ಕಠ್ಮಂಡು: ಸೀತಾ ದೇವಿಯ ಜನ್ಮ ಸ್ಥಳವಾದ ಜನಕಪುರದಿಂದ ಆಯೋಧ್ಯೆಗೆ ಸಂಪರ್ಕ ಕಲ್ಪಿಸುವ ಬಸ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
2 ದಿನ ನೇಪಾಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಜನಕಪುರದ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ನೇಪಾಳ ಪ್ರಧಾನಮಂತ್ರಿ ಶರ್ಮಾ ಓಲಿ ಮತ್ತು ನರೇಂದ್ರ ಮೋದಿ ಜನಕಪುರ, ಅಯೋಧ್ಯೆ ನಡುವಿನ ಬಸ್ ಸೇವೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮೋದಿ, ಸೀತಾ ಮಾತೆಯ ಜನ್ಮ ಸ್ಥಳಕ್ಕೆ ಬಂದು ಪುನೀತನಾಗಿದ್ದೇನೆ. ರಾಮಾಯಣದ ಸಕ್ರ್ಯೂಟ್ ಅನ್ನು ಬೆಸೆಯಲು ಎರಡೂ ದೇಶಗಳು ಶ್ರಮಿಸಲಿವೆ ಎಂದು ತಿಳಿಸಿದರು.
ಏನಿದು ರಾಮಾಯಣ ಸಕ್ರ್ಯೂಟ್?
ಧಾರ್ಮಿಕ ಪ್ರವಾಸಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಲು ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ರಾಮಾಯಣ ಸಕ್ರ್ಯೂಟ್ ಒಂದಾಗಿದ್ದು, ಇದರ ಅಡಿಯಲ್ಲಿ ರಾಮಾಯಣ ಕಥೆಗೆ ಸಂಬಂಧಿಸಿದ 15 ಪ್ರವಾಸಿ ಜಾಗಗಳನ್ನು ಸಂಪರ್ಕಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.
ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಶಾದ ಮಹೇಂದ್ರ ಗಿರಿ, ಛತ್ತೀಸ್‍ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸಕ್ರ್ಯೂಟ್‍ನಲ್ಲಿರಲಿದೆ.
ಸೀತಾ ಮಾತೆಯ ಮಂದಿರವನ್ನು 1910ರಲ್ಲಿ ನಿರ್ಮಿಸಲಾಗಿದೆ. ಮೂರು ಮಹಡಿಯ ಮಂದಿರವನ್ನು ಕಲ್ಲು ಮತ್ತು ಮಾರ್ಬಲ್ ಗಳಿಂದ ಕಟ್ಟಲಾಗಿದೆ. 50 ಮೀಟರ್ ಎತ್ತರವಿರುವ ಮಂದಿರವು 4860 ಚದುರ ಅಡಿಯಲ್ಲಿ ವ್ಯಾಪಿಸಿದೆ.