ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ ಈ ಬಾರಿಯೂ ಕಳೆದ ಬಾರಿಯಂತೆ ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ. 7ರಿಂದ ಅ.16ರವರೆಗೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ಶ್ರೀ ಗೋಕರ್ಣನಾಥ ಕ್ಷೇತ್ರದ ರುವಾರಿ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಂತೆ, ”ನಮ್ಮ ದಸರಾ ನಮ್ಮ ಸುರಕ್ಷೆ” ಎಂಬ ಘೋಷ ವಾಕ್ಯದಡಿ ಈ ಬಾರಿಯ ದಸರಾ ಕಾರ್ಯಕ್ರಮ ನಡೆಯಲಿದ್ದು, ಶಾರದಾ ಮೂರ್ತಿಯ ವಿಸರ್ಜನೆಯ ದಿನದಂದು ದಸರಾ ಮೆರವಣಿಗೆ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಸರಕಾರದ ಆದೇಶದ ಹಿನ್ನೆಲೆಯಲ್ಲಿ ಈ ಬಾರಿಯೂ ದಸರಾವನ್ನು ಮಾರ್ಗಸೂಚಿಗಳೊಂದಿಗೆ ನಡೆಸುವಂತೆ ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಕ್ಷೇತ್ರಾಡಳಿತ ಮಂಡಳಿಯ ಸದಸ್ಯರಿಗೆ ಸಲಹೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನವದುರ್ಗೆಯರ ಸ್ಥಾಪನೆ, ಅನ್ನಸಂತರ್ಪಣೆ ಹೊರತಾಗಿ ಕಳೆದ ಬಾರಿಯಂತೆ ಪ್ರಸಾದ ರೂಪದಲ್ಲಿ ಅನ್ನ ವಿತರಣೆ ಹಾಗೂ ರಾಜಬೀದಿಗಳ ಅಲಂಕಾರ ವಿಶೇಷವಾಗಿ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ರವಿಶಂಕರ ಮಿಜಾರು, ಮಹೇಶ್ಚಂದ್ರ, ಎಂ. ಶೇಕರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಡಾ. ಬಿ.ಜಿ. ಸುವರ್ಣ, ಸದಸ್ಯರಾದ ರಾಧಾಕೃಷ್ಣ, ಜತಿನ್ ಅತ್ತಾವರ, ಲೀಲಾಕ್ಷ ಕರ್ಕೇರ, ಚಂದನ್‍ದಾಸ್, ಗೌರವಿ ಪಿ.ಕೆ., ಕಿಶೋರ್ ದಂಡಕೇರಿ ಮೊದಲಾದವರು ಉಪಸ್ಥಿತರಿದ್ದರು.