Recent Posts

Monday, January 20, 2025
ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ- ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2020-21 ನೇ ಶೈಕ್ಷಣಿಕ ವರ್ಷದ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗಣೇಶ್ ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಾಗ ಜೀವನದ ಪಯಣ ಸುಗಮವಾಗುತ್ತದೆ. ಎದುರಾಗುವ ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸುವಲ್ಲಿ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ಧೈರ್ಯವನ್ನು ಕಳೆದುಕೊಳ್ಳದೆ ಛಲದಿಂದ ಮುನ್ನಡೆದರೆ ವ್ಯಕ್ತಿ ಮೌಲ್ಯದ ಉತ್ತಮ ಪ್ರತಿನಿಧಿಯಾಗಿ ಮೂಡಿ ಬರಲು ಸಾಧ್ಯವಾಗುತ್ತದೆ. ಉತ್ತಮ ಅಂಕಗಳನ್ನು ರ್ಯಾಂಕ್‍ಗಳನ್ನು ಗಳಿಸುವುದು ವಿದ್ಯಾರ್ಥಿಗಳು ಮಾಡಿದಂತಹ ಸತತ ಪರಿಶ್ರಮದಿಂದಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ, ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸುವಂತಾಗಬೇಕು. ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಬೇಕು. ಪಠ್ಯವನ್ನು ಮೀರಿದ ಜೀವನ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಇಚ್ಛಾಶಕ್ತಿ, ಆತ್ಮಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು. ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವು ಗುರುತಿಸುವಂಥ ಕಾರ್ಯಗಳನ್ನು ಕೈಗೊಳ್ಳಬೇಕು. ಕಾಲೇಜಿನಲ್ಲಿ ಕಲಿತ ಪ್ರತಿಭಾನ್ವಿತ ಕುಡಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನತನದ ಛಾಪು ಒತ್ತುವುದರೊಂದಿಗೆ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಕಾಲೇಜಿನಲ್ಲಿ ಕಲಿತ ವಿದ್ಯಾಲಯದ ಚಿಂತನೆಯನ್ನು ದೈನಂದಿನ ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು. ವಿವೇಕಾನಂದರ ಹೆಸರನ್ನು ಇಟ್ಟುಕೊಂಡ ಈ ಸಂಸ್ಥೆಯ ಧ್ಯೇಯ, ವಿವೇಕಾನಂದರ ವ್ಯಕ್ತಿತ್ವ ಎಲ್ಲರದಾಗಬೇಕು. ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜದಲ್ಲಿ ಹೊಳೆಯುವ ವಜ್ರಗಳಾಗಿ ರೂಪುಗೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಮಾತನಾಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿದ್ಯಾರ್ಥಿಗಳ ಸಾಧನೆಗೆ ಎತ್ತಿ ಹಿಡಿದ ಕನ್ನಡಿ. ವಿದ್ಯಾರ್ಥಿಗಳ ಈ ಪ್ರತಿಭೆಯು ಸಮಾಜದ ಸುಖಕ್ಕೆ ಉಪಯೋಗಬೇಕು. ಸಹಜ ಕಲಿಕೆಯ ಖುಷಿಯನ್ನು ಅನುಭವಿಸಬೇಕು. ತಮ್ಮ ಯಶಸ್ಸಿಗೆ ಕಾರಣರಾದ ವ್ಯಕ್ತಿಗಳನ್ನು ನಾವು ಎಂದೂ ಮರೆಯಬಾರದು. ಶಿಕ್ಷಣದ ಎಲ್ಲ ಆಯಾಮಗಳನ್ನು ಗ್ರಹಿಸುವ ಸಾಮಥ್ರ್ಯವನ್ನು ಪಡೆಯಬೇಕು. ಜೀವನದ ಗುರಿಯನ್ನು ತಲುಪುವಲ್ಲಿ ಸಾಕಷ್ಟು ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿನ ದೌರ್ಬಲ್ಯದಿಂದ ಹೊರಬಂದು ಭಾವನಾತ್ಮಕ ಸ್ಥಿರತೆಯನ್ನು ಗಟ್ಟಿ ಮಾಡಿಕೊಂಡಾಗ ನಮ್ಮಲ್ಲಿನ ಶಕ್ತಿಯು ಹೊರಹೊಮ್ಮಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರವಾದರೂ ಅದನ್ನು ಆರಿಸಿ ಸಾಧನೆ ಮಾಡುತ್ತಾ ಮುಂದುವರೆಯಬೇಕು, ಜೊತೆಗೆ ತಾನು ಕಲಿತ ಸಂಸ್ಥೆಯನ್ನು, ಕಲಿಸಿದ ಗುರುಗಳನ್ನು ಗೌರವಿಸುವಂತಾಗಬೇಕು. ಜೀವನದಲ್ಲಿ ನಂಬಿಕೆ, ನಮ್ರತೆ ಮತ್ತು ವಿನಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಲ್ ಬಹದ್ದೂರ್ ಶಾಸ್ತ್ರೀ ಮತ್ತು ಗಾಂಧಿ ನಮನ: ಕಾರ್ಯಕ್ರಮದಲ್ಲಿ ಅತಿಥಿಗಳು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವವನ್ನು ಅರ್ಪಿಸಲಾಯಿತು. ಲಾಲ್ ಬಹದ್ದೂರ್ ಶಾಸ್ತ್ರೀ ಮತ್ತು ಗಾಂಧಿ ಜಯಂತಿಯ ಬಗ್ಗೆ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ವಾಸುದೇವ ತಿಲಕ್ ಮಾತನಾಡಿ ಧೀಮಂತ ವ್ಯಕ್ತಿತ್ವವುಳ್ಳ ಗಾಂಧೀಜಿ ಮತ್ತು ಶಾಸ್ತ್ರೀಜಿಯವರಿಬ್ಬರ ಜೀವನ ಮತ್ತು ಆದರ್ಶಗಳು ಎಲ್ಲಾ ಕಾಲಕ್ಕೂ ಅನುಸರಣೀಯವಾದದ್ದು. ಲಾಲ್ ಬಹದ್ದೂರ್ ಶಾಸ್ತ್ರಿಯವರ ಮೌಲ್ಯಗಳು ಮತ್ತು ತತ್ವಗಳನ್ನು ಒಳಗೊಂಡಿದ್ದ ಅವರ ಜೀವನವು ಈ ದೇಶವಾಸಿಗಳಿಗೆ ಸದಾಕಾಲಕ್ಕೂ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ. ದೇಶಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಇಂಥ ಮಹಾತ್ಮರುಗಳ ಬಗೆಗೆ ತಿಳಿದುಕೊಂಡು, ಅವರು ತೋರಿದ ಮಾರ್ಗದಲ್ಲಿ ನಡೆಯುವುದು ನಮ್ಮ ಕರ್ತವ್ಯವಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪ ಪ್ರದಾನ ಕಾರ್ಯಕ್ರಮ: 2020-21 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಮಯೂರ್ ಬಿ.ಜಿ, ಕ್ಷಿತಿಜ್ ಎಚ್.ಎಸ್ ಮತ್ತು ಶ್ರೇಯಾ ಪಿ ರವರಿಂದ ದೀಪ ಪ್ರಜ್ವಲಿಸಿ 2021-22 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಪುನೀತ್, ಕುಲದೀಪ್‍ಸಿಂಗ್ ಮತ್ತು ಧರಿತ್ರಿರವರಿಗೆ ಹಸ್ತಾಂತರಿಸಲಾಯಿತು. ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದೊಂದಿಗೆ ಕಿರಿಯ ವಿದ್ಯಾರ್ಥಿಗಳು ಮುನ್ನಡೆಯಬೇಕೆಂಬುದು ಈ ಕಾರ್ಯಕ್ರಮದ ಆಶಯವಾಗಿತ್ತು.

ವಿಶೇಷ ಸನ್ಮಾನ: ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳು ಸೇರಿದಂತೆ 2020-21 ನೇ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಗ್ರಿಕಲ್ಚರ್ ಬಿ.ಯಸ್ಸಿ.ಯಲ್ಲಿ 530 ನೇ ರ‍್ಯಾಂಕ್, ಇಂಜಿನಿಯರಿಂಗ್‍ನಲ್ಲಿ 1582ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತುಯೋಗ ವಿಭಾಗದಲ್ಲಿ 974 ನೇ ರ‍್ಯಾಂಕ್ ಗಳಿಸಿದ ಸಿಂಚನಾಲಕ್ಷ್ಮೀ, ಎಗ್ರಿಕಲ್ಚರ್ ಬಿ.ಯಸ್ಸಿ.ಯಲ್ಲಿ 579 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 1153ನೇ ರ‍್ಯಾಂಕ್ ಗಳಿಸಿದ ಅಮೃತಾ ಭಟ್, ಇಂಜಿನಿಯರಿಂಗ್ ವಿಭಾಗದಲ್ಲಿ 677ನೇ ರ್ಯಾಂಕ್ ಹಾಗೂ ಎಗ್ರಿಕಲ್ಚರ್ ಬಿ.ಯಸ್ಸಿ.ಯಲ್ಲಿ 1385 ನೇ ರ್ಯಾಂಕ್ ಗಳಿಸಿದ ಗಣೇಶ ಕೃಷ್ಣ, ಇಂಜಿನಿಯರಿಂಗ್ ವಿಭಾಗದಲ್ಲಿ 784ನೇ ರ‍್ಯಾಂಕ್ ಗಳಿಸಿದ ಚಿನ್ಮಯಿ ಇವರಿಗೆ ಶಾಲು ಹೊದಿಸಿ ಟ್ಯಾಬ್, ಕಡತ ಮತ್ತು ಬ್ಯಾಗ್‍ನ್ನು ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗೆಯೇ ಇಂಜಿನಿಯರಿಂಗ್ ವಿಭಾಗದಲ್ಲಿ 1383ನೇ ರ‍್ಯಾಂಕ್ ಗಳಿಸಿದ ಅವನೀಶ ಕೆ, ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 852 ನೇ ರ‍್ಯಾಂಕ್ ಗಳಿಸಿದ ಪ್ರೀತಂ ಜಿ, ನಾಟಾ ಪರೀಕ್ಷೆಯಲ್ಲಿ 254 ನೇ ರ‍್ಯಾಂಕ್ ಗಳಿಸಿದ ಶೆಫಾಲಿಕಾ, ಸಿಎ ಫೌಂಡೇಶನ್ ಪರೀಕ್ಷೆಯನ್ನು ತೇರ್ಗಡೆಯಾಗುವುದರ ಮೂಲಕ ವಿಶೇಷ ಸಾಧನೆ ಮಾಡಿದ ಶಿಲ್ಪ ಎಂ.ಕೆ , ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಆರು ನೂರು ಅಂಕಗಳಿಗೆ ಆರು ನೂರು ಅಂಕಗಳನ್ನು ಪಡೆದ ರಕ್ಷಿತಾ ಸಿ.ಪಿ, ಶಶಾಂಕ್ ಬಿ, ಮನೋಜ್ ಎಸ್.ಆರ್, ಅವನೀಶ್ ಕೆ, ಚಿನ್ಮಯಿ, ಅಪರ್ಣ ಬಾಳಿಗ, ಶ್ರೇಯಸ್ ಎಚ್, ಶ್ರೀರಕ್ಷಾ , ಸಿಂಚನಾ ಲಕ್ಷ್ಮಿ, ಅಭಿಜ್ಞಾಲಕ್ಷ್ಮಿ, ವಾಣಿಜ್ಯ ವಿಭಾಗದಲ್ಲಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ ಅನನ್ಯ ಪಿ, ಕಲಾವಿಭಾಗದಲ್ಲಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ ಪಂಚಮಿ ಕುಮಾರಿ ಇವರನ್ನು ಶಾಲು ಹೊದಿಸಿ ಕಡತ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಾದ ಶಿಲ್ಪ ಎಂ.ಕೆ, ಗಣೇಶಕೃಷ್ಣ ಮತ್ತು ಅಮೃತ ಭಟ್ ಮಾತನಾಡಿ ಈ ಕಾಲೇಜಿನಲ್ಲಿ ದೊರೆತ ನಿರಂತರ ಪ್ರೋತ್ಸಾಹವೇ ನಮ್ಮ ಯಶಸ್ಸಿಗೆ ಕಾರಣ. ಉಪನ್ಯಾಸಕರ ಪಠ್ಯಕ್ರಮ, ಸಲಹೆ ಸೂಚನೆಗಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಸಹಕಾರಿಯಾಗಿವೆ. ಉತ್ತಮ ಶಿಕ್ಷಣವನ್ನು ನೀಡಿದ ವಿದ್ಯಾಸಂಸ್ಥೆ, ಗುರುಹಿರಿಯರು ಮತ್ತು ಪ್ರೋತ್ಸಾಹಿಸಿದ ಹೆತ್ತವರಿಗೆ ಕೃತಜ್ಞರಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ ಶಾಸ್ತ್ರೀ ಮಾತನಾಡಿ ಸಾಧಕ ವಿದ್ಯಾರ್ಥಿಗಳಿಗೆ ಮಾಡುವ ಸನ್ಮಾನಗಳು ಎಲ್ಲರ ಪಾಲಿಗೆ ಆಶೀರ್ವಾದವಾಗಿ ಪರಿಣಮಿಸಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿ. ಎಲ್ಲರೂ ಉನ್ನತ ಗುರಿಯನ್ನು ತಲುಪಿ ದೇಶಸೇವೆಯನ್ನು ಮಾಡುವಂತಾಗಬೇಕು. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿರಲಿ ಎಂದು ಹಾರೈಸಿದರು.

ಬಳಿಕ 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ, ವಿಜ್ಞಾನ, ಕಲಾ, ಕ್ರೀಡೆ ಮತ್ತು ಚಿಗುರು ಸಂಘ ಆಯೋಜಿಸಿದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶಶಿಕಲಾ ದೇವಿ, ಸಂಚಾಲಕ ಸಂತೋಷ್ ಬಿ, ಸದಸ್ಯೆ ವತ್ಸಲಾರಾಜ್ಞಿ, ರವಿ ಮುಂಗ್ಲಿಮನೆ, 2020-21 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಯೂರ್ ಬಿ.ಜಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ದಯಾಮಣಿ ಕಾರ್ಯಕ್ರಮವನ್ನು ನಿರೂಪಿಸಿ ಆಂಗ್ಲ ವಿಭಾಗದ ಮುಖ್ಯಸ್ಥ ಪರಮೇಶ್ವರ ಶರ್ಮ ವಂದಿಸಿದರು.