ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಶ್ರೀಕರ್ ಪ್ರಭು ಆರಿಸಿ ; ಪ್ರಧಾನಿ ನರೇಂದ್ರ ಮೋದಿ ನನಗೆ ಆದರ್ಶ – ಶಂಖಧ್ವನಿ ಮೂಲಕ ಚುನಾವಣಾ ಘೋಷಣೆ – ಕಹಳೆ ನ್ಯೂಸ್
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನನಗೆ ಆದರ್ಶ, ಅವರ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ ಮಂಗಳೂರಿನ ಜನತೆ ನನಗೆ ಅವಕಾಶ ನೀಡಿ ಶಾಸಕನಾಗಿ ಆಯ್ಕೆ ಮಾಡಿದಲ್ಲಿ ಮೋದಿ ಅವರಂತೆಯೇ ಹಗಲು ರಾತ್ರಿ ಜನಸೇವೆಗೆ ಮುಂದಾಗುತ್ತೇನೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಹೇಳಿದ್ದಾರೆ.
ತಮ್ಮ ಅಂತಿಮ ಹಂತದ ಚುನಾವಣಾ ಪ್ರಚಾರದ ಪ್ರಯುಕ್ತ ಗುರುವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಕ್ಷೇತರ ಅಭ್ಯರ್ಥಿಗೆ ಚುನಾವಣೆ ಎದುರಿಸಬೇಕಾದರೆ ಧೈರ್ಯ ಬೇಕು. ನನಗೆ ಆ ಧೈರ್ಯ ಇದೆ. ಸೇವಾ ಮನೋಭಾವ ಮತ್ತು ನನ್ನ ತಾಯಿಯೇ ನನ್ನ ಧೈರ್ಯ. ನನ್ನ ಮೇಲೆ ಸುಳ್ಳು ಆಪಾದನೆ ಹಾಕಿದರೂ ನನ್ನ ಪಕ್ಷದ ಅನ್ಯಾಯದ ಬಗ್ಗೆ ಸುಮ್ಮನ್ನಿದ್ದು, ಇದೀಗ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ ಎಂದು ಅವರು ಹೇಳಿದರು.
ನಾನು ಕೆಲಸ ಮಾಡಿದ ಪಕ್ಷದ ಸಿದ್ಧಾಂತ ಸತ್ತು ಹೋಗಿದೆ. ನಾನು ಆ ಸಿದ್ದಾಂತವನ್ನು ತೆಗೆದುಕೊಂಡು ಹೊರಗೆ ಬಂದಿದ್ದೇನೆ. ಈಗ ಅದೇ ಸಿದ್ಧಾಂತದಡಿ ಚುನಾವಣೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಈಗ ಈ ಸೇವೆಯನ್ನು ಮುಂದುವರಿಸಲು ನನಗೆ ಶಕ್ತಿ ನೀಡಲು ಚುನಾವಣೆಗೆ ನಿಂತಿದ್ದೇನೆ ಎಂದ ಹೇಳಿದರು.
ಮಂಗಳೂರು ನಗರ ಅಭಿವೃದ್ಧಿ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಶೇ 30ರಷ್ಟು ಮನೆಗಳಿಗೆ ಮಾತ್ರ ಮೂಲಭೂತ ಸೌಕರ್ಯ ಇದೆ. ಉಳಿದಂತೆ ದಾರಿ ದೀಪ, ರಸ್ತೆಯ ಅವಸ್ಥೆ ಇನ್ನೂ ಸ್ವಾತಂತ್ರ್ಯ ಪೂರ್ವದ ಥರಾ ಇದೆ. ಇದಕ್ಕೆ ಈಗಿನ ಜನಪ್ರತಿನಿಧಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಿನ ಅಭ್ಯರ್ಥಿಗಳು ಚುನಾವಣೆಯಲ್ಲಿ ಮತ ಕೇಳುವುದು ಬಿಡಿ, ಸ್ಪರ್ಧಿಸಲೂ ಯೋಗ್ಯರಲ್ಲ. ಮಂಗಳೂರು ಮಾರುಕಟ್ಟೆ, ಬಸ್ನಿಲ್ದಾಣ ಯಾವುದೂ ಮಾಡಿಲ್ಲ. ಹೈಟೆಕ್ಮಾಡುತ್ತೇನೆ ಎಂದು ಹೇಳುತ್ತಾರೆ. ಒಳ್ಳೆಯ ರಸ್ತೆ, ಫುಟ್‌ಪಾತ್, ಬಸ್ನಿಲ್ದಾಣ, ಮಾರುಕಟ್ಟೆ ಇಲ್ಲದೆ ಹೈಟೆಕ್ಸಿಟಿ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ಎಲ್ಲ ಕಾಮಗಾರಿಯಲ್ಲಿ ಗೋಲ್‌ಮಾಲ್, ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ನೇರ ಕಾರಣ ಚುನಾಯಿತ ಪ್ರತಿನಿಧಿಗಳು. ಇವರ ಹಗರಣ ತನಿಖೆಯಾಗುವುದು ಖಚಿತ. ತನಿಖೆಯಾದರೆ ಇವರು ಜೈಲಿಗೆ ಹೋಗುವುದು ಖಂಡಿತ. ನಮ್ಮ ಜನಪ್ರತಿನಿಧಿಗಳನ್ನು ಜೈಲಿಗೆ ಹೋಗಿ ನೋಡುತ್ತೀರಾ… ಅಥವಾ ನನ್ನಂತಹ ನಿಸ್ವಾರ್ಥ, ಭ್ರಷ್ಟಾಚಾರ ರಹಿತ ಅಭ್ಯರ್ಥಿಗೆ ಮತಹಾಕುತ್ತೀರಾ ಎಂದು ಪ್ರಶ್ನಿಸಿದರು.
ಆಟೋ ರಿಕ್ಷಾದ ತರ ದಿನದ ಎಲ್ಲ ಸಮಯದಲ್ಲೂ ಅಮೂಲ್ಯ ಸೇವೆ ನೀಡಲು ನಾನು ಸದಾ ಬದ್ಧ. ನನಗೆ ಮಂಗಳೂರಿನ ಅಭಿವೃದ್ಧಿ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ಬಡವರ ಬಗ್ಗೆ ಕಾಳಜಿ ಇದೆ. ನಿಮ್ಮೆಲ್ಲರಿಗೂ ನಾನು ಸದಾ ಲಭ್ಯ ಇರುತ್ತೇನೆ ಎಂದು ಶ್ರೀಕರ ಪ್ರಭು ಹೇಳಿದರು.ಈ ಬಾರಿಯ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದರೆ ನನ್ನ ಹೆಚ್ಚಿನ ಸಮಯವನ್ನು ಜನರೊಂದಿಗೆ ಕಳೆಯುತ್ತೇನೆ. ಈ ಮೂಲಕ ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ಥೆನೆ. ಕ್ಷೇತ್ರದ ಜನರೇ ನನಗೆ ಆಸ್ತಿ. ಅವರ ಸಮಸ್ಯೆ- ಕುಂದು ಕೊರತೆಗಳಿಗೆ ಸ್ಪಂದಿಸುವುದು ನನ್ನ ಆದ್ಯತೆ ಎಂದು ಹೇಳಿದರು. ಲೈಟ್ ಹೌಸ್ ಹಿಲ್ ರಸ್ತೆಗೆ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ ಮತ್ತು ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರನ್ನು ನಾಮಕರಣ ಮಾಡುವುದಾಗಿ ಭರವಸೆ ನೀಡಿದರು.
ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಸುದರ್ಶನ್ ಭಟ್ ಸಮಾವೇಶವನ್ನು ಉದ್ಘಾಟಿಸಿದರು.ಶ್ರೀಕರ ಪ್ರಭು ಒಬ್ಬ ಅಸಲಿ ಹಿಂದುತ್ವವಾದಿ. ಅವರ ನೈಜ ನಾಯಕತ್ವಕ್ಕೆ ಜನ ಬೆಂಬಲ ನೀಡಬೇಕು. ಇದು ಧರ್ಮ ಮತ್ತು ಅಧರ್ಮದ ನಡುವಿನ ಚುನಾವಣೆಯಾಗಿದ್ದು, ಮತದಾರರು ಶ್ರೀಕರ ಪ್ರಭು ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಪ್ರಸ್ತಾವನೆಗೈದ ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷ ಕೆ.ಪಿ. ಶೆಟ್ಟಿ ಬೇಡೆಮಾರ್, ಶ್ರೀಕರ ಪ್ರಭು ಅವರಿಗೆ ಪಕ್ಷದಿಂದ ಅನ್ಯಾಯವಾಗಿದೆ. ಅವರಲ್ಲಿ ಯುವ ಶಕ್ತಿ ಇದೆ ಎಂದು ಹೇಳಿದರು. ಆರ್. ಕೆ. ಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೊದಲ ಬಾರಿ ಮತದಾನ ಮಾಡುವವರಿಗೆ ತಮ್ಮ ಚಿಹ್ನೆಯಾದ ಆಟೋ ರಿಕ್ಷಾ ಮಾದರಿಗಳನ್ನು ವಿತರಿಸಲಾಯಿತು. ಮೊದಲ ಬಾರಿ ಮತ ಚಲಾಯಿಸುವ ಐಶ್ವರ್ಯಾ ನಾಯಕ್, ಶ್ರೀಕರ್ ಪ್ರಭು ಬೆಂಬಲವಾಗಿ ಕೆಲ ಮಾತುಗಳನ್ನು ಆಡಿದರು.
ಶ್ರೀಕರ್ ಪ್ರಭು ಅವರ ತಾಯಿ ಚಿತ್ರಕಲಾ ಪ್ರಭು, ಶ್ರೀಲತಾ ಗೋಪಾಲಕೃಷ್ಣ, ಪ್ರೇಮ್ ಚಂದ್ರ ಎಸ್., ರಘುನಾಥ್ ಮಾಬೆನ್, ವಸಂತ್ ಪ್ರಭು, ಸುರೇಶ್, ಅಶ್ವಿತ್ ಕುಮಾರ್, ಜೈರಾಮ್ ಕಾಮತ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮ್ ಮೋಹನ್ ಸ್ವಾಗತಿಸಿ ಸುರೇಶ್ ಶೆಟ್ಟಿ ವಂದಿಸಿದರು. ಅವಿನಾಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.