Tuesday, January 21, 2025
ಪುತ್ತೂರು

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ; ಸಹಾಯ ಮಾಡದಿದ್ದರೂ ಅಡ್ಡಿಯಿಲ್ಲ, ತೊಂದರೆ ಮಾಡಬಾರದು: ಸುಬೇದಾರ್ ರಮೇಶ್ ಬಾಬು- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆ ಕ್ಯಾಂಪಸ್‍ನಲ್ಲಿ ಆಯೋಜಿಸಲಾದ 75ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣಗೈದು ಮಾತನಾಡಿದ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಸುಬೇದಾರ್ ಮೇಜರ್ ರಮೇಶ್ ಬಾಬು ನಾವು ಬೇರೆಯವರಿಗೆ ಸಹಾಯಗಳನ್ನು ಮಾಡದಿದ್ದರೂ ಅಡ್ಡಿಯಿಲ್ಲ. ಆದರೆ ತೊಂದರೆ ಮಾಡಬಾರದು ಎಂಬ ನೀತಿಯನ್ನು ನಾವೆಲ್ಲರೂ ಪಾಲಿಸಬೇಕು ಮಾತ್ರವಲ್ಲದೆ ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ಅದೇ ನಾವು ಈ ದೇಶಕ್ಕೆ ಕೊಡಬಹುದಾದ ಬಹುದೊಡ್ಡ ಕೊಡುಗೆ. ದೇಶದ ಧ್ವಜದಡಿ ಎಲ್ಲರೂ ಒಂದಾಗಿ ಸೇರುವುದು ಬಹುದೊಡ್ಡ ಹೆಮ್ಮೆಯ ವಿಷಯ ಎಂದು ಹೇಳಿದರು.


ಸ್ವಾತಂತ್ರ್ಯದ ಸಂದೇಶ ನೀಡಿದ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೊರೋನಾಕ್ಕೆ ನಮ್ಮದೇ ಆದ ವಾಕ್ಸೀನ್ ತಯಾರಿಸಿಕೊಂಡಿರುವುದರ ಬಗೆಗೆ ಹೆಮ್ಮೆ ಪಡಬೇಕು. ಒಂದೆಡೆ ಆತ್ಮನಿರ್ಭರ ಭಾರತದ ಕನಸನ್ನು ಪ್ರಧಾನಿಯವರು ಬಿತ್ತಿ ಅದು ಹೆಮ್ಮರವಾಗಿ ಬೆಳೆಯುತ್ತಿದೆ. ಅದರೊಂದಿಗೆ ಪ್ರತಿಷ್ಟಿತ ಒಲಿಂಪಿಕ್ಸ್‍ನಲ್ಲಿ ಚಿನ್ನ ಸಮೇತ ಅನೇಕ ಪದಕಗಳು ನಮ್ಮದಾಗಿವೆ. ಹೀಗೆ ಭಾರತದ ಅಭ್ಯುದಯಕ್ಕೆ ನಾವೆಲ್ಲ ಸಾಕ್ಷಿಗಳಾಗುತ್ತಿದ್ದೇವೆ ಎಂದು ನುಡಿದರು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಶಂಕರನಾರಾಯಣ ಭಟ್, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ, ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ಬೋಧಕ ಮತ್ತು ಬೋಧಕೇತರ ವೃಂದ, ಸೀಮಿತಿ ಸಂಖ್ಯೆಯ ಹೆತ್ತವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಂಬಿಕಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಉಪನ್ಯಾಸಕ ತಿಲೋಶ್ ಘೋಷಿಸಿದರು. ಉಪನ್ಯಾಸಕಿಯರು ವಂದೇಮಾತರಂ ಗೀತೆಯನ್ನು ಪ್ರಸ್ತುತಪಡಿಸಿದರು. ಉಪನ್ಯಾಸಕ ಸಮ್ರತ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮವನ್ನು ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು