ಪುತ್ತೂರು: ಸ್ವಾತಂತ್ರ್ಯವು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಮೂಲ ಮಂತ್ರವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಏಕತೆಯ ಮನೋಭಾವನೆಯಿಂದ ಪರಕೀಯರ ದಾಸ್ಯದ ವಿರುದ್ಧ ಹೋರಾಡಿದ ಪರಿಣಮವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆ ಮೂಲಕ ನಾವು ಸರ್ವಾಂಗೀಣ ಸಾಧನೆಯನ್ನು ಮಾಡುವಲ್ಲಿ ಯಶಸ್ಸನ್ನು ಕಂಡಿದ್ದೇವೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪುರುಷರ ವಸತಿ ನಿಲಯದ ವಾರ್ಡನ್ ವಂ. ಅಶೋಕ್ ರಾಯನ್ ಕ್ರಾಸ್ತ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಪ್ರಾಂಗಣದಲ್ಲಿ ಜರಗಿದ 75ನೇ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಅವರು ಸಂದೇಶ ನೀಡಿದರು.
ಹಲವಾರು ರಾಷ್ಟ್ರ ನಾಯಕರ ತ್ಯಾಗದ ಫಲವಾಗಿ ಇವತ್ತು ನಾವು ಸಂಭ್ರಮಿಸುವಂತಾಗಿದೆ. ಸ್ವಾತಂತ್ರ್ಯದ ಬಳಿಕ ಕೃಷಿ, ಕೈಗಾರಿಕೆ, ಸಾರಿಗೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ಸಾಧನೆ ಅಪ್ರತಿಮವಾದುದು. ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಆರ್ಥಿಕ ಸುಧಾರಣೆಗಳು ಮೊದಲಾದ ಅಭಿವೃದ್ಧಿ ಪೂರಕ ಕ್ರಮಗಳಿಂದಾಗಿ ನಮ್ಮ ಜಿಡಿಪಿ ಬಹಳಷ್ಟು ಏರಿಕೆಯನ್ನು ಕಂಡಿದೆ. ಭಾರತವು ವಿಶ್ವ ಮಟ್ಟದಲ್ಲಿ ಪ್ರ್ರಕಾಶಿಸುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ| ಲಿಯೋ ನೊರೊನ್ಹಾ ಇವರು ದೇಶದ ತ್ರಿವರ್ಣ ಧ್ಯಜಾರೋಹಣ ಗೊಳಿಸಿ, ಶುಭ ಹಾರೈಸಿದರು. ಬಳಿಕ ‘ಫಿಟ್ ಇಂಡಿಯಾ ರನ್- 2.0’ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ನೀಡಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ| ವಿಜಯ್ ಲೋಬೊ ಉಪಸ್ಥಿತರಿದ್ದರು. ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ ಮಾರ್ಗದರ್ಶನ ನೀಡಿದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನ್ಯಾನ್ಸಿ ಲವೀನಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.