ಕೊರೊನಾ ಹೊಡೆತಕ್ಕೆ ಸಂಪೂರ್ಣ ನೆಲ ಕಚ್ಚಿದ್ದ ಸ್ಯಾಂಡಲ್ ವುಡ್ನಲ್ಲಿ ಸ್ಟಾರ್ ನಟರ ಎರಡು ಸಿನಿಮಾಗಳು ಅದ್ದೂರಿಯಾಗಿ ತೆರೆಕಂಡಿದೆ. ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾ ಅ. 14 ರಂದು ಬಿಡುಗಡೆಯಾಗಿತ್ತು. ಅ. 15 ರಂದು ನಟ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಯಾದ ಕ್ಷಣದಲ್ಲಿಯೇ ಎರಡು ಸಿನಿಮಾಗಳಿಗೂ ಪೈರಸಿ ಹೊಡೆತ ಬಿದ್ದಿದೆ.
ಕೋಟಿಗೊಬ್ಬ -3 ಸಿನಿಮಾ ಬಿಡುಗಡೆಗೂ ಮುನ್ನವೇ ಕನ್ನಡ ರಾಕರ್ಸ್ ಟೆಲಿಗ್ರಾಮ್ ಚಾನೆಲ್ನಲ್ಲಿ ಕೋಟಿಗೊಬ್ಬ- 3 ಸಿನಿಮಾ ವೀಕ್ಷಿಸಲು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಎಂಬ ಸಂದೇಶಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು. ಪೈರಸಿ ಸಂದೇಶಕ್ಕೆ ಹೆದರಿದ್ದ ಕೋಟಿಗೊಬ್ಬ – 3 ನಿರ್ಮಾಪಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಿದ್ದರು. ಪೈರಸಿ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಕೋರಿದ್ದರು. ಈ ಕುರಿತ ದೂರನ್ನು ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ದೂರನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದರು. ಇದರ ಜತೆಗೆ ಸಿಐಡಿ ಸೈಬರ್ ಘಟಕಕ್ಕೂ ದೂರು ನೀಡಲಾಗಿತ್ತು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.
ಇಷ್ಟೆಲ್ಲಾ ಮುನ್ನೆಚ್ಚರಿಕೆ ಕ್ರಮದ ನಡುವೆಯೂ ಕನ್ನಡ ರಾಕರ್ಸ್ ಹೆಸರಿನ ಟೆಲಿಗ್ರಾಮ್ ಚಾನೆಲ್ನಲ್ಲಿ ಎರಡು ಸ್ಟಾರ್ ನಟರ ಸಿನಿಮಾಗಳು ಅದಾಗಲೇ ಟೆಲಿಗ್ರಾಮ್ ಮೂಲಕ ಅಪ್ಲೋಡ್ ಮಾಡಲಾಗಿದೆ. ಸಿನಿಮಾ ಲಿಂಕ್ ಒತ್ತಿ ಲಕ್ಷಾಂತರ ಮಂದಿ ಡೌನ್ಲೋಡ್ ಮಾಡಿ ವೀಕ್ಷಣೆ ಮಾಡಿದ್ದಾರೆ. ಇನ್ನು ಪೈರಸಿ ವಿಚಾರವಾಗಿ ಕೋಟಿಗೊಬ್ಬ -3 ಸಿನಿಮಾ ಲಿಂಕ್ ಅಪ್ಲೋಡ್ ತಾಂತ್ರಿಕ ವಿವರಗಳನ್ನು ಒದಗಿಸುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಐಡಿ ಸೈಬರ್ ಘಟಕದ ಅಧಿಕಾರಿಗಳು ದುಬೈನಲ್ಲಿರುವ ಟೆಲಿಗ್ರಾಮ್ ಆಡಳಿತ ಕಚೇರಿಯ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ. ಈ ಮೂಲಕ ಪೈರಸಿ ಮೂಲ ಹುಡುಕಲು ಮುಂದಾಗಿದ್ದಾರೆ.