
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕುಟುಂಬ ಸಮೇತ ಭೇಟಿ ನೀಡಿದರು. ಬಳಿಕ ವಿರೂಪಾಕ್ಷೇಶ್ವರ, ಪಾರ್ವತಿ, ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಉಪರಾಷ್ಟ್ರಪತಿ ಭೇಟಿಯ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠಲ ದೇವಸ್ಥಾನದಲ್ಲಿ ಕೆಂಪು ನೆಲಹಾಸು ಹಾಕಲಾಗಿತ್ತು. ದೇವರ ದರ್ಶನದ ಬಳಿಕ ಅವರು ಕೃಷ್ಣ ದೇವಸ್ಥಾನ, ಕಡಲೆಕಾಳು, ಸಾಸಿವೆಕಾಳು, ಕಮಲ ಮಹಲ್, ಮಹಾನವಮಿ ದಿಬ್ಬ, ವಿಜಯ ವಿಠಲ ದೇವಸ್ಥಾನಕ್ಕೆ ತೆರಳಿ ಕಲ್ಲಿನ ರಥ, ಸಪ್ತಸ್ವರ ಮಂಟಪ ಕಣ್ತುಂಬಿಕೊಂಡರು. ಶ್ರೀಮಂತ ವಾಸ್ತುಶಿಲ್ಪ ನೋಡಿ ಬೆರಗಾದರು.
ಕೊರೊನಾ ಹರಡುವುದನ್ನು ತಡೆಯಲು ವಾರಾಂತ್ಯದಲ್ಲಿ ಹಂಪಿ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ವೆಂಕಯ್ಯ ನಾಯ್ಡು ಭೇಟಿ ಪ್ರಯುಕ್ತ ಹಂಪಿಯಲ್ಲಿ ಇನ್ನಷ್ಟು ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ಇಂದಿನ ವಿವಿಧ ಕಾರ್ಯಕ್ರಮಗಳ ಬಳಿಕ ನಾಳೆ ಬೆಳಗ್ಗೆ ಅವರು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.