ಮಂಗಳೂರು ವಿವಿ ಪದವಿ ಪರೀಕ್ಷಾಂಗದ ನಿಯಮಗಳನ್ನು ಗಾಳಿಗೆ ತೂರಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ; ಹರೀಶ್ ಆಚಾರ್ಯ ಆಗ್ರಹ – ಕಹಳೆ ನ್ಯೂಸ್

ಮಂಗಳೂರು : ವಿಶ್ವವಿದ್ಯಾನಿಲಯವು ಈ ಬಾರಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಪರೀಕ್ಷಾಂಗದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅತ್ಯಂತ ಬೇಜಾವಾಬ್ದಾರಿಯಿಂದ ನಡೆಸಿದೆ. ತನ್ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವನ್ನು ನಡೆಸಿದೆ. ಈ ಬಗ್ಗೆ ವಿವಿಯ ಆಡಳಿತವು ಉನ್ನತ ಮಟ್ಟದ ತನಿಖೆಯನ್ನು ನಡೆಸಿ ತಕ್ಷಣವೇ
ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಹರೀಶ್ ಆಚಾರ್ಯ ಒತ್ತಾಯಿಸಿದ್ದಾರೆ.
ಪದವಿ ಪರೀಕ್ಷೆಯ ಯಾವುದೇ ವಿಭಾಗಗಳಲ್ಲಿ ಪರೀಕ್ಷಾ ಮಂಡಳಿಯನ್ನು ರಚಿಸಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ
ಪರೀಕ್ಷೆ ನಡೆಸುವ ಬದಲು ಹಳೆಯ ಪ್ರಶ್ನೆ ಪತ್ರಿಕೆಗಳ ಮೂಲಕವೇ ಪರೀಕ್ಷೆಯನ್ನು ನಡೆಸಲಾಗಿದೆ. ಇದರಿಂದ ಪದವಿ
ಪರೀಕ್ಷೆಗಳನ್ನು ನಡೆಸುವ ಬಗ್ಗೆ ಇರುವ ಪರೀಕ್ಷಾ ನಿಯಮಾವಳಿಯನ್ನು ಉಲ್ಲಂಘಿಸಿ ಪರೀಕ್ಷೆಗಳನ್ನು ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಉದಾಹರಣೆಗೆ ಬಿ.ಎಸ್ಸಿ (ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಶನ್) ಪದವಿಯ ೬ನೇ ಸೆಮಿಸ್ಟರ್ ಹೆರಿಟೇಜ್ ಕನ್‌ರ‍್ವೇಶನ್ ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲಾ
ಏಳು ಪ್ರಶ್ನೆಗಳು ಡಿಸೆಂಬರ್ ೨೦೨೦ರ ಪ್ರಶ್ನೆಪತ್ರಿಕೆಯ ಪ್ರಶ್ನೆಗಳು ಪುನರಾವರ್ತನೆಯಾಗಿವೆ. ಇದು ಹೇಗೆ ಸಾಧ್ಯ. ಮಾತ್ರವಲ್ಲದೇ ಇದು ಹಳೆಯ ಪಠ್ಯಕ್ರಮ ಮತ್ತು ಹಳೆಯ ಪ್ರಶ್ನೆ ಪತ್ರಿಕೆ ಮಾದರಿಯದ್ದಾಗಿದೆ. ಆದರೆ ಈ ಬಗ್ಗೆ
ವಿಶ್ವವಿದ್ಯಾನಿಲಯದ ಉನ್ನತ ಅಧಿಕಾರಿಗಳು ದಿನಪತ್ರಿಕೆಯಲ್ಲಿ ಕೇವಲ ಹಳೆಯ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿರುವುದನ್ನು ಒಪ್ಪಿಕೊಂಡಿದ್ದು ಪ್ರಶ್ನೆ ಪತ್ರಿಕೆಯು ಪುನರಾವರ್ತನೆಯಾಗಿರುವುದು ಮತ್ತು ಹಳೆಯ ಪ್ರಠ್ಯಕ್ರಮ
ಅನುಸರಿಸಿದ್ದನ್ನು ಒಪ್ಪಿಕೊಂಡಿರುವುದಿಲ್ಲ. ಮಾತ್ರವಲ್ಲದೇ ಇದುವರೆಗೆ ತಪ್ಪಿತಸ್ಥ ಹೊಣೆಗಾರರ ಬಗ್ಗೆ ಯಾವುದೇ
ಕ್ರಮವಿಡದೇ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇದರಿಂದ ವಿಶ್ವವಿದ್ಯಾನಿಲಯದ ಉನ್ನತ ಮಟ್ಟದ
ಅಧಿಕಾರಿಗಳೇ ನಿರ್ಲಕ್ಷ್ಯ ತೋರಿ ಬೇಜವಾಬ್ದಾರಿಯುತವಾಗಿ ಈ ಬಾರಿಯ ಪರೀಕ್ಷೆಯನ್ನು ನಡೆಸಿದ್ದಾರೆ ಎಂದು ಆಪಾದಿಸಿದ್ದಾರೆ.
ಪದವಿ ಪರೀಕ್ಷೆಗಳನ್ನು ನಡೆಸುವರೇ ಪರೀಕ್ಷಾಂಗದ ನಿಯಮಾವಳಿಯಂತೆ ವಿಷಯವಾರು ಪರೀಕ್ಷಾ
ಮಂಡಳಿಯನ್ನು ರಚಿಸುವರೇ ಸಿಂಡಿಕೇಟ್ ಸಭೆಯು ನಿರ್ಧರಿಸುತ್ತದೆ. ಸದರಿ ನಿರ್ಣಯದಂತೆ ರಚಿಸಿರುವ ಪರೀಕ್ಷಾ ಮಂಡಳಿಯ ವಿವರ, ಸದರಿಯವರ ನೇಮಕಕ್ಕೆ ಸಂಬಂಧಿಸಿದಂತೆ ಕಳುಹಿಸಿರುವ ನೇಮಕಾತಿ ಪತ್ರಗಳು, ವಿಷಯವಾರು
ಪರೀಕ್ಷಾ ಮಂಡಳಿಯ ಸಭೆಯ ವಿವರಗಳು ಹಾಗೂ ಅವರು ಅನುಮೋದಿಸಿ ಪರೀಕ್ಷಾಂಗ ಇಲಾಖೆಗೆ ರಹಸ್ಯವಾಗಿರಿಸಿ
ಕಳುಹಿಸಿಕೊಟ್ಟಿರುವ ಪ್ರಶ್ನೆಪತ್ರಿಕೆಗಳ ಬಗ್ಗೆ ಸೂಕ್ತ ತನಿಖೆಯಾಗಬೇಕಾಗಿದೆ. ಬಹಳ ಮುಖ್ಯವಾಗಿ ಬಿ.ಎಸ್ಸಿ
(ಇಂಟೀರಿಯರ್ ಡಿಸೈನ್ ಎಂಡ್ ಡೆಕೊರೇಶನ್) ಪದವಿಯ ಆರನೇ ಸೆಮಿಸ್ಟರ್‌ನ ಹೆರಿಟೇಜ್ ಕನ್‌ರ‍್ವೇಶನ್ ಪ್ರಶ್ನೆ
ಪತ್ರಿಕೆಯನ್ನು ರಚಿಸಿ ಪರೀಕ್ಷಾಂಗ ಇಲಾಖೆಗೆ ಕಳುಹಿಸಿರುವ ಪರೀಕ್ಷಾ ಮಂಡಳಿಯ ವಿವರವನ್ನು ಬಹಿರಂಗ ಪಡಿಸಬೇಕು.
ಈ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಸ್ನಾತಕ ವಿಭಾಗವನ್ನು ಬಿಟ್ಟು ಸ್ನಾತಕೋತ್ತರ ವಿಭಾಗದ ಅನ್ಯ ವಿಷಯದ
ಪ್ರಾಧ್ಯಾಪಕರನ್ನು ಅಧ್ಯಕ್ಷರನ್ನಾಗಿ ಹೇಗೆ ನೇಮಿಸಲಾಯಿತು. ಪರೀಕ್ಷಾ ಮಂಡಳಿಯು ಪ್ರಶ್ನೆ ಪತ್ರಿಕೆ ರಚಿಸುವರೇ
ವಿ.ವಿ.ಯು ಕಳುಹಿಸಿರುವ ಸುತ್ತೋಲೆಗಳು, ಅದರಂತೆ ನಡೆದಿರುವ ಮಂಡಳಿ ಸಭೆಗಳು ಹಾಗೂ ರಹಸ್ಯವಾಗಿರಿಸಿ
ವಿಶ್ವವಿದ್ಯಾನಿಲಯಕ್ಕೆ ಸಲ್ಲಿಕೆಯಾಗಿರುವ ಮೂರು ಪ್ರಶ್ನೆ ಪತ್ರಿಕೆಗಳನ್ನು ತನಿಖೆಗೆ ಒಳಪಡಿಸಬೇಕು. ಅಲ್ಲದೆ ಬಹಳ
ಮುಖ್ಯವಾಗಿ ಹಳೆಯ ಪಠ್ಯಕ್ರಮದಲ್ಲಿ ಹಳೆಯ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ರಚನೆಯಾಗಿರುವುದು ಮಾತ್ರವಲ್ಲದೆ ಈ
ವಿಷಯದಲ್ಲಿ ಡಿಸೆಂಬರ್ ೨೦೨೦ರ ಎಲ್ಲಾ ಪ್ರಶ್ನೆಗಳು ಪುನರಾವರ್ತನೆಯಾಗಿರುವುದು ಖಂಡಿತವಾಗಿಯೂ ಪರೀಕ್ಷಾ
ಮಂಡಳಿ ಅಥವಾ ಪರೀಕ್ಷಾಂಗ ಇಲಾಖೆಯು ಈ ಬಗ್ಗೆ ಯಾವುದೇ ಪೂರ್ವ ತಯಾರಿಯನ್ನು ನಡೆಸದೇ ಪರೀಕ್ಷಾಂಗದ
ನಿಯಮಾವಳಿಗಳನ್ನು ಗಾಳಿಗೆ ತೂರಿ ಅತ್ಯಂತ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿ ಪದವಿ ಪರೀಕ್ಷೆಗಳನ್ನು ನಡೆಸಿದೆ ಎಂದು ಆಪಾದಿಸಿದ್ದಾರೆ.
ಇದೇ ರೀತಿಯಾಗಿ ಬೇರೆ ಯಾವುದೇ
ವಿಷಯಗಳಲ್ಲಿಯೂ ಪರೀಕ್ಷಾ ನಿಯಾಮಾವಳಿಯನ್ನು ಅನುಸರಿಸದೆ ಪ್ರಶ್ನೆ ಪತ್ರಿಕೆಗಳನ್ನು ರಚಿಸದೆ ಹಿಂದೆ ರಚಿಸಿರುವ
ಪ್ರಶ್ನೆ ಪತ್ರಿಕೆಗಳ ಮೂಲಕವೇ ಪರೀಕ್ಷೆ ನಡೆಸಿರುವುದು ಕಂಡು ಬಂದಿದೆ. ಆದುದರಿಂದ ಪ್ರಸ್ತುತ ನಡೆಸಿದ ಪದವಿ ಪರೀಕ್ಷೆಗಳ ಬಗ್ಗೆ ಸಾರ್ವಜನಿಕರಲ್ಲಿ ಹಲವಾರು ರೀತಿಯ ಪ್ರಶ್ನೆಗಳು ಮೂಡಿದ್ದು ತಕ್ಷಣವೇ ವಿಶ್ವವಿದ್ಯಾನಿಲಯದ ಆಡಳಿತವು ಸಾರ್ವಜನಿಕವಾಗಿ ಸೂಕ್ತ ಸ್ಪಷ್ಟನೆಯನ್ನು ನೀಡಿ ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹರೀಶ್ ಆಚಾರ್ಯ ಅವರು ಈ ಮೂಲಕ ಆಗ್ರಹಿಸಿದ್ದಾರೆ