ಬಂಟ್ವಾಳ: ಸುಳ್ಳ ಮಲೆ ನಮ್ಮ ತುಳುನಾಡಿನಲ್ಲಿ ಅತ್ಯಂತ ಅಪರೂಪದ ವಿಶಿಷ್ಟ ತೀರ್ಥ ಕ್ಷೇತ್ರ ಎನಿಸಿದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆಯಲ್ಲಿ ಸೋಣ ಅಮವಾಸ್ಯೆಯಿಂದ ಬಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ಗುಹಾ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ಗುಹಾ ತೀರ್ಥಕ್ಕೆ ಪ್ರಾರ್ಥನೆ ಸಲ್ಲಿಸಿ, ಬಿದಿರಿನ ಕೇರ್ಪು (ಏಣಿ) ಇಟ್ಟು ದಾರ್ಮಿಕ ವಿಧಿ-ವಿದಾನವನ್ನು ನೆರವೇರಿಸಿ, ಅರಸು ಗುಡ್ಡೆಚಾಮುಂಡಿ ಮತ್ತು ಪ್ರಧಾನ ಪಂಜುರ್ಲಿ ದೈವಗಳಿಗೆ ತಂಬಿಲ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೈವದ ಅರ್ಚಕರಾದ ಪಳನೀರು ಅನಂತ ಭಟ್,ಹರಿ ಭಟ್, ಮಾಣಿಗುತ್ತು ಸಚಿನ್ ರೈ ಮತ್ತು ಗ್ರಾಮಸ್ತರು ಉಪಸ್ಥಿತರಿದ್ದರು.
ಪ್ರತಿವರ್ಷ ಸೋಣ ಅಮವಾಸ್ಯೆಯಿಂದ ಬಾದ್ರಪದ ಚೌತಿವರೆಗೆ ಗುಹಾ ತೀರ್ಥ ಸ್ನಾನಕ್ಕೆ ಭಕ್ತಾದಿಗಳಿಗೆ ಮುಕ್ತ ಅವಕಾಶ ಇರುತಿತ್ತು. ಆದರೆ ಈ ಬಾರಿ ಕೋವಿಡ್-19 ಪ್ರತಿಬಂಧಕಾಜ್ಞೆಯ ಕಾರಣದಿಂದ ಭಕ್ತಾದಿಗಳಿಗೆ ಗುಹಾ ಪ್ರವೇಶ ಹಾಗು ಗುಹಾತೀರ್ಥ ಸ್ನಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವುದರಿಂದ ಪ್ರತೀ ವರ್ಷ ಬರುವ ಅಸಂಖ್ಯ ಭಕ್ತಾದಿಗಳಿಗೆ ಈ ವರ್ಷ ನಿರಾಸೆ ಮೂಡಿಸಿದೆ.