Tuesday, November 19, 2024
ಪುತ್ತೂರು

ಬಪ್ಪಳಿಗೆಯ ಸಿಬಿಎಸ್‍ಇ ವಿದ್ಯಾಲಯದಲ್ಲಿ ಅಂಬಿಕಾ ಯಕ್ಷಕಲಾ ವೃಂದಕ್ಕೆ ಚಾಲನೆ- ಕಹಳೆ ನ್ಯೂಸ್

ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ರೂಪುಗೊಂಡಿರುವ ಯಕ್ಷಗಾನ ತರಬೇತಿ ಮತ್ತು ಪ್ರದರ್ಶನ ಘಟಕವಾದ ‘ಅಂಬಿಕಾ ಯಕ್ಷಕಲಾ ವೃಂದ’ಕ್ಕೆ ಚಾಲನೆ ನೀಡಿ, ‘ಪುರಾಣ ಪಾತ್ರ ಶಿಲ್ಪ-ಅರ್ಜುನ’ ಎಂಬ ವಿಷಯದ ಬಗೆಗೆ ಮಾತನಾಡಿದ ರಾಮಕುಂಜದ ವಿಶ್ರಾಂತ ಕನ್ನಡ ಉಪನ್ಯಾಸಕರಾದ ಗಣರಾಜ ಕುಂಬ್ಳೆ ವ್ಯಾಸ, ಪಂಪ, ಕುಮಾರವ್ಯಾಸನಂತಹ ಕವಿಗಳು ಚಿತ್ರಿಸಿದ ಅರ್ಜುನನ ಪಾತ್ರ ಅತ್ಯಂತ ಉತ್ಕøಷ್ಟವಾದದ್ದು. ಇಂದ್ರನಂದನನಾದ ಆತ ಸಾಹಸಕ್ಕೆ ಪ್ರತಿರೂಪನಾಗಿ ನಮ್ಮ ಕಣ್ಣಮುಂದೆ ಕಾಣಿಸುತ್ತಾನೆ. ಆತನ ಪರಾಕ್ರಮ, ಏಕಾಗ್ರತೆ, ಗುರುಭಕ್ತಿಯೇ ಮೊದಲಾದ ಗುಣಗಳು ಎಲ್ಲರಿಗೂ ಮಾದರಿಯಾಗಿ ಗುರುತಿಸಲ್ಪಡುತ್ತವೆ. ಕಾವ್ಯಗಳಲ್ಲಿ ಉಕ್ತವಾದ ಆತನ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಜೀವನದಲ್ಲಿ ಅನೇಕ ಸೋಲುಗಳು ಎದುರಾಗುತ್ತವೆ. ಅಂತಹ ಸೋಲನ್ನು ಎದುರಿಸಿ ಗೆಲುವನ್ನು ಸಾಧಿಸುವ ಛಲ ಅರ್ಜುನನ ಬದುಕಿನಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಆತನ ಹೋರಾಟದ ಹಾದಿ ಪ್ರತಿಯೊಬ್ಬರಿಗೂ ದಾರಿದೀಪದಂತೆ ಕಾಣಿಸುತ್ತದೆ ಮಾತ್ರವಲ್ಲದೆ ಅನೇಕ ಮೌಲ್ಯಗಳ, ನೀತಿಗಳ ಪ್ರತಿನಿಧಿಯಾಗಿ ಆತನ ಪಾತ್ರ ಮಹಾಭಾರತದಲ್ಲಿ ಚಿತ್ರಿತಗೊಂಡಿದೆ. ಹೀಗೆ ಪುರಾಣ ಪಾತ್ರಗಳ ಮೂಲಕ ಉಕ್ತವಾಗುವ ಜೀವನ ಪಾಠಕ್ಕೆ ನಮ್ಮನ್ನು ನಾವು ತೆರೆದುಕೊಂಡಾಗ ಬದುಕು ಸುಂದರವಾಗುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯಕ್ಷಗಾನ ನಾಟ್ಯ ಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮಾತನಾಡಿ ಕಲೆಯ ಉಳಿವಿನ ದೃಷ್ಟಿಯಿಂದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನ ತರಬೇತಿಗೆ ತಮ್ಮನ್ನು ತಾವು ಒಡ್ಡಿಸಿಕೊಳ್ಳಬೇಕು. ಯಕ್ಷಗಾನ ಎಂಬುದು ನಮ್ಮಲ್ಲಿ ಸಂಸ್ಕಾರವನ್ನು ತುಂಬುವಂತಹ ವಿಶಿಷ್ಟ ಕಲೆ. ಶಿಕ್ಷಣ ಸಂಸ್ಥೆಗಳ ಯಕ್ಷಗಾನ ಕಲಾ ತಂಡದಲ್ಲಿ ವಿದ್ಯಾರ್ಥಿಗಳು ಭಾಗವಾಗುವುದರ ಮುಖೇನ ದೇಶದ ಸಂಸ್ಕøತಿಯನ್ನು ಬೆಳೆಸಬಹುದು ಎಂದರಲ್ಲದೆ ಪುರಾಣ ಕಥೆಗಳನ್ನು ಓದುವುದರ ಮೂಲಕ ಪೌರಾಣಿಕ ಜ್ಞಾನದ ಅರಿವು ಒಡಮೂಡುವುದಕ್ಕೆ ಸಾಧ್ಯ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಯಕ್ಷಗಾನ ಕಲೆ ಒಂದು ಅದ್ಭುತ. ನೃತ್ಯ, ಹಾಡುಗಾರಿಕೆ, ಮಾತು ಹಾಗೂ ವೇಷಭೂಷಣಗಳನ್ನೊಳಗೊಂಡ ಸ್ವತಂತ್ರವಾದ ಶಾಸ್ತ್ರೀಯ ಕಲೆ. ಜಿಲ್ಲೆ, ರಾಜ್ಯ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಯಕ್ಷಗಾನ ಇಂದು ಪ್ರಸಾರಗೊಳ್ಳುತ್ತಿದೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ನಾನು ಭಾರತೀಯ ಎಂಬುದನ್ನು ಹೆಮ್ಮೆಯಿಂದ ಪ್ರತಿನಿಧಿಸಲು ಹಾಗೂ ಇಲ್ಲಿನ ಸಂಸ್ಕøತಿಯನ್ನು ದಿಗ್ದರ್ಶಿಸಲು ಯಕ್ಷಗಾನ ಒಂದು ಸಮರ್ಥ ಮಾಧ್ಯಮವೆನಿಸುತ್ತದೆ. ಯಕ್ಷಗಾನ ನಮ್ಮಲ್ಲಿನ ವಾಕ್ ಚಾತುರ್ಯವನ್ನು ವೃದ್ಧಿಗೊಳಿಸುತ್ತದೆ. ನೋಡುಗನಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿದರೆ, ನೃತ್ಯದ ಕಾರಣದಿಂದಲಾಗಿ ಕಲಾವಿದರ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿಯೂ ಈ ಕಲೆ ಪೂರಕವೆನಿಸುತ್ತದೆ. ಆದರೆ ಆಧುನಿಕ ಕಲೆಗಳ ಭರಾಟೆಯಲ್ಲಿ ಯಕ್ಷಗಾನದಂತಹ ಪಾರಂಪರಿಕ ಜನಪದ ಕಲೆಗಳು ಕಳೆಗುಂದುತ್ತಿರುವುದು ಆತಂಕಕಾರಿ. ಭಾರತೀಯ ಸಂಸ್ಕøತಿಯನ್ನು ಪೋಷಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನದ ಚೆಂಡೆ ಮದ್ದಳೆಗಳ ನಾದದೊಂದಿಗೆ ಆರಂಭಿಸಲಾದ ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ನಿರ್ದೇಶಕ ಸುರೇಶ್ ಶೆಟ್ಟಿ, ಸದಸ್ಯ ಬಾಲಕೃಷ್ಣ ಬೋರ್ಕರ್, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಬೋಧಕ ಮತ್ತು ಬೋಧಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕ ಸತೀಶ್ ಇರ್ದೆ ಯಕ್ಷಗಾನೀಯ ಶೈಲಿಯಲ್ಲಿ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಜಸ್ವಿತ್ ಸ್ವಾಗತಿಸಿ, ಆತ್ರೇಯ ಭಟ್ ವಂದಿಸಿದರು. ವಿದ್ಯಾರ್ಥಿನಿಯರಾದ ಆತ್ಮಶ್ರೀ ಎಂ ಹಾಗೂ ಭಾರ್ಗವಿ ಬೋರ್ಕರ್ ಕಾರ್ಯಕ್ರಮ ನಿರ್ವಹಿಸಿದರು.