ಮೂಡುಬಿದಿರೆ – ರಾಜ್ಯದಾದ್ಯಂತ ವೃತ್ತಿಪರ ಕೋರ್ಸುಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಯಲ್ಲಿ ರಾಜ್ಯಕ್ಕೆ 7 ಮತ್ತು 8ನೇ ರ್ಯಾಂಕ್ ಪಡೆದ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್.ಜಿ.ಭಟ್ ಇವರನ್ನು ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾತ್ವಿಕ್.ಜಿ.ಭಟ್ ನಿರಂತರ ಪರಿಶ್ರಮ, ಶ್ರದ್ಧೆ, ಗುಣಮಟ್ಟದ ಬೋಧಕ ವೃಂದ, ಶಿಸ್ತು ಬದ್ಧ ವ್ಯವಸ್ಥೆ, ಕಲಿಕೆಗೆ ಪೂರಕವಾದ ಪರಿಸರ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ನಾನು ರ್ಯಾಂಕ್ ಗಳಿಸಲು ಸಾಧ್ಯವಾಯಿತು. ದಿನದಲ್ಲಿ 14 ಗಂಟೆಗಿಂತಲೂ ಹೆಚ್ಚಿನ ಸಮಯವನ್ನು ಓದಿಗಾಗಿ ಬಳಸಿಕೊಳ್ಳುತ್ತ ಲಾಕ್‍ಡೌನ್ ಸಂದರ್ಭವನ್ನು ಸದುಪಯೋಗ ಮಾಡಿಕೊಂಡಿದ್ದೇನೆ. ಮುಂದೆ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸುವ ನಿರೀಕ್ಷೆ ಇದೆ. ವೈದ್ಯನಾಗಿ ಜನಸೇವೆ ಮಾಡಬೇಕೆಂಬ ಬಯಕೆ ಇದೆ. ಪ್ರಸ್ತುತ ಸಂಸ್ಥೆಯ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಉಪನ್ಯಾಸಕರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಂಡು, ಸಮಯದ ಸದುಪಯೋಗ ಪಡಿಸಿಕೊಂಡರೆ ಮುಂದಿನ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದೆಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸಾಧಕ ವಿದ್ಯಾರ್ಥಿಗೆ 50 ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನದ ಚೆಕ್ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಯ ಸಾಧನೆಗೆ ಬೆಂಬಲವಾಗಿ ನಿಂತ ಪೋಷಕರನ್ನು ಕೂಡ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಮತ್ತು ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಸಾದ್ ಭಟ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಭಾಷಾ ವಿಭಾಗ ಮುಖ್ಯಸ್ಥ ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿದರು.