Saturday, November 23, 2024
ಪುತ್ತೂರು

ಅಂಬಿಕಾ ಪದವಿ ಕಾಲೇಜಿನಿಂದ ಸಿಇಟಿ ಒತ್ತಡ ನಿರ್ವಹಣಾ ಕಾರ್ಯಕ್ರಮ ವಿವಿಧ ಆಯಾಮಗಳಲ್ಲಿ ಮನೋ ನಿರ್ವಹಣೆಯ ಬಗೆಗೆ ವಿದ್ಯಾರ್ಥಿಗಳಿಗೆ ಮಾಹಿತಿ- ಕಹಳೆ ನ್ಯೂಸ್

ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಕಾಲೇಜಿನ ಐಕ್ಯುಎಸಿ, ತರಬೇತಿ ಮತ್ತು ಉದ್ಯೋಗ ಘಟಕ, ಪತ್ರಿಕೋದ್ಯಮ, ಮನಃಶಾಸ್ತ್ರ ಹಾಗೂ ತತ್ತ್ವಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳು ಹಾಗೂ ಹೆತ್ತವರಿಗಾಗಿ ‘ಸಿಇಟಿ ಮತ್ತು ಮಾನಸಿಕ ಒತ್ತಡ’ ಎಂಬ ವಿಷಯದಡಿ ಒತ್ತಡ ನಿರ್ವಹಣೆ ಹೇಗೆ? ಮಾಡಬೇಕಾದ್ದೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ತಜ್ಞರಿಂದ ಮಾಹಿತಿ ಕಾರ್ಯಕ್ರಮ ಆನ್ ಲೈನ್ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಭಗವದ್ಗೀತೆಯ ಆಧಾರದಲ್ಲಿ ಮನೋನಿರ್ವಹಣೆ’ ಎಂಬ ವಿಷಯದ ಬಗೆಗೆ ಉಪನ್ಯಾಸ ನೀಡಿದ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಅರ್ಜುನನಂತಹ ಲೋಕೋತ್ತರ ವೀರನಿಗೂ ಯುದ್ಧ ಸಂದರ್ಭದಲ್ಲಿ ಒತ್ತಡ ತೀವ್ರಗೊಂಡು ಕುಸಿದುಬೀಳುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಅಂತಹ ಅಗಾಧವಾದ ಒತ್ತಡವನ್ನು ನಿರ್ವಹಿಸುವ ದಿವ್ಯೌಷಧವಾಗಿ ಭಗವದ್ಗೀತೆ ಮೂಡಿಬಂದಿದೆ. ಯಾವುದೇ ಸಂದರ್ಭದಲ್ಲೂ ಮನಃಸ್ಥಿತಿಯನ್ನು ಸಮಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ನೆಲೆಯಿಂದ ಭಗವದ್ಗೀತೆಯ ಅಧ್ಯಯನ ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಗೀತೆಯಲ್ಲಿ ಉಕ್ತವಾದ ಮನೋನಿರ್ವಹಣೆಯ ಸಾಧ್ಯತೆಗಳ ಬಗೆಗೆ ಮಾಹಿತಿ ನೀಡಿದರು.

‘ಮನಃಶಾಸ್ತ್ರದ ನೆಲೆಯಿಂದ ಮನೋನಿರ್ವಹಣೆ’ ಎಂಬ ವಿಷಯವಾಗಿ ಮಾತನಾಡಿದ ಅಂಬಿಕಾ ಪದವಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ, ನಮ್ಮ ಮಕ್ಕಳನ್ನು ಮತ್ತೊಬ್ಬರೊಡನೆ ಹೋಲಿಕೆ ಮಾಡುವ ಪ್ರವೃತ್ತಿ ಸಲ್ಲದು. ಮಕ್ಕಳು ಪರೀಕ್ಷೆ ಸಂದರ್ಭದಲ್ಲಿ ತಿಳಿಯಾದ ಮನಃಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವಲ್ಲಿ ಹೆತ್ತವರ ಜವಾಬ್ದಾರಿಯೂ ಇದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಅನಗತ್ಯ ಯೋಚನೆ ಮಾಡುತ್ತಾ ತಮ್ಮ ಮೇಲೆ ಒತ್ತಡ ತಂದುಕೊಳ್ಳಬಾರದು. ಸಾಕಷ್ಟು ಪೂರ್ವಭಾವಿಯಾಗಿ ಪರೀಕ್ಷೆಗೆ ಪೂರಕ ವಿಚಾರಗಳನ್ನು ಕ್ರೋಢೀಕರಿಸುವುದೇ ಒತ್ತಡದಿಂದ ಹೊರಬರುವ ಮೊದಲನೆಯ ತಂತ್ರ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಆಯುರ್ವೇದ ವೈದ್ಯೆಯಾಗಿರುವ, ನ್ಯೂಟ್ರಿಶನಿಸ್ಟ್ ಹಾಗೂ ಕೌನ್ಸೆಲರ್ ಆಗಿರುವ ಡಾ.ಹರ್ಷಿತಾ ಎಚ್ ಅವರು ‘ಆಹಾರ ಸೇವನೆ ಮತ್ತು ಮಾನಸಿಕ ದೃಢತೆ’ ಎಂಬ ವಿಷಯದ ಕುರಿತಾಗಿ ಮಾಹಿತಿ ನೀಡಿ ನಾವು ಯಾವ ಆಹಾರವನ್ನು ತಿನ್ನುತ್ತಿದ್ದೇವೆ ಎಂಬುದು ನಮ್ಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಏನು ತಿನ್ನುತ್ತೇವೆ, ಏನನ್ನು ಕುಡಿಯುತ್ತೇವೆ, ಎಷ್ಟು ಹೊತ್ತು ಮಲಗುತ್ತೇವೆ ಇತ್ಯಾದಿ ಇತ್ಯಾದಿಗಳು ಒತ್ತಡ ನಿರ್ವಹಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅರ್ಧ ಗಂಟೆಗೊಮ್ಮೆ ದೀರ್ಘ ಉಸಿರಾಟ ನಡೆಸುವುದು ನಮ್ಮನ್ನು ನಾವು ಒತ್ತಡ ರಹಿತರನ್ನಾಗಿ ಇರಿಸಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ ಎಂದರಲ್ಲದೆ ಕಣ್ಣು ಹಾಗೂ ಮನಸ್ಸಿಗೆ ಸಂಬಂಧಿಸಿದ ಸಣ್ಣ ಪುಟ್ಟ ವ್ಯಾಯಾಮ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಎಂದು ಪ್ರಾಯೋಗಿಕವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಸಿಇಟಿ, ನೀಟ್ ಹಾಗೂ ಜೆಇಇ ಸಂಯೋಜಕ ಕೆ.ಕಿಶೋರ್ ಮಾತನಾಡಿ, ಕಳೆದ ಹಲವು ಸಮಯಗಳಿಂದ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ತಯಾರಾಗಿದ್ದಾರೆ. ಈವರೆಗೆ ಅಧ್ಯಯನ ಮಾಡಿದ್ದನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಂಡು ಪ್ರಸ್ತುತಪಡಿಸಬೇಕಾದ ಸಂದರ್ಭ ವಿದ್ಯಾರ್ಥಿಗಳ ಮುಂದಿದೆ. ತರಗತಿಯಲ್ಲಿ ನಡೆಸಲಾಗಿರುವ ವಿವಿಧ ಮಾದರಿ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಸಿಇಟಿ ಸಂದರ್ಭದಲ್ಲಿ ಸಹಕಾರಿಯಾಗಲಿವೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ, ಎಷ್ಟೇ ಅಧ್ಯಯನ ನಡೆಸಿದ್ದರೂ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಹಲವು ಸಂಗತಿಗಳನ್ನು ಮರೆಯುವ ಸಂದರ್ಭಗಳನ್ನು ಕಾಣುತ್ತಿದ್ದೇವೆ. ಪರೀಕ್ಷೆ ಹತ್ತಿರ ಬಂದಂತೆ ನಿದ್ದೆ ಬರದಿರುವುದು, ಮನೋಕ್ಷೋಭೆಗೆ ಒಳಗಾಗುವುದು ಮಾತ್ರವಲ್ಲದೆ ಪರೀಕ್ಷೆಯ ದಿನದಂದು ಪ್ರಶ್ನೆ ಪತ್ರಿಕೆ ಸಿಕ್ಕಿದಾಕ್ಷಣ ಬೆವರುವುದು, ಒಂದೇ ಸಲಕ್ಕೆ ಪೂರ್ತಿ ಖಾಲಿ ಅನಿಸಿಬಿಡುವುದು ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಸವಾಲಾಗಿ ಪರಿಣಮಿಸುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೊನೆಯ ಕ್ಷಣ ಅಥವ ದಿನದ ಅಧ್ಯಯನವನ್ನು ಕೈಬಿಟ್ಟು ನಿರಾಳರಾಗಿ ಪರೀಕ್ಷೆಗೆ ತೆರಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರುಗಳಾದ ಶಂಕರನಾರಾಯಣ ಭಟ್ ಹಾಗೂ ಸತ್ಯಜಿತ್ ಉಪಾಧ್ಯಾಯ ಎಂ, ಉಪನ್ಯಾಸಕರು, ಹೆತ್ತವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು