ಪುತ್ತೂರು ಎಂಜಿನಿಯರಿಂಗ್ ಕಾಲೇಜಿನ ಭೂಮಿಕಾ ಕಲಾ ಸಂಘದ ವತಿಯಿಂದ ಸಾಂಸ್ಕೃತಿಕ ಹಬ್ಬ ಚಿಲುಮೆ 2021ಕ್ಕೆ ಚಾಲನೆ-ಕಹಳೆ ನ್ಯೂಸ್
ಪುತ್ತೂರು: ಊಟದ ಜತೆ ಉಪ್ಪಿನಕಾಯಿಯ ಪಾತ್ರ ಎಷ್ಟಿದೆಯೋ ಅದೇ ರೀತಿ ಪಾಠದ ಜತೆ ಪಠ್ಯೇತರ ಚಟುವಟಿಕೆಗಳೂ ಇರಬೇಕು. ಊಟಕ್ಕಿಂತ ಉಪ್ಪಿನಕಾಯಿಯೇ ಮುಖ್ಯವಾಗಬಾರದು ಹಾಗೆಯೇ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸರಿಯಾದ ಮಿತವಿರಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್& ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ಹೇಳಿದರು. ಎಂಜಿನಿಯರಿಂಗ್ ಕಾಲೇಜಿನ ಭೂಮಿಕಾ ಕಲಾ ಸಂಘದ ವತಿಯಿಂದ ಶ್ರೀರಾಮ ಸಭಾಭವನದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಹಬ್ಬ ಚಿಲುಮೆ 2021ಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ಕಳೆದೆರಡು ವರ್ಷಗಳಿಂದ ಆನ್ಲೈನ್ ಮೂಲಕವೇ ತರಗತಿಗಳು ನಡೆಯುತ್ತಿದ್ದು, ಯಾವುದೇ ಇತರ ಚಟುವಟಿಕೆಗಳು ನಡೆಯುವುದಕ್ಕೆ ಆಸ್ಪದವಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗ ಪ್ರತಿಭೆಯ ಅನಾವರಣಕ್ಕೆ ವೇದಿಕೆಯೊದಗಿಸುವ ನಿಟ್ಟಿನಲ್ಲಿ ಇದನ್ನು ಸಂಘಟಿಸಲಾಗಿದೆ. ತಮ್ಮನ್ನು ತಾವು ಸುರಕ್ಷಿತರನ್ನಾಗಿಸಿಕೊಂಡು ಇದರಲ್ಲಿ ಭಾಗವಹಿಸಿ ಎಂದು ಹೇಳಿದರು. ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆಗೈದ ಭೂಮಿಕಾ ಕಲಾಸಂಘದ ನಿರ್ದೇಶಕ ಪ್ರೊ.ಸುದರ್ಶನ್ ಎಂ ಎಲ್ ಮಾತನಾಡಿ ಒಂದು ವಾರ ಪಠ್ಯೇಂತರ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಕೇವಲ ಸ್ಪರ್ಧಿಗಳ ಭಾಗವಹಿಸುವಿಕೆಯೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸಿ ಸ್ಪರ್ಧೆಗಳನ್ನು ಸಂಘಟಿಸಲಾಗುತ್ತದೆ ಎಂದರು. ವಿದ್ಯಾರ್ಥಿನಿ ಜಾಗೃತಿ ನಾಯಕ್ ಪ್ರಾರ್ಥಿಸಿದರು, ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ದೀಪಾ ಖಂಡಿಗೆ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಪ್ರೊ.ಶ್ವೇತಾಂಬಿಕಾ ವಂದನಾರ್ಪಣೆಗೈದರು. ವಿದ್ಯಾರ್ಥಿನಿ ಶ್ರೀಜಾ ಶೆಟ್ಟಿ ನಿರ್ವಹಿಸಿದರು. ಕೋವಿಡ್ ನಿಯಮಾವಳಿಯೊಂದಿಗೆ ಕಾರ್ಯಕ್ರಮವನ್ನು ನಡೆಸಲಾಯಿತು.