ಕಾರ್ಯಕ್ರಮ ಮುಗಿದ ಬಳಿಕ ಅವನ ಮನೆಗೆ ಹೋಗಿ ಅವನ ವರ್ತನೆಯ ಬಗ್ಗೆ ಆತನ ಹೆತ್ತವರ ಗಮನ ಸೆಳೆಯಬೇಕೆಂದು ತೀರ್ಮಾನಿಸಲಾಗಿತ್ತು. ಕಾರ್ಯಕ್ರಮ ಮುಂದುವರಿಯುತ್ತಿತ್ತು. ಹಿರಿಯರೂ ಪ್ರಾಜ್ಞರೂ ಆಗಿರುವ ನಿವೃತ್ತ ಉಪನ್ಯಾಸಕರಾದ ಗಣರಾಜ ಕುಂಭ್ಲೆ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ವ್ಯಕ್ತಿಯೋರ್ವ ವೇದಿಕೆಯ ಮೇಲಿಸಿ ಕುಂಭ್ಲೆಯವರ ಬಳಿ ಇದ್ದ ದ್ವನಿ ವರ್ಧಕವನ್ನು ಕಿತ್ತುಕೊಂಡು , ತಾನು ಕೂಡಾ ಆರ್ ಎಸ್ ಎಸ್ ನವ, ನನಗೂ ಐಟಿಸಿ ಆಗಿದೆ. ನನಗೂ ಸಂಘ ಪರಿವಾರದ ಹಿರಿಯರ ಪರಿಚಯವಿದೆ. ಇದೆಂತಾ ನಿಮ್ಮ ಕಾರ್ಯಕ್ರಮ. ನನ್ನ ತಮ್ಮನಿಗೆ ಹೊಡೆದು ಕಳುಹಿಸಿದ್ದಾರಲ್ಲಾ ಇದು ಸರಿಯಾ ? ಯಾರು ಅವನ ಮೇಲೆ ಕೈ ಮಾಡಿರುತ್ತೀರೋ ಅವರೆಲ್ಲರೂ ನನ್ನ ಮುಂದೆ ಬಂದು ನಿಲ್ಲಬೇಕು. ಇಲ್ಲದಿದ್ದರೆ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ತಾಕೀತು ಮಾಡಿದರು. ಈ ವೇಳೆ ಸಭೆಯಲ್ಲಿದ್ದ ಯುವಕರು ತಾವು ಆರ್ ಎಸ್ ಎಸ್ ನವರೆಂದು ಹೇಳುತ್ತಿದ್ದೀರಿ. ಸಂಘ ಶಿಕ್ಷಣ ಆಗಿದೆ ಎಂದೂ ತಿಳಿಸುತ್ತಿದ್ದೀರಿ. ನೀವು ಹೇಳುವುದು ನಿಜವೆಂದಾದರೆ ಈ ರೀತಿ ವೇದಿಕೆಗೆ ನುಗ್ಗುವುದು ಸರಿಯಾ, ? ದಯವಿಟ್ಟು ವೇದಿಕೆಯಿಂದ ಕೆಳಗಿದು ಬನ್ನಿ. ಏನೇ ಸಮಸ್ಯೆಯಾದರೂ ಕುಳಿತು ಮಾತನಾಡೋಣ ಎಂದು ಪರಿ ಪರಿಯಾಗಿ ವಿನಂತಿಸಿದ್ದರೂ, ಭಾವೋದ್ರೋಕಕ್ಕೆ ತುತ್ತಾದ ರಾಮ್ ಪ್ರತೀಕ್ ವೇದಿಕೆಯಲ್ಲೇ ರಂಪಾಟ ಮಾಡಿ ವಿಲಕ್ಷಣ ವರ್ತನೆ ತೋರಿದ್ದರು. ಈ ವೇಳೆ ವೇದಿಕೆಯ ಬಳಿಯಿಂದ ಮಹಿಳೆಯೋರ್ವರೂ ವಿಕಾರವಾಗಿ ಕಿರುಚಾಡುವುದು ಕೇಳಿ ಬಂದು ಅತ್ತ ಕಡೆಗೆ ಗಮನಿಸಿದಾಗ ರಾಮ್ ಪ್ರತೀಕ್ ರವರ ಪತ್ನಿ ಅಲ್ಲಿದ್ದ ಕಾರ್ಯಕರ್ತರ ಮೇಲೆ ಮುಗಿ ಬಿದ್ದು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರು. ಆಕೆಯ ಕೈಯಿಂದ ಏಟು ತಿಂದರೂ ಮಾತೃ ಭಾವದ ಗೌರವದಿಂದ ಆಕೆಯನ್ನು ಸಮಾಧಾನಿಸಲು ಸ್ಥಳದಲ್ಲಿದ್ದ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ, ಮಾಜಿ ತಾ ಪಂ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಕಾರ್ಯಕರ್ತೆ ಶಿಲ್ಪಾ ಆಚಾರ್ಯ ತಕ್ಷಣವೇ ಆಕೆಯ ಬಳಿಗೆ ಬಂದು ಕಾರ್ಯಕ್ರಮದಲ್ಲಿ ಈ ರೀತಿ ವರ್ತನೆ ತೋರಬಾರದೆಂದು ಪರಿ ಪರಿಯಾಗಿ ವಿನಂತಿಸಿದರೂ , ನಿಮ್ಮ ಕಾರ್ಯಕ್ರಮವನ್ನು ನಿಲ್ಲಿಸುವುದು ಹೇಗೆಂದು ನಮಗೊತ್ತು ಎಂದು ಹೇಳುತ್ತಾ ಮಹಿಳೆಯರಾದಿಯಾಗಿ ಯುವಕರ ಮೇಲೂ ಹಲ್ಲೆ ನಡೆಸಿದ್ದಾರೆ. ವೇದಿಕೆಯ ಮೇಲೆ ರಾಮ್ ಪ್ರತೀಕ್ ಮತ್ತವರ ತಮ್ಮ ಸುಮುಖ ರಾಮ ವೇದಿಕೆಯ ಕೆಳಗೆ ಅವರ ಪತ್ನಿಯ ಅನುಚಿತ ವರ್ತನೆಯಿಂದ ಕಂಗೆಟ್ಟ ಕಾರ್ಯಕರ್ತರು ಅನಿವಾರ್ಯವಾಗಿ ಅವರನ್ನು ಬಲ ಪ್ರಯೋಗದ ಮೂಲಕ ಸ್ಥಳದಿಂದ ಹೊರಗೆ ಕಳುಹಿಸಬೇಕಾಗಿ ಬಂತು. ಸಂಘ ಶಿಕ್ಷಣ ಪಡೆದ ವ್ಯಕ್ತಿಯೇ ಈ ರೀತಿಯ ವರ್ತನೆ ತೋರಿದ್ದು, ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿತ್ತು. ಸಂಘರ್ಷದ ಆಯ್ದ ದೃಶ್ಯಾವಳಿಗಳನ್ನು ತನ್ನ ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿದ್ದ ಆಕೆ , ತನ್ನ ಮನೆಯವರ ಆಕ್ರಮಣಕಾರಿ ವರ್ತನೆಯನ್ನು ದಾಖಲಿಸದೆ , ಅವರನ್ನು ವೇದಿಕೆಯಿಂದ ತೆರವುಗೊಳಿಸುವ ದೃಶ್ಯಾವಳಿಯನ್ನು ಮಾತ್ರ ದಾಖಲಿಸಿ ಯಾವುದೋ ದುರುದ್ದೇಶದಿಂದಲೇ ಬಂದಿರುವ ಸಾಧ್ಯತೆ ಕಂಡು ಬಂದಿದೆ. ಈ ವ್ಯಕ್ತಿಗಳ ಅನುಚಿತ ನಡವಳಿಕೆ ಹಾಗೂ ರಾಷ್ಟ್ರಭಕ್ತಿ ಭರಿತ ಕಾರ್ಯಕ್ರಮವನ್ನು ಹಾಳುಗೆಡವಿದ ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಅವರ ಕಡೆಯಿಂದಲೂ ಹಲ್ಲೆ ನಡೆಸಿರುವ ಆರೋಪ ಹೊರಿಸಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ಸಮಸ್ತ ಹಿಂದೂ ಸಮಾಜದ ಸಂಘಟನೆಗಾಗಿ ಶ್ರಮಿಸುವ ನಮ್ಮೀ ಸಂಘಟನೆಯಿಂದ, ಅನುಚಿತ ವರ್ತನೆ ತೋರಿದ ಕಾರಣಕ್ಕಾಗಿ, ಹಾಗೂ ಸಭೆಯಲ್ಲಿ ದಾಂಧಲೆ ನಡೆಸಿದ ಕಾರಣಕ್ಕಾಗಿ ಅನಿವಾರ್ಯವಾಗಿ ಬಲಪ್ರಯೋಗದ ಮೂಲಕ ಅವರನ್ನು ಸ್ಥಳದಿಂದ ಹೊರಗಟ್ಟಲಾಗಿತ್ತು. ಆದರೆ ಪ್ರಸಕ್ತ ಪ್ರಕರಣವನ್ನು ತಿರುಚಲಾಗಿ , ತನ್ನ ಮೇಲೆ ಜಾತೀಯ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂದೂ, ಏನೂ ತಪ್ಪು ಮಾಡದಿದ್ದರೂ ಅನ್ಯಾಯವಾಗಿ ಹಲ್ಲೆ ನಡೆಸಿದ್ದಾರೆಂದೂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಸಮಾಜದಲ್ಲಿ ವಿಘಟನಾ ಪ್ರಯತ್ನಗಳನ್ನು ನಡೆಸಲಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಆ ದಿನ ನಡೆದ ಘಟನೆಗೆ ಮೂಲ ಕಾರಣವಾದ ಕೃತ್ಯ ಅಕ್ಷಮ್ಯವಾಗಿತ್ತು. ಅನಾಗರಿಕವಾಗಿತ್ತು. ಅವಮಾನಕರವಾಗಿತ್ತು. ಗರಿಷ್ಠ ಸಂಯಮವನ್ನು ತೋರಿದಾಗ್ಯೂ ದೌರ್ಬಲ್ಯವೆಂದು ತಿಳಿದು ವೇದಿಕೆಯಲ್ಲೇ ರಂಪಾಟ ನಡೆಸಿದ ಮಂದಿಯನ್ನು ಸಾಮ ದಾನ ಬೇಧ ತಂತ್ರಗಳೆಲ್ಲವೂ ವಿಫಲವಾದ ಬಳಿಕ ದಂಡೋಪಾಯದ ಬಳಕೆಯಾಗಿತ್ತು. ಇಲ್ಲಿ ಖಂಡಿಸಲಾದದ್ದು ಮತ್ತು ದಂಡಿಸಲಾದದ್ದು ಕೃತ್ಯವನ್ನೇ ಹೊರತು ವ್ಯಕ್ತಿಯನ್ನಲ್ಲ. ಘಟನೆಯ ವೇಳೆ ಅವನ ಜಾತಿಯ ಹಿನ್ನೆಲೆ ತಿಳಿದೇ ಇರಲಿಲ್ಲ. ಈ ಕಾರಣದಿಂದಾಗಿ ಅಂದು ನಡೆದ ಘಟನೆಗೆ ಸಂಬಂಧಿಸಿ ಸತ್ಯವನ್ನು ಶೋಧಿಸದೆ ಕೇವಲ ಘಟನೆಯ ಬಳಿಕ ಆ ಮೂವರು ಹೇಳುವ ಸುಳ್ಳು ಕತೆಯನ್ನೇ ನಂಬಿ ಯಾರೂ ಕೂಡಾ ಸಂಘಟನೆಯ ಬಗ್ಗೆ ತಪ್ಪು ಅಭಿಪ್ರಾಯಕ್ಕೆ ಒಳಗಾಗಬಾರದು. ಫೇಸು ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವ್ಯಕ್ತಿಗಳು ಘಟನೆಯ ಸತ್ಯಾಸತ್ಯತೆ ತಿಳಿಯದೆ , ತಿಳಿಯುವ ಪ್ರಯತ್ನವನ್ನೂ ಮಾಡದೆ ಸಂಘಟನೆಯಿಂದ ಘನಘೋರ ಅನ್ಯಾಯವಾಗಿದೆ ಎಂದು ಅಭಿಪ್ರಾಯಿಸಿರುವುದು ನಮಗೆಲ್ಲಾ ಅತೀವ ಬೇಸರ ತಂದಿದೆ.
ದಾಂಧಲೆ ನಡೆಸಿದ ಮೂವರ ಹಿನ್ನೆಲೆಯನ್ನು ಬಳಿಕ ಪರಿಶೀಲಿಸಿದಾಗ ಅವರೆಲ್ಲರೂ ಹಿಂದೂ ಸಮಾಜದ ಉನ್ನತಿಗಾಗಿ ಸಂಪೂರ್ಣ ಸಮರ್ಪಿತ ಭಾವದಿಂದ ಶ್ರಮಿಸಿದ ಮಹಾನೀಯರೊಬ್ಬರ ಮೊಮ್ಮಕ್ಕೆಳೆಂದು ತಿಳಿದು ಬಂದಿದೆ. ಅಂತಹ ಮಹನೀಯರ ಆದರ್ಶ ನಡೆಗೆ ವ್ಯತಿರಿಕ್ತವಾಗಿ ನಡೆದುಕೊಂಡ ಅವರ ವರ್ತನೆ ನಿಜಕ್ಕೂ ಆಘಾತಕಾರಿ. ಒಬ್ಬ ವ್ಯಕ್ತಿಯ ಕುಕೃತ್ಯವನ್ನು ಜಾತೀಯ ಕಾರಣಕ್ಕೆ ಸೌಮ್ಯಗೊಳೀಸುವುದು ಸರಿಯಲ್ಲ. ಕೃತ್ಯ ನಡೆದಾಗ ವ್ಯಕ್ತಿಯ ಯಾವೊಂದೂ ಹಿನ್ನೆಲೆಯೂ ನಮಗೆ ತಿಳಿದಿರಲಿಲ್ಲ. ವೇದಿಕೆಯಲ್ಲಿ ದಾಂಧಲೆ ನಡೆಸುವ ವೇಳೆ ಸಂಘದ ಸ್ವಯಂಸೇವಕನೆಂದು ಸ್ವಯಂಘೋಷಿಸಿಕೊಂಡಾಗ , ಇಂತಹ ಅನುಚಿತ ವರ್ತನೆಯನ್ನು ಮಾಡಬೇಡಿರೆಂದು ವಿನಂತಿಸಲಾಗಿತ್ತು. ಅಂಗಲಾಚಲಾಗಿತ್ತು. ಎಲ್ಲವೂ ದೌರ್ಬಲ್ಯವೆಂದು ಪರಿಗಣಿಸಲ್ಪಟ್ಟ ಮೇಲೆ ಅರ್ಥವಾಗುವ ಭಾಷೆಯಲ್ಲಿ ಉತ್ತರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ವರ್ಗದ ಮಹನೀಯರೂ ಭಾಗವಹಿಸಿದ್ದರು. ಪ್ರತ್ಯಕ್ಷದರ್ಶಿಗಳಾಗಿರುವ ಅವರಿಂದ ಸತ್ಯ ಶೋಧಿಸಿ ಭಾವನೆಗಳನ್ನು ಪ್ರಕಟಿಸಬೇಕೆ ವಿನಃ ಅಪರಾಧಿಯ ಮಾತನ್ನು ಕೇಳಿಕೊಂಡು ವಿಶ್ಲೇಷಣೆಯನ್ನು ಯಾರೂ ಕೂಡಾ ಮಾಡಬಾರದೆಂದು ಸಮಾಜದ ಹಿತ ದೃಷ್ಠಿಯಿಂದ ನಮ್ಮದೊಂದು ಕಳಕಳಿಯ ನಿವೇದನೆ. ,
ಸಂಚಾಲಕರು
ವಿಶ್ವ ಹಿಂದೂ ಪರಿಷತ್ ಭಜರಂಗ ದಳ
ಉಪ್ಪಿನಂಗಡಿ ಘಟಕ

ಜಾಹೀರಾತು
ಜಾಹೀರಾತು
ಜಾಹೀರಾತು

ವಿ.ನೂ. ವಿಶ್ವ ಹಿಂದೂ ಪರಿಷತ್ ಭಜರಂಗ ದಳ
ಉಪ್ಪಿನಂಗಡಿ ಘಟಕ ನೀಡಿದ ಪ್ರಕಟಣೆಯನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. 

ವರದಿ : ನ್ಯೂಸ್ ಬ್ಯೂರೊ, ಉಪ್ಪಿನಂಗಡಿ