ಕುಂದಾಪುರ : ಹದಿನೆಂಟನೆಯ ಶತಮಾನದ ಮೂಲಿಕೆ ವೆಂಕಣ್ಣ ಕವಿ ವಿರಚಿತ “ಮಾನಸಚರಿತ್ರೆ” ಎಂಬ ಅಪೂರ್ವ ಯಕ್ಷಗಾನ ಪ್ರಸಂಗದ ತಾಳೆಗರಿ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ದಿ॥ ಶಿರೂರು ಫಣಿಯಪ್ಪಯ್ಯ ಎಂಬ ಭಾಗವತರ ಸಂಗ್ರಹದಲ್ಲಿದ್ದ ತಾಳೆಗರಿ ಮತ್ತು ಅವರ ಹಸ್ತ ಪ್ರತಿ ಭಾಗವತರ ಸುಪುತ್ರ ಉಮೇಶ ಶಿರೂರು ಅವರಿಗೆ ದೊರೆತಿದೆ. ಈ ತಾಳೆಗರಿಯನ್ನು ಓದಿ ಗ್ರಂಥವನ್ನು ಸಂಪಾದಿಸುತ್ತಿರುವ ಯಕ್ಷಗಾನ ವಿದ್ದಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಇದರಲ್ಲಿ ಮನಸ್ಸಿನ ವಿವಿಧ ಭಾವನೆಗಳೇ ಪಾತ್ರಗಳಾಗಿದ್ದು ಆಟ ಮತ್ತು ತಾಳಮದ್ದಳೆಗಳೆರಡಕ್ಕೂ ಇದು” ಹೊಂದಿಕೆಯಾಗುವ ವಿಶಿಷ್ಟ ಅಧ್ಯಾತ್ಮಿಕ ಯಕ್ಷಗಾನ ಕೃತಿಯೆಂದು ಅಭಿಪ್ರಾಯಪಟ್ಟಿದ್ದಾರೆ. ಡಾ. ಶಿವರಾಮ ಕಾರಂತರೇ ಮೊದಲ್ಗೊಂಡು ಹಲವಾರು ವಿದ್ವಾಂಸರು ಈ ಕೃತಿಯ ಬಗ್ಗೆ ಉಲ್ಲೇಖಿಸಿದ್ದು ಇದುವರೆಗೆ ಅದರ ಹಸ್ತ ಪ್ರತಿ ಸಿಕ್ಕಿರಲಿಲ್ಲ. ಇದು ಗ್ರಂಥ ರೂಪದಲ್ಲಿ ಪ್ರಕಟವಾಗಲಿದ್ದು ಕಲಾಸಕ್ತರಿಗೆ ಲಭ್ಯವಾಗಲಿದೆ.
1750-1830ರ ಕಾಲಮಾನದ ಮೂಲಿಕೆ ವೆಂಕಣ್ಣ ಕವಿ ಮೂಲತಃ ಕಾಗಿನೆಲೆ ಸಮೀಪದ ಬಂಕಾಪುರದವರಾಗಿದ್ದು ನಂತರದ ದಿನಗಳಲ್ಲಿ ಹರಿದಾಸ ಪಂಥದ ಜಗನ್ನಾಥದಾಸರ ಶಿಷ್ಯರಾಗಿ ದ.ಕ ಜಿಲ್ಲೆಯ ಮೂಲ್ಕಿಯ ವೆಂಕಟ್ರಮಣ ದೇವಸ್ಥಾನದ ಬಳಿ ವಾಸವಿದ್ದರು. ಅವರು ಅನೇಕ ಕೃತಿಗಳನ್ನು ರಚಿಸಿದ್ದು 250 ವರ್ಷ ಹಳೆಯ ಕವಿಕಾಲದ ಕೃತಿಯಾಗಿರುವ ಮಾನಸ ಚರಿತೆಯಲ್ಲಿ 361 ಪದ್ಯಗಳಿವೆ.