Recent Posts

Monday, January 20, 2025
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತು ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಐಕ್ಯೂಎಸಿ ಮತ್ತು ಎನ್‍ಇಪಿ ಟಾಸ್ಕ್ ಫೋರ್ಸ್ ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಸಪ್ಟೆಂಬರ್ 21 ರಂದು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನೋರ್ಬರ್ಟ್ ಲೋಬೊ ವಿದ್ಯಾರ್ಥಿಗಳ ಸಮಗ್ರ ಅಭ್ಯುದಯವೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಆಶಯವಾಗಿದೆ. ಈ ನೀತಿಯು ಭವಿಷ್ಯದಲ್ಲಿ ಉದ್ಯೋಗವನ್ನು ಪಡೆಯಲು ಅಗತ್ಯವಿರುವ ಜ್ಞಾನ, ಕೌಶಲ್ಯ, ಮೌಲ್ಯ, ಸಾಮಥ್ರ್ಯ ಮತ್ತು ಅನುಭವವನ್ನು ಗಳಿಸುವಲ್ಲಿ ವಿಶೇಷ ಮಹತ್ವ ನೀಡಲಿರುವುದು. ಇದರಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಆಯ್ಕೆ, ವಸ್ತು ವಿಷಯಗಳ ಆಯ್ಕೆ, ಸಮಯದ ಆಯ್ಕೆ ಮೊದಲಾದ ಅಂಶಗಳಿಗೆ ವಿಶೇಷ ಸ್ವಾತಂತ್ರ್ಯ ನೀಡಲಾಗಿದೆ. ವಿದ್ಯಾರ್ಥಿ ಕೇಂದ್ರೀಕೃತವಾಗಿರುವ ಈ ನೂತನ ಶಿಕ್ಷಣ ನೀತಿಯು ನೈಜ ವಿದ್ಯಾವಂತರನ್ನು ಸೃಷ್ಠಿಗೊಳಿಸಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ಪ್ರಕ್ರಿಯೆಯಲ್ಲಿಯೂ ಆಮೂಲಾಗ್ರ ಬದಲಾವಣೆಯಾಗಲಿದೆ. ಶಿಕ್ಷಣ ಸಂಸ್ಥೆಗಳ ನಿರ್ವಹಣೆಯಲ್ಲಿಯೂ ಬಹಳಷ್ಟು ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳು ಕೇಂದ್ರೀಕೃತವಾಗಿರುವುದರಿಂದ ವಿಶ್ವವಿದ್ಯಾನಿಲಯಗಳ ಆಡಳಿತ ವೈಖರಿಯಲ್ಲಿಯೂ ಸ್ವಲ್ಪ ಪ್ರಮಾಣದ ಬದಲಾವಣೆಗಳು ಕಂಡು ಬರಲಿದೆ ಎಂದು ಹೇಳಿದರು.


ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಕೇಂದ್ರ ಸರಕಾರವು ಈಗಾಗಲೇ ಮಂಜೂರು ಮಾಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಜಟಿಲವಾದ ಅಂಶಗಳನ್ನು ಒಳಗೊಂಡಿದೆ. ಈ ನೀತಿಯು ಶೈಕ್ಷಣಿಕ ವಲಯದಲ್ಲಿ ಬಹಳಷ್ಟು ಬದಲಾವಣೆಗಳನ್ನು ಉಂಟು ಮಾಡಲಿವೆ. ಇವುಗಳನ್ನು ಯಶಸ್ವಿಯಾಗಿ ಎದುರಿಸಲು ಸೂಕ್ತ ಮಾರ್ಪಾಡುಗಳನ್ನು ಕೈಗೊಳ್ಳುವ ಅನಿವಾರ್ಯತೆಯಿದೆ. ಈ ನೀತಿಯು ಮುಂದಿನ ಜನಾಂಗದ ಸ್ಪರ್ಧಾ ಸಾಮಥ್ರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾಲೇಜಿನ ವ್ಯವಹಾರ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಪ್ರಾರ್ಥಿಸಿ, ಐಕ್ಯೂಎಸಿ ಸಂಯೋಜಕ ಡಾ. ಎ ಪಿ ರಾಧಾಕೃಷ್ಣ ಸ್ವಾಗತಿಸಿದರು. ಎನ್‍ಇಪಿ ಟಾಸ್ಕ್ ಫೋರ್ಸ್ ಸಂಯೋಜಕ ಡಾ. ಕೆ ಚಂದ್ರಶೇಖರ್ ವಂದಿಸಿ, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು