ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ – ಆರೋಪಿ ಪತಿಗೆ ಇಂದು ಶಿಕ್ಷೆ ಪ್ರಕಟ – ಕೊಲೆಯ ಹಿಂದಿನ ಕಹನಿಯೇ ಭಯಾನಕ..? – ಕಹಳೆ ನ್ಯೂಸ್
ಕಳೆದ ವರ್ಷ ನಾಗರಹಾವಿನಿಂದ ಕಚ್ಚಿಸಿ ಪತಿಯು ತನ್ನ ಪತ್ನಿಯನ್ನು ಕೊಲೆಗೈದ ಪ್ರಕರಣವೊಂದು ಕೇರಳದಲ್ಲಿ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಇದೀಗ ಈ ಪ್ರಕರಣದಲ್ಲಿ ಮೃತಪಟ್ಟ ಉತ್ತರಾ ಅವರ ಪತಿಗೆ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿಸಿದ್ದು, ಆತನಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಿದೆ. ಉತ್ತರಾ ಅವರ ಪತಿ ಸೂರಜ್ ಅವರು ಮೇ 7, 2020ರಂದು ನಾಗರ ಹಾವನ್ನು ಬಳಸಿ ಆಕೆಯನ್ನು ಕೊಂದಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಕೊಲ್ಲಂನಲ್ಲಿರುವ ಆಕೆಯ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದರು.
ಪ್ರಾಸಿಕ್ಯೂಷನ್ ಪ್ರಕಾರ, ಸೂರಜ್ ಅವರ ಮನೆಯಲ್ಲಿ ಈ ಹಿಂದೆ ಸಹ ಉತ್ತರಾಗೆ ಹಾವು ಕಚ್ಚಿದ್ದು, ಆಕೆ ಒಟ್ಟು ಎರಡು ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರಿ ವಕೀಲರಾದ ಜಿ. ಮೋಹನ್ ರಾಜ್ ಅವರು ತಿಳಿಸಿರುವಂತೆ, ಉತ್ತರಾ ವಿಕಲಚೇತನರಾಗಿದ್ದು, ಮದುವೆಯ ಸಂದರ್ಭದಲ್ಲಿ ಚಿನ್ನ, 4 ಲಕ್ಷ ರೂಪಾಯಿ ಮತ್ತು ಒಂದು ಕಾರನ್ನು ಸೂರಜ್‍ಗೆ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಉತ್ತರಾ ಅವರ ತಂದೆ ಕೂಡ ಪ್ರತಿ ತಿಂಗಳು ಸುಮಾರು 8000 ರೂಪಾಯಿಗಳನ್ನು ನೀಡುತ್ತಿದ್ದರು. ಸೂರಜ್ ಈ ಎಲ್ಲಾ ಹಣವನ್ನು ತಾನೇ ಪಡೆಯಬೇಕೆಂದು ಈ ಅಪರಾಧವನ್ನು ಎಸಗಿದ್ದಾನೆ. . ಪ್ರಾಸಿಕ್ಯೂಷನ್ ವಾದದ ಪ್ರಕಾರ, ಸೂರಜ್ ನಾಗರ ಹಾವನ್ನು ಖರೀದಿಸಿ ಮತ್ತು ಅದಕ್ಕೆ ಮಾದಕ ದ್ರವ್ಯ ನೀಡಿದ ನಂತರ ಉದ್ದೇಶಪೂರ್ವಕವಾಗಿ ಅದನ್ನು ಕಚ್ಚುವಂತೆ ಮಾಡಿದ್ದನು ಎಂದು ಹೇಳಲಾಗುತ್ತಿದೆ. ಮಾರ್ಚ್ 3, 2020 ರಂದು, ಉತ್ತರಾಗೆ ಮೊದಲ ಬಾರಿ ಹಾವು ಕಚ್ಚಿದ್ದು, ಸೂರಜ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬ ಮಾಡಲು ಪ್ರಯತ್ನಿಸಿದ್ದನು. “ಹಾವು ಕಚ್ಚಿದ್ದರಿಂದ ಅವಳು ಸುಮಾರು 52 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಳು. ಪತಿ ಸೂರಜ್ ಅವಳೊಂದಿಗೆ ಆಸ್ಪತ್ರೆಯಲ್ಲಿಯೇ ಇದ್ದನು. ಅದೇ ಸಮಯದಲ್ಲಿ, ಆತ ತನ್ನ ಮೊಬೈಲ್ ಫೋನ್ ನಲ್ಲಿ ನಾಗರ ಹಾವುಗಳಿಗಾಗಿ ಹುಡುಕುತ್ತಿದ್ದನು” ಎಂದು ಪ್ರಾಸಿಕ್ಯೂಷನ್ ಅವರು ತಿಳಿಸಿದ್ದಾರೆ.
ಸೂರಜ್‍ನ ಮೊಬೈಲ್‍ನಿಂದ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಆತ ನಾಗರ ಹಾವು ಮತ್ತು ವಿಷಪೂರಿತ ಹಾವುಗಳಿಗಾಗಿ ಹುಡುಕಾಟ ನಡೆಸಿರುವುದು ಬಹಿರಂಗವಾಗಿದೆ. ಮಾರ್ಚ್ 10, 2020 ರಂದು ಸೂರಜ್ ನಾಗರ ಹಾವಿನ ವಿಷ ಹೊರ ತೆಗೆಯುವ ಕುರಿತು ನಾಲ್ಕು ಬಾರಿ ವೀಡಿಯೊವನ್ನು ವೀಕ್ಷಿಸಿದ್ದಾನೆ. ಮೇ 7 ರಂದು ಸೂರಜ್ ಮತ್ತು ಉತ್ತರಾ ಇಬ್ಬರೇ ಮನೆಯಲ್ಲಿದ್ದರು. ಹಿಂದಿನ ದಿನ, ಸೂರಜ್ ಚೀಲದಲ್ಲಿ ಅವನು ನಾಗರ ಹಾವನ್ನು ತಂದಿರುವುದಾಗಿ ವರದಿಯಾಗಿದೆ. ಉತ್ತರಾಳನ್ನು ಆಸ್ಪತ್ರೆಗೆ ಕರೆದೊಯ್ದಾಗ, ಪತಿ ಸೂರಜ್ ವೈದ್ಯರಿಗೆ ಹಾವು ಕಚ್ಚಿದ ಗುರುತಿನ ಬಗ್ಗೆ ವೈದ್ಯರಿಗೆ ತಿಳಿಸಿದ್ದನು ಎಂದು ನ್ಯಾಯಾಲಯ ತಿಳಿಸಿದೆ.
ಇದೆಲ್ಲದರ ಮಧ್ಯೆ ಸೂರಜ್ ಪರ ವಕೀಲರು ಇದು ನೈಸರ್ಗಿಕ ಹಾವು ಕಡಿತದ ಪ್ರಕರಣವಾಗಿದೆ ಇದರಲ್ಲಿ ಯಾವುದೇ ಪ್ರಚೋದನೆಯಿಲ್ಲ ಎಂದು ವಾದಿಸಿದ್ದರು. ಆದರೆ ಇದೀಗ ಸೂರಜ್‍ನನ್ನ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿಸಿದ್ದು, ಆತನಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಿದೆ.