ಮಂಗಳೂರು ಮಹಾನಗರ ಪಾಲಿಕೆಯ ಶಕ್ತಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್
ಮಂಗಳೂರು : ಮಹಾನಗರ ಪಾಲಿಕೆಯ ಶಕ್ತಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ, ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಶಕ್ತಿನಗರದಲ್ಲಿ 46 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಪೋರ್ಟಿಕೋ ಮತ್ತು ಎಂಟ್ರೆನ್ಸ್ ಲಾಬಿ, ರಿಸೆಪ್ಷಮ್ ಕೌಂಟರ್, ಡಿಸ್ಪೆನ್ಸರಿ, ಸ್ಟೋರ್, ಪ್ರಯೋಗಾಲಯ, ಗಂಡಸರ ಹಾಗೂ ಹೆಂಗಸರ ಪ್ರತ್ಯೇಕ ಶೌಚಾಲಯ, ಇಂಜೆಕ್ಷನ್/ಡ್ರೆಸಿಂಗ್ ಕೊಠಡಿ, ವೈದ್ಯಾಧಿಕಾರಿಗಳ ಕೊಠಡಿ ಸೇರಿದಂತೆ ಸುಸಜ್ಜಿತವಾದ ಆರೋಗ್ಯ ಕೇಂದ್ರ ಇನ್ನು ಮುಂದೆ ಜನ ಸಾಮಾನ್ಯರ ಸೇವೆಗೆ ಲಭ್ಯವಾಗಲಿದೆ. ಆಸ್ಪತ್ರೆಯಲ್ಲಿ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಗಾಗಿ ಕೊಠಡಿ ನಿರ್ಮಿಸಲಾಗಿದೆ ಮತ್ತು ಸೂಕ್ತ ಡಿಸ್ ಇನ್ಫೆಕ್ಷನ್ ಟ್ಯಾಂಕ್ ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಮಂಗಳೂರು ಉತ್ತರ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಕೋವಿಡ್ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ. ಸೋಂಕಿತರ ಶುಶ್ರೂಷೆಯ ಮೂಲಕ ವೈದ್ಯಕೀಯ ರಂಗವು ತಮ್ಮನ್ನು ತಾವು ಸಮರ್ಪಿಸಿಕೊಂಡು ವಿಶೇಷವಾಗಿ ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸಿದ್ದಾರೆ. ಶಕ್ತಿನಗರದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣದಿಂದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ 3 ವಾರ್ಡ್ ಗಳು ಈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವುದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಪಾಲಿಕೆ ಸದಸ್ಯರಾದ ವನಿತಾ ಪ್ರಸಾದ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಶಕಿಲ ಕಾವಾ, ಕಿಶೋರ್ ಕೊಟ್ಟಾರಿ,ಜಯಾನಂದ ಅಂಚನ್, ಸಂಗೀತಾ ಆರ್ ನಾಯಕ್, ರಂಜಿನಿ ಕೋಟ್ಯಾನ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.