ಬಿಜೆಪಿ ಪ್ರಣಾಳಿಕೆ ಬಿಡುಗಡೆ : ₹ 1 ಲಕ್ಷ ಸಾಲಮನ್ನಾ, ಯುವತಿಯರಿಗೆ ಚಿನ್ನದ ತಾಳಿ, ಮಹಿಳೆಯರಿಗೆ ಸ್ಮಾರ್ಟ್‌ಫೋನ್
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ಬಿಜೆಪಿ ‘ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಎಂಬ ಹೆಸರಿನ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು:
* ₹ 1 ಲಕ್ಷವರೆಗಿನ ರೈತರ ಸಾಲಮನ್ನಾ
* ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
* ಮೊದಲ ಸಂಪುಟ ಸಭೆಯಲ್ಲಿ ಲೋಕಾಯುಕ್ತಕ್ಕೆ ಪೂರ್ಣಾಧಿಕಾರ ನೀಡುವ ತೀರ್ಮಾನ
* ಪಿಎಫ್ಐ, ಕೆಎಫ್ ಡಿ ಸಂಘಟನೆಗಳ ನಿಷೇಧ
* ಗೋಹತ್ಯೆ ತಡೆ ಮಸೂದೆ ಜಾರಿ
* ಭ್ರಷ್ಟಾಚಾರದ ಪ್ರಕರಣ ಬಯಲಿಗೆ ಎಳೆಯುವವರ ರಕ್ಷಣೆಗಾಗಿ ವಿಷಲ್ ಬ್ಲೋವರ್ ಪಾಲಿಸಿ ರಚನೆ
* ಪ್ರತಿ ಜಿಲ್ಲೆಯಲ್ಲಿ 3 ಹಾಗೂ ತಾಲ್ಲೂಕಿಗೆ 1 ಅನ್ನಪೂರ್ಣ ಕ್ಯಾಂಟೀನ್
* 20 ಲಕ್ಷ ಸಣ್ಣ ರೈತರಿಗೆ ತಲಾ ₹ 10,000 ನೀಡುವ ನೇಗಿಲಯೋಗಿ ಯೋಜನೆ
* ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ 10 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ
* ಪ್ರತಿವರ್ಷ ಒಂದು ಸಾವಿರ ರೈತರಿಗೆ ಇಸ್ರೇಲ್ ಮತ್ತು ಚೀನಾ ಭೇಟಿಗೆ ವ್ಯವಸ್ಥೆ
ಮಹಿಳೆಯರಿಗಾಗಿ
* ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್, ಸ್ಯಾನಿಟರಿ ನ್ಯಾಪ್‌ಕಿನ್
* ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ ₹ 25 ಸಾವಿರ ಮತ್ತು 3 ಗ್ರಾಂನ ಚಿನ್ನದ ತಾಳಿ
* ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇ 1ರ ಬಡ್ಡಿದರದಲ್ಲಿ ₹ 2 ಲಕ್ಷದ ವರೆಗೆ ಸಾಲ
ಯುವಜನರಿಗೇನು?:
* ಉದ್ಯೋಗ ಅವಕಾಶ ಸೃಷ್ಟಿಸಲು 60 ಬಿಪಿಓ ಸಂಕೀರ್ಣಗಳ ಸ್ಥಾಪನೆ
* ಹುಬ್ಬಳ್ಳಿ, ಬೆಂಗಳೂರು, ರಾಯಚೂರು, ಕಲಬುರ್ಗಿ, ಮೈಸೂರು, ಮಂಗಳೂರಿನಲ್ಲಿ ಸ್ಟಾರ್ಟ್‌ಅಪ್ ಕಂಪನಿಗಳಿಗೆ ಸ್ಥಳಾವಕಾಶ
* ಶಾಲಾ–ಕಾಲೇಜುಗಳಲ್ಲಿ ಕ್ರೀಡಾ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ₹ 100 ಕೋಟಿ
* ಪ್ರತಿ ತಾಲ್ಲೂಕಿನಲ್ಲಿ ಅಥ್ಲೆಟಿಕ್ ಟ್ರ್ಯಾಕ್, ಈಜುಕೋಳ, ಒಳಾಂಗಣ ಕ್ರೀಡಾಂಗಣ
ಸಮುದಾಯವಾರು:
* ಮದಕರಿ ನಾಯಕ ವಸತಿ ಯೋಜನೆಯಡಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ವಸತಿ ನಿರ್ಮಿಸಲು ₹ 6.500 ಕೋಟಿ ಮೀಸಲು
* ಮಾದಾರ ಚೆನ್ನಯ್ಯ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಆಧುನಿಕ ಮನೆಗಳ ನಿರ್ಮಾಣ
* ಡಾ.ಬಿ.ಆರ್.ಅಂಬೇಡ್ಕರ್ ಬದುಕಿನೊಂದಿಗೆ ಸಂಬಂಧ ಹೊಂದಿದ್ದ ಮೌವ್, ನಾಗಪುರ, ದೆಹಲಿ, ದಾದರ್ ಮತ್ತು ಲಂಡನ್‌ಗೆ ಭೇಟಿ ನೀಡಲು ‘ಡಾ.ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್ ತೀರ್ಥಸ್ಥಳ ಯಾತ್ರೆ’ ನಿಧಿ ಸ್ಥಾಪನೆ
* ತಿಗಳ, ಸವಿತಾ ಸಮಾಜ, ಈಡಿಗ, ಬಿಲ್ಲವ ಹಾಗೂ ಯಾದವ ಸಮುದಾಯಗಳ ಕಲ್ಯಾಣಕ್ಕಾಗಿ ಮಂಡಳಿ/ಅಭಿವೃದ್ಧಿ ನಿಗಮ ಸ್ಥಾಪನೆ
ದಕ್ಷ ಆಡಳಿತಕ್ಕಾಗಿ:
* ಅಧಿಕಾರಕ್ಕೆ ಬಂದ 30 ದಿನಗೊಳಗಾಗಿ ರಾಜ್ಯದಲ್ಲಿನ ಮರಳು, ಭೂ ಮತ್ತು ಕಾನೂನುಬಾಹಿರ ಗಣಿಗಾರಿಕೆ ಕೊನೆಗಾಣಿಸಲು ಶಾಶ್ವತ ವಿಶೇಷ ಕಾರ್ಯಪಡೆ ಸ್ಥಾಪನೆ
* ಜನರ ಸುರಕ್ಷತೆಗಾಗಿ ರಾಜ್ಯಾದ್ಯಂತ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ
* ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿ
ಆರೋಗ್ಯ:
* ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಮಳಿಗೆಗಳ ಸ್ಥಾಪನೆ
* ಎಲ್ಲ ಬಡ ಮತ್ತು ದುರ್ಬಲ ವರ್ಗದವರ ಚಿಕಿತ್ಸೆಗಾಗಿ ₹ 5 ಲಕ್ಷ ವಿಮೆ ಒದಗಿಸುವ ‘ಆಯುಷ್ಮಾನ್ ಕರ್ನಾಟಕ ಯೋಜನೆ’ ಜಾರಿ