ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವಳದ ಗದ್ದೆಯಲ್ಲಿ ಹಿಂದೂ ಭಕ್ತಾಧಿಗಳಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ: ವ್ಯವಸ್ಥಾಪನಾ ಸಮಿತಿಯಿಂದ ಮಹತ್ವದ ನಿರ್ಧಾರ-ಕಹಳೆ ನ್ಯೂಸ್
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವಿಶಾಲವಾದ ದೇವರಮಾರು ಗದ್ದೆಯಲ್ಲಿ ಇನ್ನೂ ಮುಂದೆ ಹಿಂದೂ ಭಕ್ತಾಧಿಗಳಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯಿಂದ ಪ್ರಕಟಣೆ ಹೊರಡಿಸಲಾಗಿದೆ. ಈ ದೇವಸ್ಥಾನವೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದೂ, ಈ ದೇವಳಕ್ಕೆ ಸಂಬಂಧಪಟ್ಟ ಜಾಗದಲ್ಲಿ ಹಿಂದೂ ಭಕ್ತಾಧಿಗಳಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ಇರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೇ ಹಿಂದೂ ಭಕ್ತಾಧಿಗಳನ್ನು ಹೊರತು ಪಡಿಸಿ ಇತರರು ವಾಹನ ಪಾಕಿರ್ಂಗ್ ಮಾಡಿ ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಹಾಗೂ ಇತರರು ಪಾಕಿರ್ಂಗ್ ಮಾಡಿ ಹೋದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅದೇ ಪ್ಲೆಕ್ಸ್‍ನಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ದೇವಳದ ಹೊರಗಿನ ಪಂಚಾಕ್ಷರಿ ಮಂಟಪದಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಪ್ಲೆಕ್ಸ್ ಬೋರ್ಡ್‍ನಲ್ಲಿ ಈ ಪ್ರಕಟಣೆಯನ್ನು ಹಾಕಲಾಗಿದೆ. ಬಜರಂಗ ದಳ, ಹಿಂದೂ ಜಾಗರಣೆ ವೇದಿಕೆ, ಹಲವು ಹಿಂದೂ ಪರ ಸಂಘಟನೆಗಳು ಹಾಗೂ ಮುಖಂಡರು ದೇವಾಲಯಕ್ಕೆ ಸೇರಿದ ಗದ್ದೆಯಲ್ಲಿ ಅನ್ಯ ಧರ್ಮಿಯರ ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಹಕ್ಕೋತ್ತಾಯ ಮಾಡಿದ್ದರು. ದೇವಳದ ಗದ್ದೆಯಲ್ಲಿ ಸರ್ಕಸ್ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳಿಗೂ ಅವಕಾಶ ನೀಡಬಾರದು ಎಂಬ ಬೇಡಿಕೆಯನ್ನೂ ಈ ಸಂಘಟನೆಗಳು ಇಟ್ಟಿದ್ದವು. ಇದೀಗ ಇದರಲ್ಲಿ ಒಂದು ಬೇಡಿಕೆ ಹಲವು ವರ್ಷಗಳ ಬಳಿಕ ಈಡೇರಿದಂತಾಗಿದೆ. ಇದೀಗ ಹಿಂದೂ ಭಕ್ತಾಧಿಗಳ ವಾಹನ ನಿಲುಗಡೆಗೆ ಅವಕಾಶ ನೀಡಿ ಉಳಿದವರ ವಾಹನಗಳಿಗೆ ಅವಕಾಶ ನಿರಾಕರಿಸುವ ಮೂಲಕ ವ್ಯವಸ್ಥಾಪನ ಸಮಿತಿಯೂ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.