ಪುತ್ತೂರು: ಕೊರೋನಾದಂತಹ ಸಂಕಷ್ಟದ ಕಾಲದಲ್ಲಿ ವಿದ್ಯಾರ್ಥಿ ಶಕ್ತಿಯನ್ನು ಸದ್ಬಳಕೆ ಮಾಡಬೇಕು. ಮುನ್ನಲೆಯ ಕಾರ್ಯಕರ್ತರಾಗಿ ಅವರ ಸೇವೆಯನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಅಪರಿಮಿತವಾದ ಸಾಮಥ್ರ್ಯವಿದೆ ಎಂಬುದನ್ನು ಗುರುತಿಸಿ ಅದನ್ನು ಉಪಯೋಗಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಆಗ ಬೆಟ್ಟದಂತಹ ಸವಾಲನ್ನೂ ಎದುರಿಸುವ ಯೋಗ್ಯತೆ ನಮ್ಮದಾಗುವುದಕ್ಕೆ ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್ ಹೇಳಿದರು. ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸುಮಾರು ಎರಡು ವಾರಗಳ ಕಾಲ ನಡೆದ ಪ್ರಬೋಧನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಲಿಕೆ ಅನ್ನುವುದು ನಿರಂತರವಾದ ಪ್ರಕ್ರಿಯೆ. ಅದಕ್ಕೆ ಕೊನೆಯೆಂಬುದಿಲ್ಲ. ನಿಷ್ಕ್ರಿಯವಾಗಿರುವ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಚೈತನ್ಯ ಪೂರ್ಣರಾಗಿರಬೇಕು. ವಿದ್ಯಾರ್ಥಿಗಳ ಕಲಿಕಾ ಕೌಶಲ್ಯಗಳನ್ನು ಬಳಸಿಕೊಳ್ಳುವಲ್ಲಿ ಶಿಕ್ಷಣ ಕ್ಷೇತ್ರ ವಿಫಲವಾಗಿದೆ ಎಂಬುದು ವಿಷಾದನೀಯ ಎಂದರಲ್ಲದೆ ವಿದ್ಯಾರ್ಥಿ ದೆಸೆಯಲ್ಲಿ ದೊರಕುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮುಂದುವರೆಯಬೇಕು. ಕಾಲೇಜೆಂಬುದು ಕೇವಲ ಪಠ್ಯವಿಚಾರಗಳ ಕೇಂದ್ರವಷ್ಟೇ ಅಲ್ಲ. ಅಸಂಖ್ಯ ಪಠ್ಯೇತರ ವಿಚಾರಗಳೂ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಲೇ ಇರುತ್ತವೆ. ಅವುಗಳಲ್ಲೆಲ್ಲ ತಮ್ಮ ಇರುವಿಕೆಯನ್ನು ವಿದ್ಯಾರ್ಥಿಗಳು ತೋರಬೇಕು ಎಂದು ಸಲಹೆ ನೀಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್.ಎ ಮಾತನಾಡಿ ಕೌಶಲ್ಯಗಳು ಮನುಷ್ಯನಿಗೆ ಅತೀ ಅಗತ್ಯವಾದದ್ದು. ಹಾಗಾಗಿ ಅಂತಹ ಕೌಶಲ್ಯಭರಿತ ಶಿಕ್ಷಣವನ್ನೇ ವಿದ್ಯಾರ್ಥಿಗಳಿಗೆ ನೀಡಬೇಕೆಂಬುದು ಅಂಬಿಕಾ ಸಂಸ್ಥೆಯ ಗುರಿಯಾಗಿದೆ. ಆ ನೆಲೆಯಿಂದ ಅನೇಕ ಕಾರ್ಯ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ವಿದ್ಯಾರ್ಥಿಗಳೆಲ್ಲರೂ ಇಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯಕ್ತಿತ್ವನ್ನು ಅರಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಕಾಲಕ್ಕೆ ಅನುಗುಣವಾಗಿ ನಮ್ಮನ್ನು ನಾವು ರೂಪಿಸಿಕೊಳ್ಳುವುದು ಅನಿವಾರ್ಯ. ಕೊರೋನಾದಿಂದಲಾಗಿ ಪಾರಂಪರಿಕ ಶಿಕ್ಷಣ ವ್ಯವಸ್ಥೆ ಅಸ್ತವ್ಯಸ್ತವೆನಿಸಿದೆ. ಹೀಗಿರುವಾಗ ಪರ್ಯಾಯ ಮಾರ್ಗಗಳ ಮೂಲಕ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲಿದೆ. ಈ ನೆಲೆಯಿಂದಲೇ ಪ್ರಬೋಧನ ಶಿಬಿರ ರೂಪುತಳೆದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ತನ್ನನ್ನು ತಾನು ಅರಿಯುವುದೇ ನಿಜವಾದ ಶಿಕ್ಷಣ. ಅಂತಹ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡುವಂತಾಗಬೇಕು. ವ್ಯಕ್ತಿಯಲ್ಲಿ ತಾಳ್ಮೆ, ಅತ್ಯುತ್ತಮ ಸಂಸ್ಕಾರ, ಮಾದರಿ ಜೀವನಶೈಲಿಯನ್ನು ತುಂಬುವ ಶಿಕ್ಷಣ ನಮಗಿಂದು ಬೇಕಿದೆ ಎಂದರಲ್ಲದೆ ಮನುಷ್ಯನ ಸಾಮಥ್ರ್ಯ ಅಪರಿಮಿತವಾದದ್ದು. ಅದನ್ನು ಬಳಸುವ ಕಲೆಯನ್ನು ಕಲಿತುಕೊಳ್ಳಬೇಕು ಎಂದು ಹೇಳಿದರು.
ವಿವಿಧ ಸಂದರ್ಭಗಳಲ್ಲಿ ಆಯೋಜಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜ್ಞಾನ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನವನ್ನು ಪ್ರಥಮ ಬಿಎಯ ಅನಘಾ ಪಡೆದರೆ, ದ್ವಿತೀಯ ಸ್ಥಾನವನ್ನು ಪ್ರಥಮ ಬಿಎಯ ನಯನಾ ಪಡೆದರು. ತೃತೀಯ ಸ್ಥಾನವನ್ನು ದ್ವಿತೀಯ ಬಿ.ಎಯ ವೈಷ್ಣವೀ ಜೆ ರಾವ್ ಪಡೆದುಕೊಂಡರು. ರಾಮರಕ್ಷಾ ಸ್ತೋತ್ರ ಪಠಣ ಸ್ಪರ್ಧೆಯಲ್ಲಿ ದ್ವಿತೀಯ ಬಿಎಸ್ಸಿಯ ಕೃಷ್ಣ ಕಿಶೋರ್ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಬಿ.ಎಯ ಪ್ರಕೃತಿ ದ್ವಿತೀಯ ಸ್ಥಾನ ಪಡೆದರು. ವಿದ್ಯಾರ್ಥಿನಿ ವೈಷ್ಣವೀ ಜೆ ರಾವ್ ಸ್ವಾಗತಿಸಿ, ಅನಘಾ ವಂದಿಸಿದರು. ವಿದ್ಯಾರ್ಥಿ ಕಾರ್ತಿಕ್ ಶಿಬಿರದ ವರದಿ ವಾಚಿಸಿದರು. ವಿದ್ಯಾರ್ಥಿನಿ ಸಾಯಿಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು.