ಕಾರವಾರ: ಅಂಗವಿಕಲ ಮಹಿಳೆಯನ್ನು ನಂಬಿಸಿ ಮದುವೆಯಾಗಿ, ನಂತರ ಆಕೆಯ ಬಳಿ ಇದ್ದ ಹಣ ದೋಚಿ ದರ್ಗಾದಲ್ಲಿದ್ದ ಮೌಲ್ವಿ ಪಲಾಯನ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ನಡೆದಿದೆ.
ಬನವಾಸಿಯ ದಾಸನಕೊಪ್ಪದ ಕುರೇಷಿ ಮಕ್ಬುಲ್ ಸಾಬ್ ದರ್ಗಾದ ಉತ್ತರ ಪ್ರದೇಶ ಮೂಲದ ಮೌಲ್ವಿ ಮಹ್ಮದ್ ಜಾಕಿರ್ (28) ಅಂಗವಿಕಲ ಮಹಿಳೆಗೆ ವಂಚಿಸಿದ್ದಾನೆ. ಮಹಿಳೆ ಈ ಹಿಂದೆ ಮದುವೆಯಾಗಿ ಹತ್ತು ವರ್ಷದ ಮಗನಿದ್ದಾನೆ. ಗಂಡ ಬಿಟ್ಟು ಹೋಗಿದ್ದರಿಂದ ಸಣ್ಣಪುಟ್ಟ ಕೆಲಸ ಮಾಡಿಕೊಂಡು ದರ್ಗಾದ ಬಳಿಯೇ ಚಿಕ್ಕ ಗುಡಿಸಲಿನಲ್ಲಿ ಮಹಿಳೆ ವಾಸವಿದ್ದಳು.
ಈ ವೇಳೆ ಮಹಿಳೆಯನ್ನು ಪರಿಚಯ ಮಾಡಿಕೊಂಡು, ಬಾಳು ಕೊಡುವುದಾಗಿ ನಂಬಿಸಿ, ಮದುವೆಯಾಗಿದ್ದಾನೆ. ಕೆಲವು ತಿಂಗಳವರೆಗೆ ಜೀವನ ನಡೆಸಿ, ಮಹಿಳೆಯ ಮನೆಯಲ್ಲಿದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲವನ್ನೂ ದೋಚಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ವಂಚನೆಗೊಳಗಾದ ಮಹಿಳೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮೌಲ್ವಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.