Sunday, January 19, 2025
ಅಂಕಣ

ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ರಾಧಾ-ಕೃಷ್ಣ : ಒಂದು ಭಕ್ತಿಯ ಸಂಬಂಧ – ಕಹಳೆ ನ್ಯೂಸ್

ಉತ್ತರ ಭಾರತದಲ್ಲಿನ ಅನೇಕ ಸಂತರು-ಕವಿಗಳು ಭಗವಾನ ಶ್ರೀಕೃಷ್ಣ ಮತ್ತು ರಾಧೆ ಇವರ ಬಗ್ಗೆ ಶೃಂಗಾರರಸಪೂರ್ಣ ಕಾವ್ಯರಚನೆ ಮಾಡಿದ್ದಾರೆ. ಅನಂತರ ಹಿಂದಿ ಮತ್ತು ಇತರ ಭಾಷೆಯಲ್ಲಿನ ಕವಿಗಳೂ ಇದೇ ರೀತಿ ಅನೇಕ ಗೀತೆಗಳನ್ನು ರಚಿಸಿದ್ದಾರೆ. ಅವರ ಲಾವಣ್ಯ, ಅವರ ಶೃಂಗಾರ, ಅವರೊಳಗಿನ ಸಂವಾದ, ಅವರ ಭಾವನೆ ಈ ಎಲ್ಲವನ್ನು ರಸಭರಿತವಾಗಿ ವರ್ಣಿಸುವ ಅನೇಕ ಕಾವ್ಯಗಳಿವೆ. ಇತ್ತೀಚಿನ ಕೆಲವು ಕಥಾವಾಚಕರು, ಮಠಾಧೀಶರು, ಸಂತರು, ಪೀಠಾಧೀಶರು ಮುಂತಾದವರು ಶ್ರೀಕೃಷ್ಣ ಮತ್ತು ರಾಧೆ ಇವರ ಕಥೆಯನ್ನು ಬಣ್ಣಿಸಿ ಹೇಳುತ್ತಾರೆ. ಈ ರೀತಿಯ ಕಾವ್ಯರಚನೆ, ಲೇಖನ, ಚಲನಚಿತ್ರದ ದೃಶ್ಯಗಳು, ದೂರದರ್ಶನದ ಧಾರಾವಾಹಿಯಲ್ಲಿನ ದೃಶ್ಯಗಳು ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿವೆಯೆಂದರೆ, ಕೆಲವು ಜನರ ಮನಸ್ಸಿನಲ್ಲಿ ಶ್ರೀಕೃಷ್ಣನ ಪ್ರತಿಮೆಯು ಒಂದು ಪ್ರೇಮವೀರನಂತೆ ಆಗಿದೆ.

ಈ ಸಂತಕವಿಗಳು, ಮಹಾತ್ಮರು ಮತ್ತು ಜನ ಸಾಮಾನ್ಯರು ಶ್ರೀಕೃಷ್ಣನ ಚರಿತ್ರೆಯಿಂದ ಏನು ಕಲಿಯಬೇಕು ಎಂಬುದು ಅವರ ಇಷ್ಟದಂತೆ ಅದನ್ನು ಆಯ್ಕೆ ಮಾಡಲಾಗಿದೆ. ಶ್ರೀಕೃಷ್ಣನ ವ್ಯಕ್ತಿತ್ವ ಕೇವಲ ಅಷ್ಟಾಂಗಗಳಲ್ಲದೇ, ಅದಕ್ಕೆ ಅನಂತ ಅಂಗಗಳಿವೆ. ವೈಭವ, ಶಕ್ತಿ, ಯಶಸ್ಸು, ಸಂಪತ್ತು, ಜ್ಞಾನ, ವೈರಾಗ್ಯ, ಹೃದಯಂಗಮ ಕೊಳಲುವಾದನ, ಲಾವಣ್ಯ, ಚಾತುರ್ಯ, ಭಗಿನಿ ಪ್ರೇಮ, ಭ್ರಾತೃ ಪ್ರೇಮ, ಮಿತ್ರ ಪ್ರೇಮ, ಯುದ್ಧ ಕೌಶಲ್ಯ, ಸರ್ವಸಿದ್ಧಿ ಸಂಪನ್ನತೆ.. ಅವನಲ್ಲಿ ಏನು ಇಲ್ಲ ? ಎಲ್ಲವೂ ಇದೆ ! ಎಲ್ಲದರ ಪರಾಕಾಷ್ಠೆಯೇ ಆಗಿದೆ; ಆದರೆ ಅವನು ಹೀಗಿದ್ದರೂ ಎಲ್ಲರಿಂದ ಸಂಪೂರ್ಣವಾಗಿ ಅಲಿಪ್ತನಿದ್ದನು. ಭಗವಾನ ಶ್ರೀಕೃಷ್ಣನ ಮಾಯಾತೀತ, ನಿರ್ಲಿಪ್ತ ಸ್ವರೂಪದ ಜ್ಞಾನವು ಜನಸಾಮಾನ್ಯರಿಗೆ ಇಲ್ಲದಿರುವುದರಿಂದ ಅವರು ಇಂತಹ ಭೌತಿಕ, ಸ್ತ್ರೀ-ಪುರುಷರ ವ್ಯತ್ಯಾಸದ ಆಧಾರದಿಂದ ಶೃಂಗಾರರಸಪೂರ್ಣ ಕಥೆಗಳಲ್ಲಿಯೇ ಮೈಮರೆಯುತ್ತಾರೆ. ಶ್ರೀಕೃಷ್ಣನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಕೃಷ್ಣನ ಯಾವುದೇ ವಿವಾಹವೂ ಪ್ರೇಮವಿವಾಹವಾಗಿರಲಿಲ್ಲ. ಅವನ ವಿವಾಹದ ಸಂಕ್ಷಿಪ್ತ ಮಾಹಿತಿಯನ್ನು ಮುಂದೆ ಕೊಡಲಾಗಿದೆ :

ರುಕ್ಮಿಣಿ : ವಿದರ್ಭ ರಾಜಕುಮಾರಿಯಾದ ರುಕ್ಮಿಣಿಗೆ ಶ್ರೀಕೃಷ್ಣನೊಂದಿಗೆ ವಿವಾಹ ಮಾಡಿಕೊಳ್ಳುವ ಇಚ್ಛೆ ಇತ್ತು. ಅವಳ ಸಹೋದರನು ಅವಳ ಮದುವೆಯನ್ನು ಶಿಶುಪಾಲನೊಂದಿಗೆ ಮಾಡುವುದೆಂದು ನಿಶ್ಚಯಿಸಿದ್ದನು. ಅವಳು ಶ್ರೀಕೃಷ್ಣನಿಗೆ ಪತ್ರ ಬರೆದು ತನ್ನನ್ನು ಕರೆದುಕೊಂಡು ಹೋಗಲು ಹೇಳಿ ತಿಳಿಸಿದಳು. ಶ್ರೀಕೃಷ್ಣನು ಅವಳನ್ನು ನೋಡಿರಲಿಲ್ಲ. ಶ್ರೀಕೃಷ್ಣನು ಬಂದು ಅವಳನ್ನು ಕರೆದುಕೊಂಡು ಹೋದನು.

ಜಾಂಬವಂತಿ : ಶ್ರೀಕೃಷ್ಣನು ಶ್ಯಮಂತಕ ಮಣಿಯನ್ನು ಹುಡುಕುತ್ತಿರುವಾಗ ಜಾಂಬವಂತನೊಂದಿಗಾದ ಯುದ್ಧದಲ್ಲಿ ಜಾಂಬವಂತನು ಸೋತಾಗ ಹಿಂದೆ ಇದ್ದ ಶ್ರೀರಾಮನೇ ಈಗಿನ ಶ್ರೀಕೃಷ್ಣನಾಗಿರುವನೆಂದು ಗುರುತಿಸಿ ಅವನು ಶ್ಯಮಂತಕಮಣಿ ಮತ್ತು ತನ್ನ ಮಗಳು ಜಾಂಬವಂತಿಯನ್ನು ಶ್ರೀಕೃಷ್ಣನಿಗೆ ಕೊಟ್ಟು ವಿವಾಹ ಮಾಡಿಸಿದನು.

ಸತ್ಯಭಾಮಾ : ಸತ್ರಾಜಿತನು ಅವನ ಶ್ಯಮಂತಕಮಣಿಯನ್ನು ಶ್ರೀಕೃಷ್ಣನು ಕದ್ದಿರುವನೆಂದು ಸುಳ್ಳು ಆರೋಪ ಹೊರಿಸಿದ್ದನು. ಮುಂದೆ ಸತ್ಯ ತಿಳಿದ ನಂತರ ಪಶ್ಚಾತ್ತಾಪವಾಗಿ ತನ್ನ ಮಗಳು ಸತ್ಯಭಾಮಾಳನ್ನು ಶ್ರೀಕೃಷ್ಣನೊಂದಿಗೆ ವಿವಾಹವು ಮಾಡಿಕೊಟ್ಟನು.

ಕಾಲಿಂದಿ : ಸೂರ್ಯದೇವನ ಪುತ್ರಿ ಕಾಲಿಂದಿ ಇವಳು ಶ್ರೀಕೃಷ್ಣನ ಪ್ರಾಪ್ತಿಗಾಗಿ ಯಮುನೆಯ ತೀರದಲ್ಲಿ ಕಠೋರ ತಪಶ್ಚರ್ಯವನ್ನು ಮಾಡಿದಳು. ಶ್ರೀಕೃಷ್ಣನು ಅವಳನ್ನು ಸ್ವೀಕರಿಸಿದನು.

ಮಿತ್ರವಿಂದಾ : ಅವಂತಿ(ಉಜ್ಜೈನ್)ಯ ರಾಜ ವಿಂದ ಮತ್ತು ಅನುವಿಂದ ಇವರು ತಮ್ಮ ಸಹೋದರಿ ಮಿತ್ರವಿಂದಾ ಇವಳ ಸ್ವಯಂವರ ಇಟ್ಟಿದ್ದರು; ಆದರೆ ಅವಳಿಗೆ ಶ್ರೀಕೃಷ್ಣನು ತನ್ನ ಪತಿಯಾಗಬೇಕೆಂಬ ಇಚ್ಛೆ ಇತ್ತು. ಶ್ರೀಕೃಷ್ಣನು ಅವಳನ್ನು ಕರೆದುಕೊಂಡು ಹೋದನು.

ಸತ್ಯಾ (ನಾಗ್ನಜಿತಿ) : ಕೋಸಲ ದೇಶದ (ಅಯೋಧ್ಯೆಯ) ರಾಜನಾದ ನಾಗ್ನಜಿತ್ ಇವನ ಪುತ್ರಿ ಸತ್ಯಾಳ ಸ್ವಯಂವರದಲ್ಲಿ ಮದವನ್ನೇರಿದ ಏಳು ದುರ್ದಮ್ಯ ಎತ್ತುಗಳನ್ನು ನಿಯಂತ್ರಿಸಿ ಷರತ್ತಿನಲ್ಲಿ ಗೆದ್ದು ಅವಳನ್ನು ವಿವಾಹ ಮಾಡಿಕೊಂಡನು.

ಭದ್ರಾ : ಕೇಕೆಯ ದೇಶದ ಸಂತರ್ದನನು ತನ್ನ ಸಹೋದರಿ ಭದ್ರಾ ಇವಳ ವಿವಾಹದ ಪ್ರಸ್ತಾವವನ್ನು ಪಡೆದು ಸ್ವತಃ ಮದುವೆ ಮಾಡಿಕೊಟ್ಟನು.

ಲಕ್ಷ್ಮಣಾ : ಮಧ್ಯಪ್ರದೇಶದ ರಾಜಕನ್ಯೆ ಲಕ್ಷ್ಮಣಾ ಇವಳ ಸ್ವಯಂವರವಿತ್ತು. ಆದರೆ ಅವಳಿಗೆ ಶ್ರೀಕೃಷ್ಣನೊಂದಿಗೆ ವಿವಾಹವಾಗುವ ಇಚ್ಛೆ ಇತ್ತು, ಆದುದರಿಂದ ಶ್ರೀಕೃಷ್ಣನು ಅವಳನ್ನು ಕರೆದುಕೊಂಡು ಹೋದನು.

16100 ರಾಜಕನ್ಯೆಯರು : ಪ್ರಾಗ್ಜ್ಯೋತಿಷಪುರದ ರಾಜನಾದ ಭೌಮಾಸುರ (ನರಕಾಸುರ) ಇವನು 16100 ರಾಜಕನ್ಯೆಯರನ್ನು ಅಪಹರಿಸಿದ್ದನು. ಭೌಮಾಸುರನನ್ನು ವಧಿಸಿದ ನಂತರ ಆ ಕನ್ಯೆಯರನ್ನು ಅಸ್ವೀಕಾರ ಮತ್ತು ಅಪಮಾನಿತವಾಗಬಾರದೆಂದು ಅವರೊಂದಿಗೆ ವಿವಾಹ ಮಾಡಿಕೊಂಡು ಶ್ರೀಕೃಷ್ಣನು ಅವರಿಗೆ ಸಮಾಜದಲ್ಲಿ ಗೌರವ ಕೊಟ್ಟನು.

ಮಥುರೆಗೆ ಹೋದ ನಂತರ ಪುನಃ ಎಂದಿಗೂ ಬರಸಾನಾಗೆ ಹೋಗದಿರುವುದು :
ಶ್ರೀಕೃಷ್ಣನು ತನ್ನ ಹನ್ನೆರಡನೇ ವರ್ಷದಲ್ಲಿ ವ್ರಜಭೂಮಿಯನ್ನು ಬಿಟ್ಟು ಮಥುರೆಗೆ ಹೋದನು. ಅವನು ಜೀವನದಲ್ಲಿ ಪುನಃ ಎಂದಿಗೂ ರಾಧೆಗೆ ಅಥವಾ ಗೋಪಿಯರನ್ನು ಭೇಟಿಯಾಗಲು ಮಥುರೆಯು ತುಂಬಾ ಹತ್ತಿರದಲ್ಲಿದ್ದರೂ ಬರಸಾನಾ ಅಥವಾ ವ್ರಜಭೂಮಿಗೆ ಹೋಗಲಿಲ್ಲ.

ರಾಧೆಯು ವಿವಾಹಿತಳಾಗಿದ್ದಳು ಮತ್ತು ವಯಸ್ಸಿನಿಂದ ದೊಡ್ಡವಳಾಗಿದ್ದಳು : ಶ್ರೀಕೃಷ್ಣನಿಗಿಂತ ರಾಧೆಯು ವಯಸ್ಸಿನಿಂದ ದೊಡ್ಡವಳಿದ್ದಳು ಮತ್ತು ಅವಳ ಮದುವೆಯಾಗಿತ್ತು.

ನವವಿಧ ಭಕ್ತಿಯಲ್ಲಿ ‘ರಾಧಾಭಾವ’ ಎಂಬ ವಿಧ ಇರದಿರುವುದು :
ಭಕ್ತಿಮಾರ್ಗದಲ್ಲಿ ನವವಿಧ ಭಕ್ತಿ ಪ್ರಸಿದ್ಧವಾಗಿದೆ. ಅದರಲ್ಲಿ ಬೇರೆಬೇರೆ ರೀತಿಯಿಂದ ಅನನ್ಯ ಶ್ರದ್ಧೆಯಿಂದ ಭಕ್ತಿ ಮಾಡಿದರೂ, ಅದು ಭಗವಂತನಲ್ಲಿ ತಲುಪುತ್ತದೆ; ಆದರೆ ಈ ನವವಿಧ ಭಕ್ತಿಯಲ್ಲಿ ರಾಧೆಯ ವರ್ಣನೆ ಮಾಡಲಾಗುತ್ತದೆ, ಅಂತಹ ಭಕ್ತಿಯು ಅಪೇಕ್ಷಿತವಿಲ್ಲ.

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ|
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಂ|| – ನವವಿಧ ಭಕ್ತಿಯಾಗಿವೆ

ಭಾಗವತ ಪುರಾಣದಲ್ಲಿ ರಾಧೆಯ ಉಲ್ಲೇಖವೂ ಇರದಿರುವುದು :
‘ಮಹಾಭಾರತ, ಹರಿವಂಶ ಪುರಾಣ, ವಿಷ್ಣು ಪುರಾಣ ಮತ್ತು ಪುರಾಣದಲ್ಲಿನ ಶ್ರೇಷ್ಠ ಮತ್ತು ಸಾತ್ತ್ವಿಕ ಇಂತಹ ಭಾಗವತ ಪುರಾಣಗಳಲ್ಲಿ ರಾಧೆಯ ಉಲ್ಲೇಖವಿಲ್ಲ.’

ಭಗವದ್ಗೀತೆಯಲ್ಲಿ ಹೇಳಿದ ಅನೇಕ ವಿಧದ ಭಕ್ತಿಗಳಲ್ಲಿ ರಾಧಾಭಾವವು ಇಲ್ಲದಿರುವುದು :
ಭಗವದ್ಗೀತೆಯಲ್ಲಿ ಭಗವಾನ ಶ್ರೀ ಕೃಷ್ಣನು ಅನೇಕ ವಿಧದ ಭಕ್ತಿಗಳನ್ನು ಹೇಳಿದ್ದಾನೆ; ಆದರೆ ಕೃಷ್ಣನ ಬಗ್ಗೆ ಹೇಗೆ ರಾಧೆಯ ಪ್ರೇಮಭಕ್ತಿ ಅಥವಾ ಮಧುರಾ ಭಕ್ತಿ ಹೇಳಲಾಗುತ್ತದೆ, ಹಾಗೆ ಭಕ್ತಿ ಹೇಳಲಿಲ್ಲ.

ತಾತ್ತ್ವಿಕ ವಿವೇಚನೆ :
ರಾಧಾ-ಕೃಷ್ಣನ ಕಥೆಗಳು ಕಾಲ್ಪನಿಕವಾಗಿರಲಿ ಅಥವಾ ಅತಿರಂಜಿತ ಮಾಡಿದ್ದಿರಲಿ, ರಾಧಾಭಾವವು ಕೆಟ್ಟದ್ದಲ್ಲ ಮತ್ತು ನಿರುಪಯುಕ್ತವೂ ಅಲ್ಲ. ಆ ಸ್ವಭಾವ ದೋಷಗಳನ್ನು ದೂರಗೊಳಿಸಲು ಸಹಾಯಕವಾಗಿದೆ; ಆದರೆ ಅದು ಚಿತ್ತಶುದ್ಧಿಯ ಅನೇಕ ಸಾಧನಗಳಲ್ಲಿ ಒಂದು ಸಾಧನವಾಗಿದೆ ಆದರೆ ಸಾಧ್ಯವಲ್ಲ (ಗುರಿಯಲ್ಲ).

ಭಾವ ಯಾವುದೇ ಇರಲಿ, ಅದು ಭಗವಂತನ ಸ್ವರೂಪವಲ್ಲ, ಅಂತಿಮ ಧ್ಯೇಯವಲ್ಲ. ಸಾಧ್ಯದ ಹತ್ತಿರ ತಲುಪಿದಾಗ ಸಾಧನೆ ಬಿಡುವುದು ಅವಶ್ಯಕವಿರುತ್ತದೆ (ಗೀತೆ ಅಧ್ಯಾಯ 6 ಶ್ಲೋಕ 3).

‘ಪಾತಂಜಲ ಯೋಗದರ್ಶನ’ದಲ್ಲಿಯೂ ಚಿತ್ತ ವೃತ್ತಿಯನ್ನು ನಿರೋಧಿಸಲಾಗಿದೆ. (ಸಮಾಧಿ ಪಾದ 1, ಸೂತ್ರ 2)

ಶ್ರೀ ವಿನೋದ ಕಾಮತ, ವಕ್ತಾರರು ಸನಾತನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲೆ.
ಸಂಪರ್ಕ : 9342599299