ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಶಿಕಾರಿಪುರ ಕೃಷ್ಣಮೂರ್ತಿ ಅವರು ರಾಕೆಟ್‍ಗಳು ಮೇಲಕ್ಕೆ ಚಲಿಸಬೇಕಾದರೆ ಸರಿಯಾದ ತಳಪಾಯ ಇರಬೇಕು. ನಮ್ಮ ಬದುಕು ಕೂಡ ಹಾಗೆಯೇ. ವೈಯಕ್ತಿಕ ಬೆಳವಣಿಗೆ ಸರಿಯಾಗಿ ಸಾಗಬೇಕಾದರೆ ಸಮರ್ಥವಾದ ನೆಲೆಗಟ್ಟು ರೂಪುಗೊಂಡಿರಬೇಕು. ಆ ನೆಲೆಯಲ್ಲಿ ಅನೇಕ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು, ಮಾಹಿತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂದು ಹೇಳಿದರು. ಸಂಸ್ಕøತದಲ್ಲಿ ಉಕ್ತವಾದಂತೆ ಕ್ಷಣ ಕ್ಷಣವನ್ನೂ ಸದ್ವಿನಿಯೋಗ ಮಾಡಿಕೊಂಡಾಗ ವಿದ್ಯಾರ್ಥಿ ಜೀವನ ಅರಳುವುದಕ್ಕೆ ಸಾಧ್ಯ. ಸಮಯವನ್ನು ಕಳೆಯುವುದರ ಬದಲಾಗಿ ಸದುಪಯೋಗ ಮಾಡಿಕೊಳ್ಳುವ ಕಲೆ ನಮ್ಮಲ್ಲಿ ಅಡಕವಾಗಬೇಕು. ತಿಳಿದುಕೊಳ್ಳುವ ಹಂಬಲದೊಂದಿಗೆ ಮುಕ್ತ ಮನಃಸ್ಥಿತಿಯಲ್ಲಿ ನಮ್ಮನ್ನು ನಾವು ಹೊಸ ವಿಚಾರಧಾರೆಗಳಿಗೆ ತೆರೆದುಕೊಂಡಾಗ ನಮ್ಮೊಳಗಿನ ಸಂಪನ್ಮೂಲಗಳು ವಿಕಸಿತಗೊಳ್ಳುತ್ತವೆ. ದಿನಗಳು ಹೇಗೆ ನಮ್ಮಿಂದ ಸರಿದುಹೋಗುತ್ತವೆ ಎಂಬುದು ನಮ್ಮ ಅರಿವಿಗೆ ಬರುವುದೇ ಇಲ್ಲ. ಕ್ಷಣ ಮಾತ್ರದಲ್ಲೇ ವರ್ಷಗಳು ಉರುಳಿದ ಅನುಭವ ನಮ್ಮೆಲ್ಲರನ್ನೂ ಒಳಗೊಳ್ಳುತ್ತದೆ. ಆದ್ದರಿಂದ ಯಥಾಶೀಘ್ರ ನಾವು ವ್ಯಕ್ತಿಗತ ಬೆಳವಣಿಗೆಯನ್ನು ಕಂಡುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕಾಲಕಾಲಕ್ಕೆ ನಮ್ಮನ್ನು ನಾವು ಔನ್ನತ್ಯಕ್ಕೆ ತಂದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸೋಲು ನಮ್ಮನ್ನು ಆವರಿಸಿಕೊಳ್ಳುತ್ತದೆ. ನಾವಿಂದು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆಂಬುದನ್ನು ಮರೆಯಬಾರದು. ತುಸು ಮೈಮರೆತರೂ ಮತ್ತೊಬ್ಬರು ನಮ್ಮನ್ನು ಹಿಂದಿಕ್ಕಿ ಸಾಧನೆ ಮೆರೆಯುತ್ತಾರೆ. ಹಾಗಾಗಿ ವೇಗವಾಗಿ ಮತ್ತು ಗುಣಾತ್ಮಕವಾಗಿ ಬೆಳೆಯುವುದು ನಮಗಿಂದು ಅನಿವಾರ್ಯ. ಆದರೆ ನಮ್ಮ ವೇಗವನ್ನು ವರ್ಧಿಸುವುದಕ್ಕೆ ಪ್ರೇರಣಾಶಕ್ತಿಯಾಗಿ ವಿವಿಧ ಕಾರ್ಯಾಗಾರಗಳ ಅಗತ್ಯವಿದೆ ಎಂದು ನುಡಿದರು. ಯೋಗ ಎಂಬುದು ಭಾರತೀಯರ ಕೈಯಲ್ಲಿರುವ ಬ್ರಹ್ಮಾಸ್ತ್ರ. ಆ ನೆಲೆಯಿಂದಲೇ ಅಂಬಿಕಾ ಸಂಸ್ಥೆಯಲ್ಲಿ ಯೋಗವನ್ನು ಪಾಠದ ಭಾಗವಾಗಿ ಜೋಡಿಸಿಕೊಳ್ಳಲಾಗಿದೆ. ಇಡಿಯ ರಾಜ್ಯದಲ್ಲಿ ಯೋಗವನ್ನು ಪಠ್ಯದ ಭಾಗವಾಗಿ ಸೇರಿಸಿಕೊಂಡಿರುವ ಮೊದಲ ಸಂಸ್ಥೆ ಅಂಬಿಕಾ ಎಂದರಲ್ಲದೆ ವಿದ್ಯಾರ್ಥಿಗಳಿಗೆ ಬೇಕಾದದ್ದನ್ನು ಒದಗಿಸಿಕೊಡುವುದು ಆಡಳಿತ ಮಂಡಳಿ ಹಾಗೂ ಶಿಕ್ಷಕರ ಕರ್ತವ್ಯ. ಓದಿನ ಅನಂತರವೂ ವಿದ್ಯಾರ್ಥಿಗಳು ಸಂಸ್ಥೆಯನ್ನು ನೆನೆಯುವಂತಾದರೆ ಅದುವೇ ಆ ಸಂಸ್ಥೆಯ ನಿಜವಾದ ಸಾರ್ಥಕ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಮನಃಶಾಸ್ತ್ರಜ್ಞೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ತಜ್ಞೆ ಸಿಂಧೂ, ಹಿರಿಯ ಉಪನ್ಯಾಸಕ ಶರಣಪ್ಪ, ಯೋಗ ಶಿಕ್ಷಕಿ ಶರಾವತಿ, ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ಸ್ವಾಗತಿಸಿದರು. ಉಪನ್ಯಾಸಕಿ ಸುಮನಾ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ತರುವಾಯ ಡಾ.ಶಿಕಾರಿಪುರ ಕೃಷ್ಣಮೂರ್ತಿ ಹಾಗೂ ಅವರ ತಂಡದಿಂದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ನಡೆಯಿತು.