ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದೆ.
ವ್ಯವಸ್ಥಿತವಾಗಿ ನಡೆಯುತ್ತಿರುವ ಪ್ರಚಾರ ಕಾರ್ಯದ ಮುಂದಿನ ಹಂತವಾಗಿ ಚುನಾವಣಾ ಕಾರ್ಯಾಲಯದ ಮುಂದೆ ಬೃಹತ್ ಬಲೂನ್ ಹಾರಿಬಿಡುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಬೃಹತ್ ಬಲೂನಿನಲ್ಲಿ ಶ್ರೀಕರ ಪ್ರಭು ಮತ್ತು ಅವರ ಚುನಾವಣಾ ಚಿಹ್ನೆಯಾದ ಆಟೋ ರಿಕ್ಷಾವನ್ನು ಚಿತ್ರಿಸಲಾಗಿದೆ.
ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರು ತಮ್ಮ 9 ಹಂತದ ಚುನಾವಣಾ ಪ್ರಚಾರದ ಹಂತದಲ್ಲಿ ಅಪಾರಸಂಖ್ಯೆಯ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಮಾಗಮದಲ್ಲಿ ಬೃಹತ್ ಬಲೂನ್ ಗಗನಕ್ಕೇರಿಸಲಾಯಿತು.
ಶ್ರೀಲತಾ ಗೋಪಾಲಕೃಷ್ಣ ಸಾಂಕೇತಿಕವಾಗಿ ಬಲೂನ್ ಅನ್ನು ಅಗಸದೆಡೆಗೆ ಚಿಮ್ಮಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕರ ಪ್ರಭುರವರು ಇದು ವಿಜಯದ ಬಲೂನು, ಇದು ಎಷ್ಟು ಎತ್ತರ ಹೋಗುತ್ತದೋ, ಅಷ್ಟೇ ಮತಗಳ ಅಂತರದಿಂದ ನನ್ನ ಗೆಲುವು ನಿಮ್ಮೆಲ್ಲರ ಆಶೀರ್ವಾದದಿಂದ ಆಗುವುದು ಎಂದು ಅಭಿಪ್ರಾಯಪಟ್ಟರು.
ಮೂವತ್ತು ವರ್ಷಗಳ ಸಾಮಾಜಿಕ ಜೀವನದಲ್ಲಿ ನಾನು ಮಾಡಿದ ಸೇವೆಯನ್ನು ಮತದಾರ ಗಮನಿಸಿ, ನನಗೆ ಆಶೀರ್ವಾದ ಮಾಡುತ್ತಾನೆ. ಈ ಬಾರಿ ನನಗೆ ಆಶೀರ್ವಾದ ಮಾಡಿ ನಿಮ್ಮ ಮನೆ ಮನೆಯ ಸಮಸ್ಯೆಗೆ ಸ್ಪಂದಿಸುವ ಕೆಲಸ ನಾನು ಮಾಡುತ್ತೇನೆ. ಹೇಗೆ ಆಟೋರಿಕ್ಷಾ ದಿನದ 24 ಗಂಟೆ ವಾರದ 7 ದಿನ, ವರ್ಷದ 365 ದಿನವೂ ಕೆಲಸ ಮಾಡುತ್ತದೋ ಹಾಗೆ ನಾನು ನಿಮ್ಮ ಸೇವೆ ಮಾಡುತ್ತೇನೆ ನನಗೆ ಈ ಸಲ ಒಂದು ಅವಕಾಶ ಮಾಡಿಕೊಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷ ಕೆ.ಪಿ. ಶೆಟ್ಟಿ ಬೇಡೆಮಾರ್, ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್ರ, ಉಸ್ತುವಾರಿ ಸುರೇಶ ಶೆಟ್ಟಿ, ಅಶ್ವಿತ್ ಕುಮಾರ್, ಶರತ್ ಅಮೀನ್, ಜೈರಾಮ್ ಕಾಮತ್, ಯತೀಶ್ ಕುಮಾರ್, ಕಿಶೋರ್ ಕುಮಾರ್, ಜಗದೀಶ್ ಬಂಜನ್, ರವಿ ಕಾವೂರ್, ಪದ್ಮರಾಜ್, ಶ್ರೀಲತಾ ಗೋಪಾಲಕೃಷ್ಣ, ಸೀಮಾ ಪ್ರಭು, ಮಾಯಾ ನಾಯಕ್, ಐಶ್ವರ್ಯ ನಾಯಕ್ ಮತ್ತಿತರು ಉಪಸ್ಥಿತರಿದ್ದರು.