Friday, November 22, 2024
ಪುತ್ತೂರು

ಹಿರಿಯ ಶಿಕ್ಷಕ ಸುರೇಶ್ ಶೆಟ್ಟಿ ಅವರ ಎಂಬತ್ತನೆಯ ವರ್ಷಾಚರಣೆ – ‘ಅಶೀತಿ ಪ್ರಣತಿ’ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆದರ್ಶ ಶಿಕ್ಷಕರೆನಿಸಿಕೊಂಡಿರುವ ಕೆ.ಸುರೇಶ ಶೆಟ್ಟಿ ಅವರ ಎಂಬತ್ತನೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಲಾದ ಅಶೀತಿ ಪ್ರಣತಿ ಎಂಬ ಅಭಿವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಧ್ಯಾತ್ಮ ಗುರು ಹಾಗೂ ಶಿಕ್ಷಕ ಇಬ್ಬರೂ ಶ್ರೇಷ್ಟರು. ಇಂತಹ ಗುರುವಿನ ಮುಖಾಂತರ ಪಡೆದ ಜ್ಞಾನವೂ ಉತ್ಕøಷ್ಟಕಾರಿಯಾದದ್ದು. ಕಲ್ಲನ್ನು ಕಡೆದು ಮೂರ್ತಿಯನ್ನು ಕೆತ್ತುವ ಹಾಗೂ ಅಂಧಕಾರ ಕಳೆದು ತೇಜಸ್ಸನ್ನು ಹೊಮ್ಮಿಸುವ ಮಹಾನ್ ಕಾಯಕವನ್ನು ನಿರ್ವಹಿಸುವ ಗುರುಗಳು ಅಂಬಿವಂದನೆಗೆ ಅರ್ಹರು ಎಂದು ಹೇಳಿದರು. ಸುರೇಶ್ ಶೆಟ್ಟಿ ಅವರು ಸಾವಿರಾರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಾರಣೀಭೂತರಾದವರು. ಅದ್ಭುತವಾದ ಗಣಿತ ಜ್ಞಾನವನ್ನು ಎಳೆಯ ಮನಸ್ಸುಗಳಲ್ಲಿ ತುಂಬಿ ವಿದ್ಯಾರ್ಥಿಗಳನ್ನೂ ತಜ್ಞತೆಯೆಡೆಗೆ ಒಯ್ಯುವ ಯತ್ನವನ್ನು ನಿರಂತರವಾಗಿ ನಡೆಸಿದವರು. ನಿವೃತ್ತಿಯ ನಂತರವೂ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿದ ಕೀರ್ತಿ ಅವರದು. ಅವರಿಂದ ಕಲಿತ ಸಂಗತಿಗಳು ತಾನು ಸಂಸದನಾಗುವುದಕ್ಕೂ ಸಹಕಾರಿಯಾಗಿವೆ ಎಂದು ತನ್ನ ಗುರುಗಳಾದ ಸುರೇಶ್ ಶೆಟ್ಟಿ ಅವರ ಸಾಧನೆಗಳನ್ನು ಉಲ್ಲೇಖಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಶಾಸಕ ಸಂಜೀವ ಮಠಂದೂರು ಮಾತನಾಡಿ ಗುರುಪರಂಪರೆಯ ಹಿರಿಮೆಯಿಂದಾಗಿ ಭಾರತವನ್ನು ಇಂದು ಜಗತ್ತು ಗುರುತಿಸುವಂತಾಗಿದೆ. ಪ್ರಸ್ತುತ ಕೋವಿಡ್‍ನಿಂದಾಗಿ ಗುರು-ಶಿಷ್ಯ ವ್ಯವಸ್ಥೆಗೆ ಧಕ್ಕೆ ಬರುವಂತಾಗಿರುವುದು ವಿಷಾದನೀಯ. ವಿದ್ಯಾರ್ಥಿಯನ್ನು ಒಬ್ಬ ಸತ್ಪ್ರಜೆಯನ್ನಾಗಿ ರೂಪಿಸಿ ಸಮಾಜಕ್ಕೆ ಅರ್ಪಿಸುವ ಗುರುವಿನ ಮಹತ್ವ ಅಪಾರವಾದದ್ದು. ಆಧ್ಯಾತ್ಮಿಕ ಬದುಕಿನ ಉತ್ತರಣಕ್ಕೂ ಗುರುವಿನ ಅವಶ್ಯಕತೆ ಅತ್ಯಂತ ಹೆಚ್ಚು. ಇಂದಿನ ಸಮಾಜಕ್ಕೆ ಗುರುವಿನ ಆಶೀರ್ವಾದ ಅತ್ಯಂತ ಅಗತ್ಯ ಎಂದು ನುಡಿದರು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ನಗರಾಭಿವರದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಸುರೇಶ್ ಶೆಟ್ಟರು ಒಬ್ಬ ವಿಶಿಷ್ಟ ಗುರು. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಂಡು ಅವರನ್ನು ತಿದ್ದಿ ಬದುಕಿನ ಉತ್ಕರ್ಷಕ್ಕೆ ಕಾರಣವಾದಂತಹವರು. ಅಪಾರವಾದ ಓದಿನ ಹವ್ಯಾಸ ಉಳ್ಳವರು. ಆಗುಹೋಗುಗಳ ಬಗೆಗೆ ಆಸಕ್ತಿಯಿಂದ ತಿಳಿದುಕೊಳ್ಳವ ಗುಣ ಸುರೇಶ ಶೆಟ್ಟರಲ್ಲಿದೆ. ತಮ್ಮಲ್ಲಿನ ಅಗಾಧ ಪಾಂಡಿತ್ಯದಿಂದಲೇ ವಿದ್ಯಾರ್ಥಿಗಳನ್ನು ಪ್ರಭಾವಿಸುತ್ತಿದ್ದ ಮಹಾನ್ ಗುರು. ನಿರಂತರವಾಗಿ ಚೈತನ್ಯಶೀಲರಾಗಿ ಕೆಲಸ ನಿರ್ವಹಿಸುವುದು ಅವರ ಕ್ರಮ ಎಂದು ನುಡಿದರು.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ ಸುರೇಶ್ ಶೆಟ್ಟರು ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಬೆಳೆಸಿದವರು. ಪಾಠಕ್ಕೂ ಆಟಕ್ಕೂ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದ್ದಂತಹವರು. ಅವರ ಅಪಾರ ಶಿಷ್ಯವೃಂದ ಈಗಲೂ ಅವರೆಡೆಗೆ ಗುರುಭಕ್ತಿಯನ್ನು ತೋರುತ್ತಿದೆ ಎಂಬುದೇ ಅವರ ಸಾಧನೆಗೆ ಹಿಡಿದ ಕೈಗನ್ನಡಿ ಎಂದು ಅಭಿಪ್ರಾಯಪಟ್ಟರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸುರೇಶ್ ಶೆಟ್ಟರ ಗುಣ ಎಲ್ಲರಿಗೂ ಮಾದರಿಯಾದಂತಹದ್ದು. ಅಂಬಿಕಾ ಸಂಸ್ಥೆಯ ಬೆಳವಣಿಗೆಗಾಗಿ ಸದಾ ಕಾರ್ಯನಿರ್ವಹಿಸುತ್ತಿರುವವರು. ಸಂಸ್ಥೆಯೆಡೆಗಿನ ಅವರ ತ್ಯಾಗ ಗಮನೀಯ. ಸುರೇಶ್ ಶೆಟ್ಟರಂತಹ ಆದರ್ಶ ಶಿಕ್ಷಕರು ತಯಾರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ ಸುರೇಶ್ ಶೆಟ್ಟಿ ತನ್ನ ಜೀವನದಲ್ಲಿ ಅನೇಕ ಸ್ನೇಹಿತರು ಒದಗಿದ್ದಾರೆ. ಅಗತ್ಯ ಸಂದರ್ಭಗಳಲ್ಲೆಲ್ಲಾ ಸಹಾಯ ಮಾಡಿ ತನ್ನನ್ನು ಬೆಂಬಲಿಸಿದ್ದಾರೆ. ಈವರೆಗೂ ತನ್ನ ಜೀವನದಲ್ಲಿ ಯಾರೊಂದಿಗೂ ಜಗಳ ಆಡಿಲ್ಲ ಎನ್ನುವುದು ತನಗೆ ಅತೀವ ತೃಪ್ತಿ ಕೊಟ್ಟ ವಿಚಾರ. ಅಂಬಿಕಾ ಸಂಸ್ಥೆಗಳು ತನ್ನ ಮೇಲೆ ಇನ್ನಿಲ್ಲದ ಪ್ರೀತಿ, ಗೌರವ ತೋರಿಸಿವೆ ಎಂದರಲ್ಲದೆ ತನ್ನ ಬದುಕಿಗೆ ರಾಮ, ಅರ್ಜುನ ಹಾಗೂ ಗಾಂಧೀಜಿಯವರನ್ನು ಆದರ್ಶ ಎಂದು ಪರಿಗಣಿಸಿ ಮುನ್ನಡೆಯುತ್ತಿದ್ದೇನೆ ಎಂದು ನುಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಿವಾನಂದ ರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ. ಸುರೇಶ್ ಶೆಟ್ಟಿ ಅವರ ಪತ್ನಿ ವಸಂತಿ ಶೆಟ್ಟಿ, ಗಣ್ಯರಾದ ಜಗನ್ನಿವಾಸ ರಾವ್, ಲಕ್ಷ್ಮೀಶ ತೋಳ್ಪಾಡಿ ಹಾಗೂ ಬಲರಾಮ ಆಚಾರ್ಯ ಸುರೇಶ್ ಶೆಟ್ಟಿ ಅವರ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಶಿಕ್ಷಕಿ ಸುಜಯಾ ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ಸ್ವಾಗತಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಸಮ್ಮಾನ ಪತ್ರ ವಾಚಿಸಿದರು. ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ವಂದಿಸಿದರು. ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ. ಕಾರ್ಯಕ್ರಮ ನಿರ್ವಹಿಸಿದರು.