ಸುರತ್ಕಲ್, ಆ.24: ರೈತರಿಗೆ ಮಾಹಿತಿ ನೀಡುವ ಸಲುವಾಗಿ,ಬೆಳೆ ಸಮೀಕ್ಷೆ, ಹಾನಿಯಾದಲ್ಲಿ ಪರಿಹಾರ ಪಡೆಯಲು ಅನುಕೂಲವಾಗುವಂತೆ
ದಾಖಲೀಕರಣಕ್ಕೆ ಸರಕಾರ ಹೊಸ ತಂತ್ರಜ್ಞಾನ ಬಳಸಿ ಕೃಷಿ ಆ್ಯಪ್ ಹೊರ ತಂದಿದ್ದು ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡುವ ಮೂಲಕ ಇದರ ಸದುಪಯೋಗ ಆಗಬೇಕಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಕಾವೂರಿನಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ, ರೈತ ತಾನು ಬೆಳೆಯುವ ಬೆಳೆಯ ಬಗ್ಗೆ ಈ ಆ್ಯಪ್‍ನಲ್ಲಿ ಹಾಕಿ ಮಾಹಿತಿ ನೀಡಿದರೆ ಆರ್‍ಟಿಸಿಯಲ್ಲಿ ದಾಖಲೀಕರಣಗೊಂಡು ಅನಿರೀಕ್ಷಿತವಾಗಿ ಮಳೆ ಹಾನಿ ಸಂಭವಿಸಿದಲ್ಲಿ ಪರಿಹಾರ, ಸಾಲ ಸೌಲಭ್ಯ ಮತ್ತಿತರ ಪ್ರಯೋಜನ ಪಡೆಯಬಹುದಾಗಿದೆ. ವಿವಿಧ ಇಲಾಖೆಗಳ ಅಡಿಯಲ್ಲಿ ಈ ಆ್ಯಪ್‍ನಲ್ಲಿ ಇರುವ ಮಾಹಿತಿ ರವಾನೆಯಾಗಿ ದಾಖಲೆಯಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ ಎಂದರು. ರೈತರು ಸ್ವಯಂ ಆಗಿ ಇದನ್ನು ಉಪಯೋಗಿಸಿಕೊಂಡು ಸೌಲಭ್ಯ ಪಡೆಯಬಹುದು ಎಂದರು. ಉಪಮೇಯರ್ ಸುಮಂಗಳ ರಾವ್ , ರಣ್‍ದೀಪ್ ಕಾಂಚನ್ , ಕೃಷಿ ಅಧಿಕಾರಿ ಬಷೀರ್ ಅಹ್ಮದ್, ಬಿಜೆಪಿ ಸ್ಥಳೀಯ ಮುಖಂಡರಾದ ಶಿತೇಶ್ ಕೊಂಡೆ,ಶಾನ್ವಾಜ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.