ರಾಜ್ಯಕ್ಕೆ ಎರಡು ತಿಂಗಳ ಕಾಲ ಕೇರಳ ಪ್ರವೇಶ ಮತ್ತು ಆಗಮನ ನಿರ್ಬಂಧ : ದ.ಕ. ಜಿಲ್ಲಾಧಿಕಾರಿ ಆದೇಶ – ಕಹಳೆ ನ್ಯೂಸ್
ಮಂಗಳೂರು : ಕೇರಳದಲ್ಲಿ ಕೊರೊನಾ ಮತ್ತು ನಿಫಾ ವೈರಸ್ ಹರಡುತ್ತಿರುವುದರಿಂದ ಕೇರಳ ಕಡೆಯಿಂದ ರಾಜ್ಯಕ್ಕೆ ಬರುವವರನ್ನು ಮತ್ತು ರಾಜ್ಯದಿಂದ ಕೇರಳಕ್ಕೆ ತೆರಳುವವರನ್ನು ಎರಡು ತಿಂಗಳ ಕಾಲ ಸಂಪೂರ್ಣವಾಗಿ ನಿರ್ಬಂಧಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂದಾಗಿದ್ದು, ಮುಂದಿನ ಎರಡು ತಿಂಗಳ ಕಾಲ ಕೇರಳ ಪ್ರವೇಶ ಮತ್ತು ಆಗಮನ ನಿರ್ಬಂಧಿಸಲು ಸೂಚಿಸಿದೆ.
ಪ್ಯಾರಾ ಮೆಡಿಕಲ್, ನರ್ಸಿಂಗ್ ಇನ್ನಿತರ ಉದ್ದೇಶಕ್ಕಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಕೇರಳಕ್ಕೆ ತೆರಳುವ ಉದ್ದೇಶ ಇದ್ದವರು ಕೂಡ ತಮ್ಮ ಪ್ರಯಾಣವನ್ನು ಅಕ್ಟೋಬರ್ ಅಂತ್ಯದವರೆಗೆ ಮಂಗಳೂರಿಗೆ ಬರುವಂತಿಲ್ಲ. ಈ ಬಗ್ಗೆ ಈಗಾಗ್ಲೆ ಕೇರಳದಲ್ಲಿದ್ದವರಿಗೆ ಆಯಾ ಶಿಕ್ಷಣ ಸಂಸ್ಥೆಗಳು ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಆಸ್ಪತ್ರೆ, ನರ್ಸಿಂಗ್ ಹೋಮ್, ಕಚೇರಿ, ಹೊಟೇಲ್, ಕೈಗಾರಿಕೆಗಳು ಇತ್ಯಾದಿ ಎಲ್ಲ ರೀತಿಯ ಉದ್ಯೋಗದಾತರು ತಮ್ಮ ಕೇರಳ ಮೂಲದ ಸಿಬಂದ್ಧಿಗಳನ್ನು ಯಾವುದೇ ಕಾರಣಕ್ಕೂ ಕರ್ನಾಟಕ ಪ್ರವೇಶಿಸದಂತೆ ಹಾಗೂ ಕೇರಳಕ್ಕೆ ಪ್ರಯಾಣಿಸದಂತೆ ನಿರ್ಬಂಧ ವಿಧಿಸಲು ಕೈಗಾರಿಕೆ ಇನ್ನಿತರ ಕಂಪನಿಗಳ ಮಾಲೀಕರಿಗೆ ಸೂಚಿಸಿದ್ದಾರೆ. ಅದೇ ರೀತಿ, ಸಾರ್ವಜನಿಕರು ಯಾವುದೇ ತುರ್ತು ಕಾರಣಗಳಿಲ್ಲದೇ ಇದ್ದಲ್ಲಿ ಅಕ್ಟೋಬರ್ ಅಂತ್ಯದ ವರೆಗೆ ಕೇರಳ ರಾಜ್ಯಕ್ಕೆ ಪ್ರಯಾಣಿಸಕೂಡದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಯವರು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.